ಸಿ ಆ್ಯಂಡ್‌ ಡಿ ಭೂಮಿ ವಿರೋಧಿಸಿ ರೈತ ಸಂಘದ ಪ್ರತಿಭಟನೆಗೆ ಸಿಪಿಐಎಂ ಬೆಂಬಲ

KannadaprabhaNewsNetwork |  
Published : Dec 20, 2024, 12:46 AM IST
ಬೆಂಬಲ | Kannada Prabha

ಸಾರಾಂಶ

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಶುಕ್ರವಾರ ನಡೆಸಲಿರುವ ಪ್ರತಿಭಟನಾ ಧರಣಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಎಚ್‌ ಬಿ ರಮೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಸರ್ಕಾರ ಸಿ ಆ್ಯಂಡ್ ಡಿ ಭೂಮಿಯನ್ನು ಅರಣ್ಯ ಎಂದು ಘೋಷಣೆ ಮಾಡಲು ಹೊರಟಿರುವುದನ್ನು ವಿರೋಧಿಸಿ ರೈತ ಸಂಘ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಶುಕ್ರವಾರ ನಡೆಸಲಿರುವ ಪ್ರತಿಭಟನಾ ಧರಣಿಗೆ ಸಿಪಿಐಎಂ ಸಂಪೂರ್ಣ ಬೆಂಬಲ ನೀಡುವುದಾಗಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್ ಬಿ ರಮೇಶ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಜಿಲ್ಲೆಯ ಅನೇಕ ರೈತರಿಗೆ ಸರ್ಕಾರ ನೋಟೀಸ್ ಕೊಟ್ಟು ಅವರ ಭೂಮಿಯನ್ನು ಮೀಸಲು ಆರಣ್ಯವನ್ನಾಗಿ ಮಾಡಲು ಹೊರಟಿರುವುದು ಸರಿಯಲ್ಲ.

ಹಾರಂಗಿ ಕಟ್ಟೆ ಕಟ್ಟುವ ಸಮಯದಲ್ಲಿ ಆ ಪ್ರದೇಶದ ನಿವಾಸಿಗಳಿಗೆ ಪುನರ್ವಸತಿಗೆಂದು 1972 ರಲ್ಲಿ ಸರ್ಕಾರ ಬಳಸಿಕೊಂಡ ಅರಣ್ಯ ಭೂಮಿಗೆ ಬದಲಾಗಿ ಆ ಇಲಾಖೆಗೆ ಕೊಡಲು 1972 ರಲ್ಲಿಯೇ ಪ್ರದೇಶವನ್ನು ಸರ್ಕಾರ ಗುರುತಿಸಿ ಆದೇಶವನ್ನು ಹೊರಡಿಸಿತ್ತು. ಆದರೆ ಭೂಮಿಯ ಹಸ್ತಾಂತರಕ್ಕೆ 1991 ರ ಜೂನ್ ತಿಂಗಳಲ್ಲಿ ಮಾತ್ರವೇ ರಾಜ್ಯ ಸರ್ಕಾರ ಗಜೆಟ್ ಅಧಿಸೂಚನೆ ಹೊರಡಿಸಿತ್ತು. ಹಾಗೆಯೇ 1972 ರಲ್ಲಿ ಜಾಗ ಗುರುತಿಸುವಾಗ ಗುರುತಿಸಿದ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರ ಬಗ್ಗೆ ಸರ್ಕಾರ ಯಾವುದೇ ಚಿಂತನೆ ಮಾಡಲಿಲ್ಲ ಹಾಗೂ ಗುರುತಿಸಿದ ತಕ್ಷಣ ಆ ಜಾಗವನ್ನು ಅರಣ್ಯ ಖಾತೆಗೆ ಹಸ್ತಾಂತರಿಸಲೂ ಇಲ್ಲ. ಆ ಜಾಗವು ಆರಣ್ಯ ಇಲಾಖೆಗೆ ಕೊಡಲು ಗುರುತಿಸಿಟ್ಟಿರುವ ಜಾಗವೆಂದು, ಆ ಜಾಗದಲ್ಲಿ ಯಾರೂ ಬಂದು ಇರಬಾರದೆಂದು ನಿರ್ಬಂಧವನ್ನು ಕೂಡ ಹೇರಲಿಲ್ಲ. ಗುರುತಿಸಿದ ನಂತರ ಜನರು ಅಲ್ಲಿ ಬಂದು ನೆಲೆಸಲು, ಕೃಷಿ ಮಾಡಿಕೊಳ್ಳಲು, ಮನೆ ಕಟ್ಟಿಕೊಳ್ಳಲು ಬಿಟ್ಟು ಈಗ ಅರಣ್ಯ ಪ್ರದೇಶವೆಂದು ಗುರುತಿಸಿ ಅವರಿಗೆ ನೋಟಿಸ್ ನೀಡಿರುವುದು ಸರಿಯಲ್ಲ. ಭೂಮಿ ಹಸ್ತಾಂತರಕ್ಕೆ 1991 ರ ಜೂನ್ ತಿಂಗಳಲ್ಲಿ ಗಜೆಟ್ ಅಧಿಸೂಚನೆ ಹೊರಡಿಸಿ ನಂತರ 2 ನೇ ಬಾರಿಗೆ 1994 ರಂದು ( ಆದೇಶ ಸಂಖ್ಯೆ: ಆರ್‌ಡಿ 106 ಎಲ್‌ಜಿಪಿ 88) ಆದೇಶ ಹೊರಡಿಸಿ ಆ ಪ್ರದೇಶದ ನಿವಾಸಿಗಳಿಗೆ ನೋಟೀಸ್ ಕೊಡಲಾಗುತ್ತಿದೆ. ಇದು ಸರಿಯಾದ ರೀತಿಯಲ್ಲ.

ಸರ್ಕಾರ ಆ ಪ್ರದೇಶವನ್ನು ಗುರುತಿಸುವಾಗ ಅಲ್ಲಿ ವಾಸಿಸುತ್ತಿರುವವರ ಬಗ್ಗೆ ಚಿಂತಿಸಬೇಕಿತ್ತು ಮತ್ತು ಗುರುತಿಸಿದ ನಂತರ ಅಲ್ಲಿ ವಾಸಿಸುತ್ತಿದ್ದವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕಿತ್ತು. ಅಲ್ಲದೆ ಗುರುತಿಸಿದ ಪ್ರದೇಶದಲ್ಲಿ ಯಾರು ಬಂದು ವಾಸಿಸದಂತೆ ನಿರ್ಬಂಧ ಹೇರಬೇಕಿತ್ತು. ಆಗ ಸುಮ್ಮನಿದ್ದ ಸರ್ಕಾರ ಅಲ್ಲಿ ವಾಸಿಸುವವರಿಗೆ ಮೂಲಭೂತ ಸೌಕರ್ಯಗಳನ್ನು ಕೊಟ್ಟು ಅವರನ್ನು ಮತದಾನದ ಪಟ್ಟಿಯಲ್ಲಿ ಸೇರಿಸಿ ಅವರಲ್ಲಿ ಹಲವರಿಗೆ ಆರ್ ಟಿ ಸಿ ಯನ್ನು ನೀಡಿ ಅವರು ಅಲ್ಲಿ ವಾಸವನ್ನು ಅಂಗೀಕರಿಸಿ ಈಗ ಅವರನ್ನು ಒಕ್ಕಲೆಬ್ಬಿಸಲು ಹೊರಟಿರುವುದು ಘೋರ ಅನ್ಯಾಯವಾಗಿದೆ. ತಕ್ಷಣ ಸರ್ಕಾರ ಪರಿಹಾರ ಮಾಡಲು ಒತ್ತಾಯಿಸಿ ರೈತ ಸಂಘ ಕರೆ ನೀಡಿರುವ ಪ್ರತಿಭಟನಾ ಧರಣಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ರಮೇಶ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ