ಕನ್ನಡಪ್ರಭ ವಾರ್ತೆ ಬೀಳಗಿ ಜಿಲ್ಲೆಯ ಮತ್ತು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಕಳೆದ 40 ವರ್ಷದ ಸೇವೆ ಸಲ್ಲಿಸಿರುವ ಶಾಸಕ ಜೆ.ಟಿ.ಪಾಟೀಲ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಬೀಳಗಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಪಕ್ಷದ ಹೈಕಮಾಂಡಗೆ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ಜಿಲ್ಲೆಯ ಮತ್ತು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಕಳೆದ 40 ವರ್ಷದ ಸೇವೆ ಸಲ್ಲಿಸಿರುವ ಶಾಸಕ ಜೆ.ಟಿ.ಪಾಟೀಲ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಬೀಳಗಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಪಕ್ಷದ ಹೈಕಮಾಂಡಗೆ ಮನವಿ ಮಾಡಿದರು.ಪಟ್ಟಣದ ಟಿ.ಎ.ಪಿ.ಸಿ.ಎಂ.ಸಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಲ್ಲಯ್ಯ ಕಂಬಿ, ಶಾಸಕ ಜೆ.ಟಿ.ಪಾಟೀಲ ಸರಳ, ಸಜ್ಜನಿಕೆ ವ್ಯಕ್ತಿತ್ವದ ಜೊತೆಗೆ ಮುತ್ಸದ್ದಿ ರಾಜಕಾರಣಿ. ಪಂಚಾಯತ್ ಮಟ್ಟದಿಂದಲೂ ಪಕ್ಷದ ಕಟ್ಟಾಳುಗಳಾಗಿ ದುಡಿದಿದ್ದು, ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.
ಕಳೆದ ಅವಧಿಯಲ್ಲಿ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನಂತರ ಅವರನ್ನು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಪಾಟೀಲರು, ಸರ್ಕಾರದ ಬೊಕ್ಕಸಕ್ಕೆ ₹ 400 ಕೋಟಿ ಲಾಭ ತಂದು ಕೊಟ್ಟಿದ್ದಾರೆ. ಈ ಬಾರಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ನೀಡಿದರೆ ಪಕ್ಷ ಇನ್ನಷ್ಟು ಬಲಿಷ್ಟ ಆಗಲಿದೆ ಎಂದು ಭರವಸೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಲ್ಲಪ್ಪ ಕಾಳಗಿ ಮಾತನಾಡಿದರು. ಟಿಎಪಿಸಿಎಂಸಿ ಉಪಾಧ್ಯಕ್ಷ ಸಿದ್ದು ಗಿರಗಾಂವಿ, ಸದಸ್ಯರಾದ ದೊಡ್ಡಪ್ಪ, ದೇಸಾಯಿ, ಪಡಿಯಪ್ಪ ತಿರಕನ್ನವರ, ಯಲಗುದರಪ್ಪ, ಬೋರ್ಜಿ, ಬಸಪ್ಪ ಮುದ್ಧವಗೋಳ, ರಂಗಪ್ಪ ಹರಿಜನ, ಪಾರ್ವತಿ ಸಿದ್ದಿಂಗಪ್ಪ ಕೋಲ್ದಾರ, ಸುಪೀಯಾ ಬೇಗಂ ಮುಜಾವರ, ರಂಗಪ್ಪ ತೆಗ್ಗಿ, ಸಂಗನಗೌಡ ಗೌಡರ ಉಪಸ್ಥಿತರಿದ್ದರು.