ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಶಾಸಕ ಸಿ.ಎಸ್‌. ನಾಡಗೌಡರಿಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಮುದ್ದೇಬಿಹಾಳ ಬ್ಲಾಕ್‌ ಕಾಂಗ್ರೆಸ್‌ ತಾಲೂಕಾಧ್ಯಕ್ಷ ಗುರಣ್ಣ ತಾರನಾಳ ನೇತೃತ್ವದಲ್ಲಿ ಶುಕ್ರವಾರ ಕರೆ ನೀಡಿದ್ದ ಮುದ್ದೇಬಿಹಾಳ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಪಟ್ಟಣದ ಎಲ್ಲ ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಸಂಘ ಸಂಸ್ಥೆಯವರು ಪಕ್ಷಾತೀತವಾಗಿ ಬಂದ್‌ ಬೆಂಬಲಿಸಿ ಅಪ್ಪಾಜಿ ಸಿ.ಎಸ್.ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡಲು ಹಕ್ಕೊತ್ತಾಯ ಮಂಡಿಸಿದರು. ಪಟ್ಟಣದ ಎಲ್ಲ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ ಬೆಂಬಲಿಸಿದರು. ಹೀಗಾಗಿ ಜನಸಂಚಾರವಿಲ್ಲದೆ ಪಟ್ಟಣ ಬಿಕೋ ಎನ್ನುತ್ತಿತ್ತು.

ಸಚಿವ ಸ್ಥಾನ ನೀಡದಿದ್ದರೆ ಸಾಮೂಹಿಕ ರಾಜೀನಾಮೆ:

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ತಳಹಂತದ ಚುನಾವಣೆಯಿಂದ ವಿಧಾನಸಭಾ ಚುನಾವಣೆಯವರೆಗೂ ಪಕ್ಷ ಸಂಘಟಿಸಿ ಮುದ್ದೇಬಿಹಾಳ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಗೆ ತೆಗೆದುಕೊಂಡ ಹಿರಿಮೆ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರದು. ಪ್ರತಿ ಬಾರಿಯೂ ಅವರಿಗೆ ಮಂತ್ರಿ ಸ್ಥಾನ ನೀಡದೆ ಅಪಮಾನ ಮಾಡಲಾಗುತ್ತಿದೆ. ಸಂಪುಟ ರಚನೆ ವೇಳೆ ಅವರಿಗೆ ಸ್ಥಾನ ಕೊಡಲೇಬೇಕು ಎಂದು ಕಾಂಗ್ರೆಸ್‌ ವರಿಷ್ಠರಿಗೆ ಒತ್ತಾಯಿಸಿದರು.

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ನಾಗರಬೆಟ್ಟ ಏತ ನಿರಾವರಿ, ಚಿಮ್ಮಲಗಿ ಏತ ನಿರಾವರಿ ಸೇರಿದಂತೆ ಅನೇಕ ನಿರಾವರಿ ಯೋಜನೆ ಅನುಷ್ಠಾನಗೊಳಿಸಿದ ಕೀರ್ತಿ ನಾಡಗೌಡರಿಗೆ ಸಲ್ಲುತ್ತದೆ. ಅವರ ಹಿರಿತನ ಹಾಗೂ ಅನುಭವ ಗುರುತಿಸಿಯಾದರೂ ಮಂತ್ರಿ ಸ್ಥಾನ ನೀಡಬೇಕು. ಒಂದು ವೇಳೆ ನಾಡಗೌಡರಿಗೆ ಸಚಿವ ಸ್ಥಾನ ನೀಡದಿದ್ದರೆ ಕ್ಷೇತ್ರದ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.


ಮುಖಂಡ ಸುರೇಶಗೌಡ ಪಾಟೀಲ ಮಾತನಾಡಿ, 40 ವರ್ಷಗಳಿಂದ ಪಕ್ಷದ ಸಿದ್ಧಾಂತ ಪಾಲಿಸುತ್ತಾ ಬಂದಿರುವ ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಮುದ್ದೇಬಿಹಾಳ ಕ್ಷೇತ್ರದ ಜನರ ಸಹನೆಯ ಕಟ್ಟೆ ಒಡೆದಂತಾಗುತ್ತದೆ. 40 ವರ್ಷಗಳಿಂದ ಸೌಮ್ಯ ಹಾಗೂ ಸನ್ನಡತೆಗೆ ಹೆಸರಾದ ಅಪ್ಪಾಜಿ ನಾಡಗೌಡರನ್ನು ಕಡೆಗಣಿಸುತ್ತಿರುವುದು ಮತಕ್ಷೇತ್ರದ ಜನರಿಗೆ ಬಹಳ ನೋವನ್ನುಂಟು ಮಾಡಿದೆ. ಕಾರಣ ಈ ಬಾರಿಯಾದರೂ ನಾಡಗೌಡರಿಗೆ ಸಚಿವ ಸ್ಥಾನ ನೀಡಿ ಗೌರವಿಸಬೇಕು. ಇಲ್ಲದಿದ್ದರೆ ಈ ಭಾಗದಲ್ಲಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ತಿಳಿದುಕೊಳ್ಳಬೇಕಿದೆ ಎಂದರು.

ಮುಖಂಡ ವೈ.ಎಚ್.ವಿಜಯಕರ ಮಾತನಾಡಿ, ರಾಜ್ಯದ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರಲ್ಲಿ ಸಿ.ಎಸ್.ಅಪ್ಪಾಜಿ ನಾಡಗೌಡರು 40 ವರ್ಷದ ರಾಜಕಾರಣದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದ ರಾಜಕಾರಣಿ. ಪ್ರತಿ ಬಾರಿಯೂ ಸಚಿವ ಸ್ಥಾನದ ಪಟ್ಟಿಯಲ್ಲಿದ್ದು, ಪಕ್ಷದ ನಿಲುವಿಗಾಗಿ ಕೊನೆ ಗಳಿಗೆಯಲ್ಲಿ ಕೈಬಿಟ್ಟರೂ ಪಕ್ಷದ ವಿರುದ್ಧ ಒಂದು ಮಾತು ಮಾತನಾಡದೇ ಪಕ್ಷಕ್ಕೆ ನಿಷ್ಠೆ ವ್ಯಕ್ತಪಡಿಸಿದ್ದಾರೆ. ಈ ಬಾರಿ ಅವರಿಗೆ ಅವಕಾಶ ಕೊಡಲೇಬೇಕು ಎಂದು ಒತ್ತಾಯಿಸಿದರು.

ಯುವ ಮುಖಂಡರಾದ ಶರಣಸಬು ಚಲವಾದಿ, ತಿಪ್ಪಣ್ಣ ದೊಡ್ಡಮನಿ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಉಳಿಯ ಬೇಕಾದರೆ ನಾಡಗೌಡರಿಗೆ ಸಚಿವ ಸ್ಥಾನ ಅಗತ್ಯವಾಗಿದ ಎಂಬುದನ್ನು ಪಕ್ಷದ ವರಿಷ್ಠರು ಅರಿತುಕೊಳ್ಳಬೇಕು ಎಂದು ಹೇಳಿದರು.

ಈ ಬಾರಿ ಸಚಿವ ಸಂಪುಟದಲ್ಲಿ ನಾಡಗೌಡರಿಗೆ ಅವಕಾಶ ನೀಡದಿದ್ದರೆ ನಾವು ಆತ್ಮಹತ್ಯೆಗೂ ಮುಂದಾಗಬೇಕಾಗುತ್ತದೆ ಎಂದು ಅಕ್ಷತಾ ಚಲವಾದಿ ಹಾಗೂ ಸರಸ್ವತಿ ಪೀರಾಪೂರ ಹೇಳಿದರು.

ಪ್ರಯಾಣಿಕರ ಪರದಾಟ:

ಬಂದ್‌ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರಿಗೆ ಇಲಾಖೆ ವ್ಯವಸ್ಥಾಪಕರು ಪಟ್ಟಣದ ಒಳಗೆ ಬಸ್ ಸಂಚಾರ ಸ್ಥಗಿತಗೊಳಿಸಿ ಪಟ್ಟಣದ ಹೊರಭಾಗದಲ್ಲಿಯೇ ಗ್ರಾಮೀಣ ಭಾಗದಿಂದ ಬರುವ ಪ್ರಯಾಣಿಕರಿಗೆ ಇಳಿಸುವ ವ್ಯವಸ್ಥೆ ಮಾಡಿದ್ದರು. ಇದರಿಂದ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡಿದರು.

ಪೊಲೀಸ್‌ ಬಿಗಿ ಬಂದೋಬಸ್ತ್:

ಮುದ್ದೇಬಿಹಾಳ ಬಂದ್‌ ಕರೆ ಹಿನ್ನೆಲೆ ಸಿಪಿಐ ಮೊಹ್ಮದ್‌ ಫಸಿವುದ್ದೀನ್ ಹಾಗೂ ಪಿಎಸ್‌ಐ ಸಂಜಯ ತಿಪ್ಪರಡ್ಡಿ ಅವರು, ಮುಂಜಾಗ್ರೆತೆ ಕ್ರಮವಾಗಿ ಕೂಡಗಿ, ನಿಡಗುಂದಿ, ಬ.ಬಾಗೇವಾಡಿ, ತಾಳಿಕೋಟೆ ಠಾಣೆಗಳಿಂದ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ಹಾಗೂ ವಿಜಯಪುರದಿಂದ ಸಶಸ್ತ್ರ ಮೀಸಲು ಪಡೆಯ ವಾಹನ ಕರೆಸಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು.

ತಾಳಿಕೋಟೆಯ ಮುಖಂಡರಾದ ಬಿ.ಎಸ್. ಪಾಟೀಲ(ಯಾಳಗಿ), ಬಾಪುರಾಯ ದೇಸಾಯಿ (ಹಡಗಲಿ), ಬಿ.ಕೆ. ಬಿರಾದಾರ, ಸಂಗನಗೌಡ ಬಿರಾದರ (ಜಿಟಿಸಿ), ಕಾಮರಾಜ ಬಿರಾದಾರ, ಶಿವಪ್ಪಗೌಡ ತಾತರಡ್ಡಿ, ಮಲ್ಲಿಕಾರ್ಜುನ ಅಪರಾಧಿ, ಸಿ.ಎಲ್. ಬಿರಾದರ, ಎಸ್.ಎಸ್. ಮಾಲಗತ್ತಿ, ಶ್ರೀಶೈಲ ಮರೋಳ, ರಾಜು ಕೊಂಗಿ, ಬಸವರಾಜ ಇಸ್ಲಾಂಪೂರ, ಆಶೋಕ ಚೆಟ್ಟೆರ, ಮೈಬೂಬ ಗೊಳಸಂಗಿ, ಶಿವಗೌಡ ತಾಳಿಕೋಟಿ, ಪ್ರದೀಪ ನಾಡಗೌಡ, ಸದು ಮಠ, ಸಂಗನಗೌಡ ಪಾಟೀಲ, ಕೆ.ಎಸ್. ಪಾಟೀಲ, ಬಾಪುಗೌಡ ಪೀರಾಪೂರ, ಪಿಂಟು ಸಾಲಿಮನಿ, ಅಮರೇಶ ಗೂಳಿ, ಬಸವರಾಜ ಭಜಂತ್ರಿ ಸೇರಿದಂತೆ ಸಾವಿರಕ್ಕೂ ಅಧಿಕ ಕಾರ್ಯಕರ್ತರಿದ್ದರು.ಬೃಹತ್‌ ಪ್ರತಿಭಟನಾ ರ್ಯಾಲಿ, ಟಯರ್ ಬೆಂಕಿ:

ಮುದ್ದೇಬಿಹಾಳ ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಸೇರಿದ ಪ್ರತಿಭಟನಾಕಾರರು ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಇಂದಿರಾ ವೃತ್ತ, ಗ್ರಾಮದೇವತೆಕಟ್ಟೆ ಮೂಲಕ ಬಸವೇಶ್ವರ ವೃತ್ತದವರೆಗೆ ಬೃಹತ್‌ ಮೆರವಣಿಗೆ ನಡೆಯಿತು. ಜಾತ್ಯತೀತ, ಪಕ್ಷಾತೀತವಾಗಿ ಸುಮಾರು 4 ರಿಂದ 5 ಸಾವಿರ ಜನ ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜನರನ್ನು ಉದ್ದೇಶಿಸಿ ಪಕ್ಷದ ಮುಖಂಡರು ಮಾತನಾಡುತ್ತಿರುವ ವೇಳೆ ಆಲಮಟ್ಟಿ ರಸ್ತೆಯಲ್ಲಿ ಯುವಕರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿಯೇ ಸರಳ ಸಜ್ಜನ ರಾಜಕಾರಣಿ ಎಂದು ಹೆಸರಾಗಿರುವ ಶಾಸಕ ಅಪ್ಪಾಜಿ ನಾಡಗೌಡರು ಸಾಕಷ್ಟು ಬಾರಿ ಸಚಿವ ಸ್ಥಾನದಿಂದ ವಂಚಿತರಾಗುವಂತೆ ಕಾಣದ ಕೈಗಳು ಕೆಲಸ ಮಾಡುತ್ತಾ ಬಂದಿವೆ. ಇದರಿಂದ ಕ್ಷೇತ್ರದ ಜನರಿಗೆ ಪಕ್ಷದ ಮೇಲೆ ವಿಶ್ವಾಸ ಇಲ್ಲದಂತಾಗಿದೆ. ಕಳೆದ ಬಾರಿ ಸಿದ್ದರಾಮಯ್ಯನವರು ನಾಡಗೌಡರನ್ನು ಗೆಲ್ಲಿಸಿದರೆ ಸಚಿರನ್ನಾಗಿ ಮಾಡುತ್ತೇನೆಂದು ಕ್ಷೇತ್ರದ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಅಪ್ಪಾಜಿ ನಾಡಗೌಡರು ಸಮಕಾಲಿನ ರಾಜಕಾರಣಿಗಳು. ಈ ಬಾರಿ ನಾಡಗೌಡರಿಗೆ ಸಚಿವ ಸ್ಥಾನ ನೀಡಿ ಗೌರವಿಸಬೇಕು. ಇದರಿಂದ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆನೆಬಲಬಂದಂತಾಗುತ್ತದೆ.

-ಗುರಣ್ಣ ತಾರನಾಳ, ಬ್ಲಾಕ್‌ ಕಾಂಗ್ರೆಸ್‌ ತಾಲೂಕಾಧ್ಯಕ್ಷ