26ರಂದು ನಡೆಯಲಿರುವ ಪ್ರತಿಭಟನೆ ಯಶಸ್ವಿಗೊಳಿಸಲು ಸಿಪಿಎಂ ಮನವಿ

KannadaprabhaNewsNetwork |  
Published : Sep 25, 2025, 01:00 AM IST
24ಜಿಯುಡಿ3 | Kannada Prabha

ಸಾರಾಂಶ

ಬಡ ಹಾಗೂ ಕೂಲಿಕಾರ್ಮಿಕರ ಪರಿಸ್ಥಿತಿ ಹದಗೆಟ್ಟು ಹೋಗಿದೆ, ಸರ್ಕಾರದ ನಿಯಮಗಳಿಂದ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಇ- ಸ್ವತ್ತು ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ, ಗ್ರಾಮೀಣ ಪ್ರದೇಶದಲ್ಲಿ ಚರಂಡಿಗಳನ್ನು ಸ್ವಚ್ಛ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದೆ,

ಕನ್ನಡಪ್ರಭ ವಾರ್ತೆ ಗುಡಿಬಂಡೆ

ನಿವೇಶನ, ಇ- ಖಾತೆ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಳೀಯ ಸಮಸ್ಯೆಗಳ ಕುರಿತಂತೆ ಸೆ.26 ರಂದು ಗ್ರಾಪಂ ಮಟ್ಟದಲ್ಲಿ ಏಕಕಾಲದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಹಾಗೂ ಸಹಕಾರ ನೀಡಬೇಕೆಂದು ಸಿಪಿಎಂ ಮುಖಂಡರು ಮನವಿ ಮಾಡಿದರು.

ಪಟ್ಟಣದ ಸಿಪಿಎಂ ಕಚೇರಿಯಲ್ಲಿ ಈ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಜಯರಾಮರೆಡ್ಡಿ, ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಇಂದು ಗ್ರಾಮೀಣ ಭಾಗಗಳ ಪರಿಸ್ಥಿತಿ ನೋಡಿದರೆ ದೇಶ ಯಾವ ರೀತಿ ಉದ್ಧಾರವಾಗಿದೆ ಎಂಬುದು ತಿಳಿಯುತ್ತದೆ. ಇಂದಿಗೂ ಅನೇಕ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಸಹ ಇಂದಿನ ಸರ್ಕಾರಗಳು ಗ್ರಾಮೀಣ ಭಾಗಗಳನ್ನು ಉದ್ಧಾರ ಮಾಡುವುದರತ್ತ ಗಮನ ಹರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸಿಪಿಎಂ ಪಕ್ಷ ಸೆ.26 ರಂದು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಪ್ರತಿಭಟನೆಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಬಳಿಕ ಸಿಪಿಎಂ ತಾಲೂಕು ಸಮಿತಿ ಸದಸ್ಯ ಆದಿನಾರಾಯಣ ಮಾತನಾಡಿ, ಬಡ ಹಾಗೂ ಕೂಲಿಕಾರ್ಮಿಕರ ಪರಿಸ್ಥಿತಿ ಹದಗೆಟ್ಟು ಹೋಗಿದೆ, ಸರ್ಕಾರದ ನಿಯಮಗಳಿಂದ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಇ- ಸ್ವತ್ತು ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ, ಗ್ರಾಮೀಣ ಪ್ರದೇಶದಲ್ಲಿ ಚರಂಡಿಗಳನ್ನು ಸ್ವಚ್ಛ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದೆ, ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ ಎಂದರು.

ಇನ್ನು ಸ್ಥಳೀಯವಾಗಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ ನಂತರ ಸಾರ್ವಜನಿಕರ ಸಮಸ್ಯೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಿ, ನಂತರ ತಾಲೂಕು ಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು. ಸಿಪಿಎಂ ಪಕ್ಷದ ಮುಖಂಡರಾದ ವೆಂಕಟರಾಜು, ಆದಿನಾರಾಯಣಸ್ವಾಮಿ. ರಮಣ .ದೇವರಾಜ್. ಸೋಮಶೇಖರ ರೆಡ್ಡಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿಗಳಾದ ಉಪ್ಪಾರಹಳ್ಳಿ ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.

--------

ಸೆ.26 ರಂದು ಸಿಪಿಎಂ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆಯ ಕುರಿತು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ