ಕನ್ನಡಪ್ರಭವಾರ್ತೆ ತುರುವೇಕೆರೆ
ಮೇಡಂ ನಮ್ಮೂರ ಆಸ್ಪತ್ರೆಲೀ ಡಾಕ್ಟರ್ ಗಳೇ ಇಲ್ಲ. ಇದು ತಾಲೂಕು ಕೇಂದ್ರ. ಡಾಕ್ಟರ್ ಗಳು ಇಲ್ಲದ ಕಾರಣ ಪ್ರತಿ ದಿನ ಸಾವಿರಾರು ಮಂದಿ ಸೂಕ್ತ ಚಿಕಿತ್ಸೆ ಸಿಗದೇ ಸರ್ಕಾರವನ್ನು ಬೈಕೊಂಡು ಹೋಗ್ತಾ ಇದ್ದಾರೆ. ದಯಮಾಡಿ ಈ ಆಸ್ಪತ್ರೆಗೆ ಡಾಕ್ಟರ್ ಗಳನ್ನು ನೇಮಕ ಮಾಡಿ ಮೇಡಂ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರವರಿಗೆ ಮನವಿ ಮಾಡಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರವರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಆಗಿ ಭೇಟಿ ನೀಡಿದ ಸಂಧರ್ಭದಲ್ಲಿ ಅಲ್ಲಿದ್ದ ರೋಗಿಗಳು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಮುಂದೆ ಸರ್ಕಾರಿ ಆಸ್ಪತ್ರೆಯ ದುರವಸ್ಥೆಯ ಬಗ್ಗೆ ಸವಿವರವಾಗಿ ವಿವರಿಸಿದರು.ಇಲ್ಲ.. ಇಲ್ಲ.. ಇಲ್ಲ ..: ಈ ಆಸ್ಪತ್ರೆಯಲ್ಲಿ ಎಲ್ಲವೂ ಇಲ್ಲಗಳ ಸಂತೆ. ಯಾವುದೇ ವೈದ್ಯರನ್ನು ಕೇಳಿದರೂ ಇಲ್ಲ ಎಂಬುದು ಸಿದ್ಧ ಉತ್ತರವಾಗಿದೆ. ಇಲ್ಲಿ ಮಕ್ಕಳ ವೈದ್ಯರು ಇಲ್ಲ. ಚರ್ಮರೋಗದ ವೈದ್ಯರು ಇಲ್ಲ. ನೇತ್ರ ವೈದ್ಯರು ಇಲ್ಲ. ಫಿಜಿಷಿಯನ್‌ಗಳು ಇಲ್ಲ. ಪ್ರಸೂತಿ ತಜ್ಞರು ಇಲ್ಲ. ಅರವಳಿಕೆ ತಜ್ಞರು ಇಲ್ಲ. ಡಯಾಲಿಸಿಸ್ ಗೆ ಸೂಕ್ತ ವ್ಯವಸ್ಥೆ ಇಲ್ಲ. ಹೀಗೆ ಇಲ್ಲ ಇಲ್ಲಗಳ ಸರಮಾಲೆಯನ್ನು ಜಿಲ್ಲಾಧಿಕಾರಿಗಳ ಮಂದೆ ಸಾರ್ವಜನಿಕರು ತೆರೆದಿಟ್ಟರು. ವೈದ್ಯರಿಲ್ಲದೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುವಂತಾಗಿದೆ ಎಂದು ತಮಗಾಗುತ್ತಿರುವ ಜನರು ಸಮಸ್ಯೆಯನ್ನು ಬಿಡಿಸಿಟ್ಟರು. ಪ್ರತಿದಿನ ಇಲ್ಲಿಗೆ ಚಿಕಿತ್ಸೆ ಪಡೆಯಲು ಸಾವಿರಾರು ರೋಗಿಗಳು ಬರುತ್ತಾರೆ. ಇರುವ ಮೂರ್‍ನಾಲ್ಕು ಮಂದಿ ಖಾಯಂ ವೈದ್ಯರು ಎಷ್ಟು ಮಂದಿಯನ್ನು ನೋಡಲು ಸಾಧ್ಯ. ಚಿಕಿತ್ಸೆಗಾಗಿ ವೈದ್ಯರಿಲ್ಲದೆ ದಿನಗಟ್ಟಲೆ ಕಾಯಬೇಕಿದೆ. ಕೂಡಲೇ ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೀಡಬೇಕೆಂದು ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್ ಮನವಿ ಮಾಡಿದರು.ಜಿಲ್ಲಾಧಿಕಾರಿಗಳು ನಂತರ ತುರ್ತು ಚಿಕಿತ್ಸಾ ಕೊಠಡಿ, ಮಹಿಳಾ ವಾರ್ಡ್, ಡಯಾಲಿಸೀಸ್ ಕೇಂದ್ರ, ಪುರುಷರ ವಾರ್ಡ್, ಎನ್.ಸಿಡಿ ವಿಭಾಗಕ್ಕೆ ಭೇಟಿ ನೀಡಿ ಒಳರೋಗಿಗಳೊಂದಿಗೆ ಔಷಧ, ಆಹಾರ ವಿತರಣೆ ಮತ್ತು ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ಪಡೆದುಕೊಂಡರು. ಔಷಧಿ ವಿತರಣಾ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಟಿಎಚ್‌ಒ ಡಾ.ರಂಗನಾಥ್ ಅವರಿಂದ ಆಸ್ಪತ್ರೆಯಲ್ಲಿ ಖಾಲಿ ಇರುವ ಸಿಬ್ಬಂದಿ ಮತ್ತು ವೈದ್ಯರ ಮಾಹಿತಿ ಪಡೆದುಕೊಂಡರು. ನಂತರ ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್‌ಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಆಲಿಸಿದರು. ಬಾಡಿಗೆ ಕಟ್ಟಡದ ವಸತಿ ಶಾಲೆಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲ ಎಂಬುದು ತಿಳಿದಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗುವುದು. ಹಾಗೂವೈದ್ಯರ ಕೊರತೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಪರಮೇಶ್ವರ್ ಅವರ ಗಮನಕ್ಕೂ ತಂದು ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್.ಎ.ಕುಂಇ ಅಹಮದ್, ಇಓ ಶಿವರಾಜಯ್ಯ, ಬಿಇ.ಓ ಎನ್.ಸೋಮಶೇಖರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಂಗನಾಥ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನವೀನ್, ವೈದ್ಯರುಗಳಾದ ನರಸಿಂಹಮೂರ್ತಿ, ಅಫ್ಜಲ್ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.