ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಇದು ಗೂಗಲ್ ಮಾಹಿತಿಯ ಕಾಲ, ಆದರೆ, ಶಿಕ್ಷಕರ ಸ್ಥಾನ ತುಂಬಲು ಗೂಗಲ್‌ಗೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ನಮ್ಮ ತರಗತಿಯಲ್ಲಿ ಏಕೆ ಕುಳಿತುಕೊಳ್ಳಬೇಕು ಎಂದು ಶಿಕ್ಷಕರು ತಮ್ಮಲ್ಲಿ ಪ್ರಶ್ನಿಸಿಕೊಳ್ಳಬೇಕು. ಆಗ ತರಗತಿಯ ಎಲ್ಲ ವಿದ್ಯಾರ್ಥಿಗಳು ಬುದ್ಧಿವಂತರಾಗುತ್ತಾರೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ರಾಮಚಂದ್ರ ಶೆಟ್ಟಿ ಹೇಳಿದರು.ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಯೋಗ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ನಡೆದ ಆರು ದಿನಗಳ ರಾಷ್ಟ್ರೀಯ ಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು.
ಈ ಪೀಳಿಗೆಯಲ್ಲಿ ಶಿಕ್ಷಕರುತಮ್ಮನ್ನು ತಾವು ನವೀಕರಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಇಲ್ಲದಿದ್ದರೆ ಅವರು ಪ್ರಸ್ತುತ ತಂತ್ರಜ್ಞಾನದಿಂದ ಮತ್ತು ಪ್ರಸ್ತುತ ಕಲಿಕಾ ಮಾಧ್ಯಮದಿಂದ ಹಿಂದುಳಿಯುತ್ತಾರೆ. ಆದ್ದರಿಂದ ತರಬೇತಿಯ ಅಗತ್ಯವಿದೆ ಎಂದರು.ರಾಷ್ಟ್ರೀಯ ಪ್ರಕೃತಿ ಚಿಕಿತ್ಸೆ ಸಂಸ್ಥೆಯ ನಿರ್ದೇಶಕಿ ಪ್ರೊ.ಕೆ. ಸತ್ಯಲಕ್ಷ್ಮಿ ಮಾತನಾಡಿ ಆಳ್ವಾಸ್ ಕಾಲೇಜು ಕೈಗೊಂಡ ಉಪಕ್ರಮಗಳಿಂದ ಸಂತೋಷವಾಗಿದೆ. ನವಪೀಳಿಗೆ ಬದಲಾಗುತ್ತಿದ್ದು, ಹೊಸ ತಂತ್ರಜ್ಞಾನಗಳು ಬರುತ್ತಿದ್ದು, ಶಿಕ್ಷಕರು ನವೀಕರಣಗೊಳ್ಳುವುದು ಅಗತ್ಯ. ಈ ರೀತಿಯ ಕಾರ್ಯಕ್ರಮಗಳು ಶಿಕ್ಷಕರಿಗೆ ಅವಶ್ಯಕವಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಬೋಧಿಸುವುದು ಮಾತ್ರ ಶಿಕ್ಷಕರ ಕೆಲಸವಲ್ಲ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದು ಶಿಕ್ಷಕರ ಕೆಲಸ. ಶಿಕ್ಷಕರಾಗಿ ನಾವು ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕು ಎಂದರು.ಆಳ್ವಾಸ್ ಔಷಧ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್, ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ರೋಶನ್ ಪಿಂಟೋ, ಯೋಗ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಇದ್ದರು. ಆಳ್ವಾಸ್ ಪ್ರಕೃತಿ ಚಿಕಿತ್ಸೆ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ ಸ್ವಾಗತಿಸಿದರು. ಅಜು ಪೌಲ್ ನಿರೂಪಿಸಿದರು. ಪ್ರಾಧ್ಯಾಪಕಿ ಅಕ್ಷತಾ ವಂದಿಸಿದರು.