ಕೃಷಿಕರ ಹಿತ ಕಾಯುವ ಕೆಲಸ ಮಾಡುತ್ತಿರುವ ಸಿಪಿಸಿಆರ್‌ಐ-ಬಾಳಪ್ಪ ಪೂಜಾರಿ

KannadaprabhaNewsNetwork |  
Published : Jun 20, 2026, 03:00 AM IST
ಫೋಟೋ: ೧೬ಪಿಟಿಆರ್-ಕೃಷಿಸಿಪಿಸಿಆರ್‌ಐ ಪ್ರಾಂತೀಯ ಕ್ಷೇತ್ರ ವಿಟ್ಲ ಇದರ ವತಿಯಿಂದ `ಕೃಷಿ ಉಳಿಸಿ ಅಭಿಯಾನ ನಡೆಸಲಾಯಿತು. | Kannada Prabha

ಸಾರಾಂಶ

ವೈಜ್ಞಾನಿಕ ಸಂಶೋಧನೆಯ ಮೂಲಕ ಕೃಷಿಕರ ಹಿತ ಕಾಯುವ ಕೆಲಸವನ್ನು ಸಿಪಿಸಿಆರ್‌ಐ ಮಾಡುತ್ತಿದೆ. ಕೃಷಿಕರ ಬಳಿಗೆ ಬಂದು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡುವ ಮೂಲಕ ಶ್ಲಾಘನೀಯ ಕಾರ್ಯ ಮಾಡಿದೆ ಎಂದು ಕಡಬ ತಾಲೂಕು ಕೃಷಿಕ ಸಮಾಜದ ನಿರ್ದೇಶಕ, ಹಿರಿಯ ಕೃಷಿಕ ಬಾಳಪ್ಪ ಪೂಜಾರಿ ಬಂಬಿಲದೋಳ ಹೇಳಿದರು.

ಪುತ್ತೂರು: ವೈಜ್ಞಾನಿಕ ಸಂಶೋಧನೆಯ ಮೂಲಕ ಕೃಷಿಕರ ಹಿತ ಕಾಯುವ ಕೆಲಸವನ್ನು ಸಿಪಿಸಿಆರ್‌ಐ ಮಾಡುತ್ತಿದೆ. ಕೃಷಿಕರ ಬಳಿಗೆ ಬಂದು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡುವ ಮೂಲಕ ಶ್ಲಾಘನೀಯ ಕಾರ್ಯ ಮಾಡಿದೆ ಎಂದು ಕಡಬ ತಾಲೂಕು ಕೃಷಿಕ ಸಮಾಜದ ನಿರ್ದೇಶಕ, ಹಿರಿಯ ಕೃಷಿಕ ಬಾಳಪ್ಪ ಪೂಜಾರಿ ಬಂಬಿಲದೋಳ ಹೇಳಿದರು.

ಅವರು ಸೋಮವಾರ ಪಾಲ್ತಾಡಿ ಗ್ರಾಮದ ಮಂಜುನಾಥನಗರ ಶ್ರೀ ಸಿದ್ದಿವಿನಾಯಕ ಸಭಾಭವನದಲ್ಲಿ ಸಿಪಿಸಿಆರ್‌ಐ ಪ್ರಾಂತೀಯ ಕ್ಷೇತ್ರ ವಿಟ್ಲ ವತಿಯಿಂದ ಸಿದ್ದಿವಿನಾಯಕ ಸೇವಾ ಸಂಘ ಮಂಜುನಾಥನಗರ ಇದರ ಸಹಯೋಗದಲ್ಲಿ `ಕೃಷಿ ಉಳಿಸಿ ಅಭಿಯಾನದ ಅಂಗವಾಗಿ ನಡೆದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಸಿಪಿಸಿಆರ್‌ಐ ಹಿರಿಯ ವಿಜ್ಞಾನಿ ಡಾ.ನಾಗರಾಜ್ ಎನ್.ಆರ್ ಅವರು ಮಾತನಾಡಿ, ಕೃಷಿಕರ ಆದಾಯೋತ್ಪನ್ನ ಹೆಚ್ಚುವರಿ ಮಾಡುವ ನಿಟ್ಟಿನಲ್ಲಿ ಸಿಪಿಸಿಆರ್‌ಐ ಇದುವರೆಗೆ ಸುಮಾರು 12 ತಳಿಗಳನ್ನು ಬಿಡುಗಡೆ ಮಾಡಿದೆ. ಮಂಗಳ, ಸುಮಂಗಳ, ಶ್ರೀಮಂಗಳ, ಮೋಹಿತ್ ನಗರ, ಸ್ವರ್ಣ ಮಂಗಳ, ಕಹಿಕುಚಿ, ಮಧುರ ಮಂಗಳ, ನಲಬಾರಿ, ವಿಟಿಎಲ್ ಎಎಚ್-1, ವಿಟಿಎಲ್ ಎಎಚ್-2 ಹಾಗೂ ಶತಮಂಗಳ. 2016ರಲ್ಲಿ ಬಿಡುಗಡೆಯಾದ ಶತಮಂಗಳ ತಳಿಗೆ ಹೆಚ್ಚಿನ ಬೇಡಿಕೆ ಇದೆ. ಇದು ಮಧ್ಯಮ ಎತ್ತರ ತಳಿಯಾಗಿದ್ದು, 2 ರಿಂದ ಎರಡೂವರೆ ವರ್ಷಕ್ಕೆ? ಹಿಂಗಾರ ಬಿಡುತ್ತದೆ. ಕರಾವಳಿಯ ಚಾಲಿ ಅಡಕೆ ಮತ್ತು ಮಲೆನಾಡಿನ ಕೆಂಪಡಕೆ ವರ್ಗಕ್ಕೂ ಈ ತಳಿ ಹೊಂದಿಕೊಳ್ಳುತ್ತದೆ ಎಂದು ಹೇಳಿದ ಅವರು ಪ್ರಮಾಣೀಕೃತ ನರ್ಸರಿಗಳಿಂದ ಉತ್ತಮ ಗಿಡಗಳನ್ನು ಪಡೆದುಕೊಂಡು ಕೃಷಿ ಮಾಡಬೇಕು ಎಂದರು.ಸಿಪಿಸಿಆರ್‌ಐ ಪ್ರಾದೇಶಿಕ ಕೇಂದ್ರದ ವಿಜ್ಞಾನಿ ಡಾ. ಭವಿಷ್ಯ ಅವರು ಅಡಿಕೆಗೆ ಬಾಧಿಸುವ ರೋಗಗಳು ಹಾಗೂ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ರೈತರು ಮಣ್ಣು ಪರೀಕ್ಷೆ ಮಾಡಿಕೊಂಡು ಬಂದ ವರದಿಯ ಮೇಲೆ ಗೊಬ್ಬರಗಳನ್ನು ನೀಡಬೇಕು. ಮಣ್ಣಿನ ರಸಸಾರವನ್ನು ಹೆಚ್ಚಿಸಬೇಕು. ರಸಸಾರ ಕಡಿಮೆ ಇದ್ದರೆ, ಉಪಕಾರಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ, ಬೇಕಾದ ಪೋಷಕಾಂಶಗಳ ಲಭ್ಯತೆ, ಮತ್ತು ಬೇರಿನ ಬೆಳವಣಿಗೆ, ಇವೆಲ್ಲವೂ ಕಡಿಮೆ. ಅಲ್ಲದೆ, ಕಡಿಮೆ ಪ್ರಮಾಣದಲ್ಲಿ ಬೇಕಾಗಿರುವ ಅಲುಮಿನಿಯಂ, ಕಬ್ಬಿಣ ಮತ್ತು ಮ್ಯಾಂಗನೀಸ್ ಅಂಶಗಳ ಲಭ್ಯತೆ ಹೆಚ್ಚು. ಹಾಗಾಗಿ ಮಣ್ಣಿನ ರಸಸಾರವನ್ನು ಹೆಚ್ಚು ಮಾಡಲೇಬೇಕು. ಸುಣ್ಣ ಹಾಕಿದ ಎರಡರಿಂದ ಮೂರು ವಾರಗಳ ನಂತರ ಪೋಷಕಾಂಶಗಳನ್ನು ನೀಡಬಹುದು. ಮಣ್ಣಿಗೆ ಸಾವಯವ ಗೊಬ್ಬರವನ್ನು ಸೇರಿಸುವುದು ಅತಿ ಮುಖ್ಯ. ಇದರಿಂದ ಮಣ್ಣಿನ ಭೌತಿಕ ಗುಣ, ಬೇರಿನ ಬೆಳವಣಿಗೆ, ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ ಎಂದರು.ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷೆ ಇಂದಿರಾ ಬಿ.ಕೆ., ಸವಣೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ ಅವರು ಶುಭಹಾರೈಸಿದರು. ಸಭಾ ಕಾರ್ಯಕ್ರಮದ ಬಳಿಕ ರೈತರೊಂದಿಗೆ ನೇರ ಸಂವಾದ ಪ್ರಾತ್ಯಕ್ಷಿಕೆಗಳು ಹಾಗೂ ತಾಂತ್ರಿಕ ಸಲಹಾ ಕಾರ್ಯಕ್ರಮ ಮಾಹಿತಿ ಕಾರ್ಯಾಗಾರ ನಡೆಯಿತು. ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಹಾಯಕ ಶಿವಪ್ರಕಾಶ್ ಅವರು ಇಲಾಖಾ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ರೈತರಿಗೆ ಟ್ರೈಕೋಡರ್ಮ ವನ್ನು ಸಿಪಿಸಿಆರ್‌ಐ ವಿಟ್ಲ ಇದರ ವತಿಯಿಂದ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ, ನಿರ್ದೇಶಕ ಸುರೇಶ್ ಬಂಬಿಲದೋಳ, ಸವಣೂರು ಕಾಣಿಯೂರು ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಗಿರಿಶಂಕರ ಸುಲಾಯ, ಸವಣೂರು ಗ್ರಾ.ಪಂ.ಮಾಜಿ ಸದಸ್ಯರಾದ ಹರಿಕಲಾ ರೈ, ತಾರಾನಾಥ ಬೊಳಿಯಾಲ, ದಿವಾಕರ ಬಂಗೇರ ಬೊಳಿಯಾಲ, ಸಿದ್ದಿವಿನಾಯಕ ಸೇವಾ ಸಂಘದ ಮಾಜಿ ಅಧ್ಯಕ್ಷ ಈಶ್ವರ ಕೆ.ಎಸ್., ಸಂಜೀವ ಗೌಡ ಪಾಲ್ತಾಡಿ, ಶ್ರೀಧರ ಗೌಡ ಅಂಗಡಿಹಿತ್ಲು, ವಿನಯಚಂದ್ರ ಕೆಳಗಿನಮನೆ, ಸಂಜೀವಿನಿ ಒಕ್ಕೂಟದ ಎಂಬಿಕೆ ಗೀತಾ, ಪಶು ಸಖಿ ಹೇಮಲತಾ ಸಹಿತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಪತ್ರಕರ್ತ ಪ್ರವೀಣ್ ಚೆನ್ನಾವರ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು. ಸಿಪಿಸಿಆರ್‌ಐನ ರಮ್ಯಾ, ಪ್ರಶಾಂತ್, ಕೃಷಿ ಸಖಿ ಜಯಂತಿ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಜೆ.ಟಿ.ಪಾಟೀಲರನ್ನ ಸಂಪುಟದಲ್ಲಿ ಸೇರಿಸಿಕೊಳ್ಳಿ
ನೀರಿಗಾಗಿ ಖಾಲಿ ಕೊಡಗಳೊಂದಿಗೆ ಮಹಿಳೆಯರ ಪ್ರತಿಭಟನೆ