ಸಿಇಸಿ ಜ್ಞಾನೇಶ ರಾಜೀನಾಮೆಗೆ ಸಿಪಿಐ ಮಾನವ ಸರಪಳಿ

KannadaprabhaNewsNetwork |  
Published : Oct 29, 2026, 01:30 AM IST
28ಕೆಡಿವಿಜಿ3-ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಿ ದಾವಣಗೆರೆಯಲ್ಲಿ ಬುಧವಾರ ಮಾನವ ಸರಪಳಿ ನಿರ್ಮಿಸಿ,ಪ್ರತಿಭಟಿಸಿದ ಸಿಪಿಐ ಜಿಲ್ಲಾ ಮುಖಂಡರು, ಕಾರ್ಯಕರ್ತರು. | Kannada Prabha

ಸಾರಾಂಶ

ಎಸ್ಐಆರ್ ಪ್ರಕ್ರಿಯೆ ಹೆಸರಿನಲ್ಲಿ ದೇಶದ 13 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿದ್ದನ್ನು ಖಂಡಿಸಿ, ಸಿಇಸಿ ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಿ ಸಿಪಿಐ ಜಿಲ್ಲಾ ಮಂಡಳಿಯಿಂದ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ನಗರದಲ್ಲಿ ಬುಧವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.

- ದೇಶಾದ್ಯಂತ 13 ಕೋಟಿ ಮತದಾರರ ಕೈಬಿಟ್ಟಿದ್ದ ಎಡಪಕ್ಷಗಳ ಮುಖಂಡರ ಆಕ್ರೋಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಎಸ್ಐಆರ್ ಪ್ರಕ್ರಿಯೆ ಹೆಸರಿನಲ್ಲಿ ದೇಶದ 13 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿದ್ದನ್ನು ಖಂಡಿಸಿ, ಸಿಇಸಿ ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಿ ಸಿಪಿಐ ಜಿಲ್ಲಾ ಮಂಡಳಿಯಿಂದ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ನಗರದಲ್ಲಿ ಬುಧವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.

ನಗರದ ಅಶೋಕ ರಸ್ತೆಯ ಸಿಪಿಐ ಜಿಲ್ಲಾ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಹೊರತು ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಮಂಡಳಿ ಸಹ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ಸಂಸ್ಥೆಗಳ ಸ್ವಾಯತ್ತತೆ ಮತ್ತು ಉತ್ತರದಾಯಿತ್ವವನ್ನೇ ದುರ್ಬಲಗೊಳಿಸುತ್ತಿದೆ. ಕೇಂದ್ರ ಚುನಾವಣಾ ಆಯೋಗವು ಸ್ವತಂತ್ರ, ನಿಷ್ಪಕ್ಷಪಾತ ಕಾರ್ಯನಿರ್ವಹಿಸಬೇಕಾದ ಸಾಂವಿಧಾನಿಕ ಸಂಸ್ಥೆಯಾಗಿದೆ. ಆದರೆ, 13 ಕೋಟಿ ಮತದಾರರ ಹೆಸರನ್ನು ಅಳಿಸಿ ಹಾಕಿದ ಆಯೋಗದ ಬಗ್ಗೆಯೇ ಅನುಮಾನ ಮೂಡುವಂತಾಗಿದೆ ಎಂದರು.

ಮುಖ್ಯ ಚುನಾವಣಾ ಆಯುಕ್ತರು, ಚುನಾವಣಾ ಆಯುಕ್ತರ ಅಧಿಕಾರದಲ್ಲಿ ಕೇಂದ್ರ ಸರ್ಕಾರದ ಪ್ರಭಾವ, ಹಸ್ತಕ್ಷೇಪ ಹೆಚ್ಚಾಗಿರುವುದು ಸ್ಪಷ್ಟವಾಗುತ್ತಿದೆ. ಆಯೋಗದ ಸ್ವಾತಂತ್ರ್ಯ ಮತ್ತು ವಿಶ್ವಾಸಾರ್ಹತೆಯ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರವು ಆಯೋಗದ ಅಧಿಕಾರ ವ್ಯಾಪ್ತಿಯಲ್ಲಿ ಮೂಗು ತೂರಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಮಾಡುತ್ತಿದೆ ಎಂದು ದೂರಿದರು.

ಸಿಪಿಐ ಸಹ ಕಾರ್ಯದರ್ಶಿ ಆವರಗೆರೆ ಎಚ್.ಜಿ.ಉಮೇಶ ಮಾತನಾಡಿ, ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜನರ ಮತದಾನದ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ಸಿಇಸಿ ಜ್ಞಾನೇಶಕುಮಾರ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಎಸ್ಐಆರ್‌ ಪ್ರಕ್ರಿಯೆ ರದ್ದುಪಡಿಸಬೇಕು. ಸಂವಿಧಾನವು ಪ್ರತಿ ವಯಸ್ಕ ನಾಗರೀಕನಿಗೂ ಜಾತಿ, ಧರ್ಮ, ಲಿಂಗ, ಆರ್ಥಿಕ ಸ್ಥಿತಿ ಹಾಗೂ ಶಿಕ್ಷಣದ ಭೇದವಿಲ್ಲದೇ ಸಮಾನ ಮತದಾನದ ಹಕ್ಕನ್ನು ನೀಡಿದೆ. ಆದರೆ, ಇಂದು ಈ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅಪಾಯ ಎದುರಾಗಿದೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ 13 ಕೋಟಿಗೂ ಹೆಚ್ಚು ಮತದಾರರ ಹೆಸರನ್ನು ದೇಶದಲ್ಲಿ ಅಳಿಸಿದ್ದು, ಕರ್ನಾಟಕವೊಂದರಲ್ಲೇ ಸುಮಾರು 1 ಕೋಟಿಯಷ್ಟು ಮತದಾರರ ಹೆಸರು ಅಳಿಸಿದ್ದು ಸಾಕಷ್ಟು ಪ್ರಶ್ನೆಗೆ ಕಾರಣ‍ವಾಗಿದೆ ಎಂದು ಹೇಳಿದರು.

ಪಕ್ಷದ ಮುಖಂಡರಾದ ಇಫ್ಟಾದ ಐರಣಿ ಚಂದ್ರು, ರಾಜು ಕೆರನಹಳ್ಳಿ, ಎನ್.ಸುರೇಶ ಯರಗುಂಟೆ, ಬಿ.ರಘು, ಜಿ.ಯಲ್ಲಪ್ಪ, ವಿ.ಲಕ್ಷ್ಮಣ, ಚಿನ್ನಪ್ಪ, ಶೇಖರ ನಾಯ್ಕ, ರಮೇಶ ಸಿ.ದಾಸರ, ಸರೋಜಾ, ಕೆ.ಪುಷ್ಪಾ, ನಾಗಮ್ಮ, ಕೆ.ಜಿ.ಶಿವಮೂರ್ತಿ, ಶ್ಯಾಗಲೆ ಶರಣಪ್ಪ, ಎಸ್.ಜಯಪ್ಪ, ಬಿ.ಚಿನ್ನಪ್ಪ, ಕೃಷ್ಣಪ್ಪ, ರಘು, ನಾಗಮ್ಮ, ಎ.ತಿಪ್ಪೇಶಿ ಆವರಗೆರೆ, ಸುರೇಶ ಇತರರು ಇದ್ದರು.

- - -

(ಬಾಕ್ಸ್‌)

- ಮತದಾರರ ಹೆಸರು ಅಳಿಸುವಿಕೆ ಬಗ್ಗೆ ಆಯೋಗ ಪಾರದರ್ಶಕ ವಿವರಣೆ ನೀಡಬೇಕು.

- ಅರ್ಹ ಮತದಾರರ ಹೆಸರನ್ನು ಕೈ ಬಿಡದಂತೆ ಖಾತರಿಪಡಿಸಬೇಕು.

- ವಲಸೆ ಕಾರ್ಮಿಕರು, ಬಡ ಕುಟುಂಬ, ಅಲ್ಪಸಂಖ್ಯಾತರು, ದಾಖಲೆಗಳನ್ನು ಒದಗಿಸಲಾರದ ದುರ್ಬಲ ವರ್ಗಗಳು ಮತದಾನದ ಹಕ್ಕಿನಿಂದ ವಂಚಿತವಾಗಬಾರದು.

- ಸಿಇಸಿ ಜ್ಞಾನೇಶಕುಮಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

- - -

-28ಕೆಡಿವಿಜಿ3:

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಿ ದಾವಣಗೆರೆಯಲ್ಲಿ ಬುಧವಾರ ಮಾನವ ಸರಪಳಿ ನಿರ್ಮಿಸಿ ಸಿಪಿಐ ಜಿಲ್ಲಾ ಮುಖಂಡರು, ಕಾರ್ಯಕರ್ತರು ಪ್ರತಿಭಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್
ಕಸ ವಿಲೇ ವಿಚಾರಕ್ಕೆ ಹಲ್ಲೆ: ಕೇಸ್‌ ರದ್ದತಿಗೆ ಹೈಕೋರ್ಟ್ ನಿರಾಕರಣೆ