ಸ್ವಂತ ಬ್ರಾಂಡ್ ಸೃಷ್ಟಿಸಿ ಸಿರಿಧಾನ್ಯ ಮಾರಲು ರೈತರಿಗೆ ಕರೆ

KannadaprabhaNewsNetwork | Published : Nov 21, 2024 1:04 AM

ಸಾರಾಂಶ

Calling farmers to create their own brand and sell cereal

-ಸಿರಿಧಾನ್ಯ-ಸಿರಿ ವಿಚಾರ ಸಂಕಿರಣದಲ್ಲಿ ಈಶ್ವರಾನಂದಪುರಿ ಸ್ವಾಮೀಜಿ ಸಲಹೆ

ಕನ್ನಡಪ್ರಭ ವಾರ್ತೆ ಹೊಸದುರ್ಗ

ರೈತರು ಬೆಳೆಯುವ ಸಿರಿಧಾನ್ಯವನ್ನು ತಮ್ಮದೆ ಬ್ರಾಂಡ್ ಸೃಷ್ಟಿಸಿ ಮಾರಾಟ ಮಾಡುವುದರಿಂದ ಆರ್ಥಿಕ ಸಬಲೀಕರಣ ಸಾಧಿಸಬಹುದು ಎಂದು ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮಿಜಿ ತಿಳಿಸಿದರು.

ಕೆಲ್ಲೊಡು ಗ್ರಾಮದ ಕನಕಗುರು ಪೀಠದ ಆವರಣದಲ್ಲಿ ಕನಕ ಜಯಂತಿ ಪ್ರಯುಕ್ತ ಕನಕ ಗುರುಪೀಠ ಹಾಗೂ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಸಿರಿಧಾನ್ಯ-ಸಿರಿ ವಿಚಾರ ಸಂಕಿರಣದ ಸಾನಿಧ್ಯವಹಿಸಿ ಮಾತನಾಡಿದರು.

ರಾಜ್ಯದಲ್ಲಿಯೇ ಹೊಸದುರ್ಗ ತಾಲೂಕಿನಲ್ಲಿ ಅತಿ ಹೆಚ್ಚು ಸಿರಿಧಾನ್ಯ ಬೆಳೆಯಲಾಗುತ್ತಿದೆ. ಆದರೆ, ಉತ್ತಮ ಮಾರುಕಟ್ಟೆ ವ್ಯವಸ್ಥೆಯಿಲ್ಲದ ಕಾರಣ ಹೆಚ್ಚಿನ ಅದಾಯ ದೊರೆಯುತ್ತಿಲ್ಲ. ವಿದೇಶಕ್ಕೆ ರಪ್ತು ಮಾಡುವ ಗುಣಮಟ್ಟದ ದಾನ್ಯ ಬೆಳೆಯುತ್ತಿರುವ ನಮ್ಮ ರೈತರು ಮೌಲ್ಯವರ್ದನೆ ಹಾಗೂ ಮಾರುಕಟ್ಟೆಗೆ ಹೆಚ್ಚಿನ ಅದ್ಯತೆ ನೀಡಬೇಕು. ಮಣ್ಣಿನ ಆರೋಗ್ಯ ಕಾಪಡುವಲ್ಲಿಯೂ ರೈತರು ವಿಶೇಷ ಗಮನಹರಿಸಬೇಕಾಗಿದೆ. ಮಣ್ಣು ಪರೀಕ್ಷೆಯ ನಂತರ ಅಗತ್ಯವಾದ ಪೋಷಕಾಂಶಗಳನ್ನು ಭೂಮಿಗೆ ನೀಡಬೇಕು ಎಂದರು.

ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಕನಕ ಜಯಂತಿಯ ಪ್ರಯುಕ್ತ ಈಶ್ವರಾನಂದಪುರಿ ಶ್ರೀಗಳು ಕೃಷಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕೃಷಿ ಮೇಳ ಹಾಗೂ ವಿಚಾರ ಸಂಕಿರಣ ಆಯೋಜಿಸಿರುವುದು ಮಾದರಿ ಕಾರ್ಯ. ರೈತರು ಇಂತಹ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು. ಸಿರಿಧಾನ್ಯಗಳು ಹೆಚ್ಚಿನ ಪೌಷ್ಟಿಕಾಂಶ ಒಳಗೊಂಡಿರುವ ಹಿನ್ನಲೆ ಸರ್ಕಾರ ಪೌಷ್ಟಿಕ ಆಹಾರದ ಕೊರತೆ ನಿವಾರಿಸಲು ಸಿರಿಧಾನ್ಯಗಳ ಮಹತ್ವ ತಿಳಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ್ ಮಾತನಾಡಿ, ಹೊಸದುರ್ಗ ತಾಲೂಕಿನಲ್ಲಿ ಸಿರಿಧಾನ್ಯ ಬೆಳೆಯಲು ಉತ್ತಮ ವಾತಾವರಣವಿರುವ ಕಾರಣದಿಂದ ಹಾಗೂ ಶಾಸಕರು ಸರ್ಕಾರದಿಂದ ಒದಗಿಸಿದ ಸೌಲಭ್ಯದಿಂದ ಬೆಳೆ ಬೆಳೆಯುವ ಪ್ರದೇಶವು 28 ಸಾವಿರ ಹೆಕ್ಟೇರ್‌ಗಳಿಗೆ ವಿಸ್ತರಣೆಯಾಗಿದೆ. ಸಿರಿಧಾನ್ಯ ಸಂಸ್ಕರಣೆ ಮಾಡಲು ರೈತರಿಗೆ ಅಗತ್ಯ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ. ರಾಗಿಯ ಬೆಂಬಲ ಬೆಲೆಗೆ ಪೂರಕವಾಗಿ ಸಾವೆಗೆ 5300 ರು. ಬೆಂಬಲ ಬೆಲೆ ನಿಗದಿಪಡಿಸುವಂತೆ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ. ರೈತಸಿರಿ ಯೋಜನೆಯಡಿ ತಾಲೂಕಿನಲ್ಲಿ ಸಿರಿಧಾನ್ಯ ಬೆಳೆದ ರೈತರಿಗೆ ಪ್ರೋತ್ಸಹಧನವಾಗಿ 43 ಕೋಟಿ ಹಣ ನೀಡಲಾಗಿದೆ ಎಂದರು.

ಸಿರಿಧಾನ್ಯ ತಜ್ಞ ಯೋಗೀಶ್ ಅಪ್ಪಾಜಯ್ಯ ಮಾತನಾಡಿ, ರೈತರು ಸಿರಿಧಾನ್ಯ ಉತ್ಪಾದನೆಯ ಜೊತೆಗೆ ಮಾರುಕಟ್ಟೆಯಲ್ಲಿಯೂ ಗೆದ್ದರೆ ಮಾತ್ರ ಪ್ರಗತಿ ಸಾಧಿಸಬಹುದು. ಇಲ್ಲವಾದರೆ ಮಧ್ಯವರ್ತಿಗಳು ಉದ್ಧಾರವಾಗುತ್ತಾರೆ. ಕಷ್ಟವೆಲ್ಲ ರೈತರಿಗೆ ಆದಾಯ ಮಾತ್ರ ಮಾರಾಟಗಾರರಿಗೆ ಎನ್ನುವಂತಾಗಿ ಅವರ ಆದಾಯ ಹೆಚ್ಚಾಗಿದೆ. ಇದನ್ನು ತಪ್ಪಿಸಲು ರೈತರು ತಮ್ಮ ಬೆಳೆಯನ್ನು ತಾವೇ ಸಂಸ್ಕರಿಸಿ ತಮ್ಮದೆ ಸ್ವಂತ ಬ್ರಾಂಡ್‌ನಲ್ಲಿ ಮಾರಾಟ ಮಾಡಬೇಕು. ಸರ್ಕಾರ ಕೃಷಿ ಮೇಳ ಆಯೋಜಿಸುವುದನ್ನು ಬಿಟ್ಟು ಕೃಷಿ ಉತ್ಪನ್ನಗಳ ಮಾರಾಟ ಮೇಳ ಆಯೋಜಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಶಿಲ್ಪಾ ಮದುಸೂದನ್, ಉಪ ಕೃಷಿ ನಿರ್ದೇಶಕ ಡಾ.ಕೆ.ಎಸ್.ಶಿವಕುಮಾರ್, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಕೆ.ಬಿ.ಚಂದ್ರಶೇಖರಪ್ಪ, ನಬಾರ್ಡ್‌ ಎಜಿಎಂ ಕವಿತಾ, ವಿಜ್ಞಾನಿ ಡಾ.ಓ.ಕುಮಾರ, ಡಾ.ನಂದಿನಿ, ಕೃಷಿ ಎಡಿ ಸಿ.ಎಸ್.ಈಶ ಇದ್ದರು.

--

ಪೋಟೋ: ಹೊಸದುರ್ಗ ತಾಲೂಕಿನ ಕೆಲ್ಲೊಡು ಗ್ರಾಮದ ಕನಕಗುರು ಪೀಠದಲ್ಲಿ ಕನಕ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಸಿರಿಧಾನ್ಯ-ಸಿರಿ ವಿಚಾರ ಸಂಕಿರಣ ಹಾಗೂ ಕೃಷಿ ವಸ್ತು ಪ್ರದರ್ಶವನ್ನು ಶಾಸಕ ಬಿ.ಜಿ.ಗೋವಿಂದಪ್ಪ ಉದ್ಘಾಟಿಸಿದರು.

--

19ಎಚ್‌ಎಸ್‌ಡಿ2:

Share this article