ಹೊಸಪೇಟೆಯಲ್ಲಿ 26ರಿಂದ ಸಿಪಿಐಎಂ ಜಿಲ್ಲಾ ಸಮ್ಮೇಳನ

KannadaprabhaNewsNetwork |  
Published : Nov 21, 2024, 01:04 AM IST
20ಎಚ್‌ಪಿಟಿ4- ಹೊಸಪೇಟೆಯಲ್ಲಿ ನಡೆಯಲಿರುವ ಸಿಪಿಐ(ಎಂ) ವಿಜಯನಗರ ಜಿಲ್ಲಾ ಸಮ್ಮೇಳನದ ಪೋಸ್ಟರ್‌ಅನ್ನು ಪಕ್ಷದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಬಹಿರಂಗ ಸಮಾವೇಶ ಆಯೋಜಿಸಲಾಗುವುದು.

ಹೊಸಪೇಟೆ: ಸಿಪಿಐ(ಎಂ) ವಿಜಯನಗರ ಜಿಲ್ಲಾ ಸಮ್ಮೇಳನವನ್ನು ನ. 26, 27ರಂದು ಎರಡು ದಿನಗಳ ಕಾಲ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಆರ್.ಎಸ್. ಬಸವರಾಜ ತಿಳಿಸಿದರು.

ನಗರದಲ್ಲಿಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಮ್ಮೇಳನದಲ್ಲಿ ಗಾಂಧಿ ಚೌಕ್‌ನಿಂದ ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ನಡೆಸಿ, ಬಹಿರಂಗ ಸಮಾವೇಶ ಆಯೋಜಿಸಲಾಗುವುದು. ಆನಂತರ ಎರಡನೇ ದಿನ ಸಭೆ ನಡೆಸಿ, ಜಿಲ್ಲಾ ಸಮಿತಿ ಆಯ್ಕೆ ಮಾಡಲಿದ್ದು, ಬಡ ಕುಟುಂಬಗಳಿಗೆ ನಿವೇಶನ, ಸಕ್ಕರೆ ಕಾರ್ಖಾನೆ ಸ್ಥಾಪನೆ, ದುಡಿಯುವ ಜನರ ಉನ್ನತಿಗಾಗಿ ನಾನಾ ವಿಷಯಗಳ ಕುರಿತು ಚರ್ಚಿಸಲಾಗುವುದು. ಪಕ್ಷದ ಜಿ. ನಾಗರಾಜ, ಎಸ್.ವೈ. ಗುರುಶಾಂತ ಮುಂತಾದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿ, ಮುಂದಿನ ಏಪ್ರಿಲ್‌ನಲ್ಲಿ ಪಕ್ಷದ 24ನೇ ಅಖಿಲ ಭಾರತ ಮಹಾ ಅಧಿವೇಶನ ತಮಿಳುನಾಡಿನ ಮಧುರೈನಲ್ಲಿ ನಡೆಯಲಿದೆ. ಇದಕ್ಕಾಗಿ ವಿವಿಧ ಹಂತದ ಸಮಾವೇಶಗಳನ್ನು ಆಯೋಜಿಸಿ ಪ್ರತಿನಿಧಿಗಳ ಆಯ್ಕೆ ಮಾಡಲಾಗುತ್ತಿದೆ. ಡಿ. 29, 30, 31ರಂದು ತುಮಕೂರಿನಲ್ಲಿ ರಾಜ್ಯ ಸಮ್ಮೇಳನ ನಡೆಯಲಿದೆ. ಇದರಲ್ಲಿ ಪ್ರಮುಖವಾಗಿ ಮೂರು ಅಜೆಂಡಾ ಇರಲಿದೆ, ಕಳೆದ ಮೂರು ವರ್ಷದಲ್ಲಿ ರಾಜ್ಯದ ರಾಜಕೀಯ ದಿಕ್ಕು ಯಾವ ಕಡೆ ಚಲಿಸುತ್ತಿದೆ. ಅದರಲ್ಲಿ ನಮ್ಮ ಪಾತ್ರ, ನಮ್ಮ ಬೆಳವಣಿಗೆ ಮತ್ತು ಮುಂದಿನ ಮೂರು ವರ್ಷಗಳ ಕಾರ್ಯಕ್ರಮಕ್ಕೆ ರಾಜ್ಯ ನಾಯಕತ್ವ ಚರ್ಚೆ ನಡೆಯಲಿದೆ ಎಂದರು.

ಡಿ. 29ರಂದು 10 ಸಾವಿರ ಕಾರ್ಮಿಕರಿಂದ ಮೆರವಣಿಗೆ ನಡೆಯಲಿದ್ದು, ಕೇರಳ ಮಾಜಿ ಸಚಿವೆ ಎಂ.ಎ. ಬೇಬಿ, ವಿಜಯ ರಾಘವನ್, ಬಿ.ವಿ. ರಾಘು ಭಾಗವಹಿಸುವರು. ದೇಶದ ಪ್ರಜಾಪ್ರಭುತ್ವ ರಕ್ಷಣೆಗೆ ಆದ್ಯತೆ, ದೇಶ ಮತ್ತು ರಾಜ್ಯದ ಸೌಹಾರ್ದತೆಯ ವಿಸ್ತರಣೆ ಮಾಡುವ ಕುರಿತು, ರಾಜ್ಯದ ಜನತೆಯ ಬದುಕನ್ನು ಉಳಿಸುವ ಹೊಣೆಗಾರಿಕೆ ಸಮ್ಮೇಳನದ ಪ್ರಮುಖ ಉದ್ದೇಶ ಎಂದರು.

ಕಮ್ಯುನಿಸ್ಟ್ ಪಕ್ಷ ಸರ್ವಾಧಿಕಾರಿಗಳ ಪಕ್ಷ, ಪ್ರಜಾಪ್ರಭುತ್ವ ಇಲ್ಲ ಎಂದು ಆರೋಪಿಸುತ್ತಿದ್ದಾರೆ. ಬಿಜೆಪಿ ಎನ್‌ಡಿಎ ಸರ್ಕಾರ ಜಾತ್ಯತೀತತೆ ಮೇಲೆ, ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿವೆ. ಸರ್ವಾಧಿಕಾರದ ಧೋರಣೆ, ಅಧಿಕಾರ ದುರುಪಯೋಗ, ರಾಜ್ಯಪಾಲರ ಕಚೇರಿ, ತನಿಖಾ ಸಂಸ್ಥೆಗಳ ದುರುಪಯೋಗ, ರಾಜ್ಯಗಳ ಅಧಿಕಾರ ಮೊಟಕು, ವಿರೋಧ ಪಕ್ಷಗಳನ್ನು ಕಿತ್ತಾಕುವ ಕೆಲಸ ಮಾಡುತ್ತಿದ್ದಾರೆ. ಕೋಮುವಾದ ರಾಜ್ಯದಲ್ಲಿ ಬಲಗೊಳ್ಳುತ್ತಿದೆ. ಜಾತಿವಾದ ಮತ್ತು ಜಾತಿ ಸಂಘಟನೆಗಳನ್ನು ಬಳಸಿಕೊಂಡು ರಾಜ್ಯದ ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು.

ಜನರ ಬದುಕು ರಕ್ಷಣೆ ಮಾಡಲು ಎರಡೂ ಸರ್ಕಾರಗಳ ಆರ್ಥಿಕ ನೀತಿಗಳಿಂದ ಸಾಧ್ಯವಿಲ್ಲ. ಕಾರ್ಪೊರೆಟ್ ಪರ ನೀತಿ ತರುತ್ತಿದ್ದಾರೆ. ರಾಜ್ಯದಲ್ಲಿ ರೈತಾಪಿ ಕೃಷಿ ತೆಗೆದುಹಾಕಿ, ಕಂಪನಿ ಕೃಷಿ ತರುತ್ತಿದ್ದಾರೆ. ಉದ್ಯೋಗಕ್ಕೆ ಅಭದ್ರತೆ ತರುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ರೆಡ್ಡಿ, ಮುಖಂಡರಾದ ಯಲ್ಲಾಲಿಂಗ, ಜಂಬಯ್ಯ ನಾಯಕ ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌