ಶಿವಮೊಗ್ಗ: ಭಾಷೆಯ ಬಳಕೆಯಿಂದ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವಾಗಲಿದ್ದು, ಯುವ ಸಮೂಹ ಕನ್ನಡದ ಕಲಿಕೆಯತ್ತ ಹೆಚ್ಚು ಕುತೂಹಲ ಬೆಳೆಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ವತಿಯಿಂದ ಕುವೆಂಪು ವಿಶ್ವವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ''''''''ಆಚಾರ್ಯ ಕನ್ನಡ ಉತ್ಸವ - 2024'''''''' ಉದ್ಘಾಟಿಸಿ ಅವರು ಮಾತನಾಡಿದರು.ಭಾಷೆ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಸಾಧನ. ಕರ್ನಾಟಕದ ನೆಲದಲ್ಲಿ ಕನ್ನಡದ ಉಳುವಿನ ಚರ್ಚೆ ನಡೆಯುವುದು ಬೇಸರದ ಸಂಗತಿ. ವಸಾಹತುಶಾಹಿ ಆಡಳಿತವಿದ್ದ ರಾಷ್ಟ್ರಗಳಲ್ಲಿ ಈ ಬಗ್ಗೆ ಗೊಂದಲವಿದೆ. ಮಾತನಾಡುವ ಭಾಷೆ ಮತ್ತು ಕಲಿಯುವ ಭಾಷೆಯ ನಡುವೆ ಗೊಂದಲಕ್ಕಿಡಾಗಿ, ಯಾವ ಭಾಷೆಯನ್ನು ಪರಿಪೂರ್ಣವಾಗಿ ಕಲಿಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಸರ್ಕಾರೇತರ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಗಳು ಕನ್ನಡದಲ್ಲಿಯೆ ನಡೆದಾಗ ಮಾತ್ರ ಭಾಷೆಯ ಬಗೆಗಿನ ಆತಂಕ ದೂರವಾಗಲಿದೆ. ಇಂಗ್ಲಿಷ್ ಎಂಬುದು ತುಂಬಾ ಅವ್ಯವಸ್ಥಿತವಾದ ಭಾಷೆ. ಇಂಗ್ಲಿಷ್ ಭಾಷೆಯ ತಪ್ಪು ಸರಿ ತಿದ್ದಲು ಇಂದಿಗೂ ಯಾವುದೇ ಅಕಾಡೆಮಿಗಳಿಲ್ಲ ಎಂದು ಹೇಳಿದರು.
ಕುವೆಂಪು ವಿವಿ ಕನ್ನಡ ಅಧ್ಯಾಪಕರ ವೇದಿಕೆ ಅಧ್ಯಕ್ಷೆ ಡಾ.ಸಬಿತಾ ಬನ್ನಾಡಿ ಮಾತನಾಡಿ, ಭಾಷೆಗೆ ಕನ್ನಡದಲ್ಲಿ ನುಡಿ ಎಂದು ಕರೆಯುತ್ತಾರೆ. ಈ ನುಡಿ ಇಲ್ಲದೇ ಹೋಗಿದ್ದರೆ ಪ್ರಾಣಿಗಳಿಗಿಂತ ಮನುಷ್ಯ ವಿಭಿನ್ನವಾಗಿ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ನುಡಿಯನ್ನು ಸುಳ್ಳಿಗಾಗಿ, ಮನುಷ್ಯತ್ವವನ್ನು ಒಡೆಯಲಿಕ್ಕಾಗಿ, ಅಪಮಾನಕ್ಕಾಗಿ ಬಳಸಿಕೊಳ್ಳುವಾಗ ಯಾಕೆ ಈ ನುಡಿ ಬೇಕಿತ್ತು ಎಂದೆನಿಸುತ್ತದೆ. ಅದೇ ನುಡಿಯನ್ನು ಸಮಾನತೆಗಾಗಿ, ನ್ಯಾಯಕ್ಕಾಗಿ, ಸೃಜನಶೀಲ ಸಾಹಿತ್ಯಕ್ಕಾಗಿ ಬಳಸಿದಾಗ ಭಾಷೆ ಮನುಷ್ಯನಿಗೆ ಸಿಕ್ಕಿದ ಸಿರಿ ಎಂಬ ಧನ್ಯತೆ ಮೂಡುತ್ತದೆ ಎಂದರು.ಭಾಷೆಗಳಲ್ಲಿ ಯಾವುದು ಶ್ರೇಷ್ಠವಲ್ಲ ಅಥವಾ ಕನಿಷ್ಠವಲ್ಲ. ಯೂರೋಪಿಯನ್ ಆಡಳಿತಾತ್ಮಕ ಹಿತದೃಷ್ಟಿಯಿಂದ ತಮ್ಮ ಭಾಷೆ ಶ್ರೇಷ್ಠ ಎಂಬ ಅಂಧತ್ವವನ್ನು ಮೂಡಿಸಿದರು. ಒಂದು ವಿಷಯವನ್ನು ವೈವಿಧ್ಯಮಯವಾಗಿ ಹೇಳಬಲ್ಲ, ರಕ್ತಹೀನತೆ ಇಲ್ಲದ ಭಾಷೆ ಕನ್ನಡ. ನಾವು ಮಾತನಾಡುವ ಕನ್ನಡದಲ್ಲಿ ಅದೆಷ್ಟೋ ಸಂಸ್ಕೃತ ಪದಗಳು ಬಳಕೆಯಾಗುತ್ತದೆ. ಅದನ್ನು ನಾವು ಕನ್ನಡದ ಪದವೆ ಎಂದು ಬಳಸುತ್ತಿದ್ದೇವೆ. ಮಕ್ಕಳಿಗೆ ಮೂಲ ಕನ್ನಡ ಪದಗಳನ್ನು ಪರಿಚಯ ಮಾಡಿಕೊಡಬೇಕಿದೆ ಎಂದರು.
ಸರ್ಕಾರ ಇಂಗ್ಲಿಷ್ ಮಾಧ್ಯಮವನ್ನು ಅನಿವಾರ್ಯಗೊಳಿಸುತ್ತಿದೆ. ಲಾಭಕ್ಕಾಗಿ ಭಾಷೆಯನ್ನು ಬಂಡವಾಳವಾಗಿ ಮಾಡಿಕೊಂಡಿದ್ದಾರೆ. ಈ ಮೂಲಕ ನಮ್ಮ ಮಾತೃಭಾಷೆಯನ್ನು ಹಿಂದೆ ದೂಡುವಂತೆ ಮಾಡುತ್ತಿದ್ದಾರೆ. ಕೆಲವರು ಕನ್ನಡ ಭಾಷೆಯನ್ನು ಬಂಡವಾಳ ಮಾಡಿಕೊಂಡಿದ್ದಾರೆ. ತೋರಿಕೆಯ ಅಭಿಮಾನಕ್ಕಿಂತ ಕಟ್ಟುವಿಕೆಯ ದೀಕ್ಷೆಯನ್ನು ನಾವೆಲ್ಲ ತೊಡಬೇಕಿದೆ ಎಂದು ಹೇಳಿದರು.ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಮಾತನಾಡಿದರು.
ಇದೇ ವೇಳೆ ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಗಣೇಶ್ ಕೆಂಚನಾಳ್ ಅವರನ್ನು ಸನ್ಮಾನಿಸಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಿ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಪಿಎಂಸಿ ಉದ್ದಿಮೆದಾರ ಡಿ.ಎಸ್.ಚಂದ್ರು, ವಿವಿಧ ವಿಭಾಗಗಳ ನಿರ್ದೇಶಕರಾದ ಪ್ರೊ.ಕೆ.ಎಂ.ನಾಗರಾಜು, ಎನ್.ಮಂಜುನಾಥ, ಶ್ರೀಲಲಿತ, ಗಾಯತ್ರಿ, ಬಿ.ಎನ್.ಪ್ರವೀಣ್, ಕೆ.ಚೈತ್ರ ಉಪಸ್ಥಿತರಿದ್ದರು.