ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಅಡ್ಡದಾರಿ ಹಿಡಿಯಲು ನೂರು ದಾರಿ, ಗುರಿ ಸಾಧಿಸಲಿಕ್ಕೆ ಒಂದೇ ದಾರಿ, ಅದು ಪರಿಶ್ರಮದ ದಾರಿ ಎಂದು ಶಿವಗಂಗೆಯ ಶ್ರೀಕ್ಷೇತ್ರದ ಮೇಲಣಗವಿ ವೀರ ಸಿಂಹಾಸನ ಮಠದ ಶ್ರೀ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ನಗರದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ 2024- 25ನೇ ಸಾಲಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಈ ಭಾಗದ ಶಾಸಕರಾದ ಪುಟ್ಟಸ್ವಾಮಿಗೌಡರು ಸೇವೆ ಮಾಡಲು ಅಧಿಕಾರಕ್ಕೆ ಬಂದಿದ್ದಾರೆ ಎಂದು ಶಾಸಕರ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು.ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಮಾತನಾಡಿ, ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇತರೆ ವಿದ್ಯಾರ್ಥಿಗಳಿಗೆ ಇದು ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು
ಶಿಕ್ಷಣವೆನ್ನುವುದು ಹುಲಿಯ ಹಾಲಿದ್ದಂತೆ, ಇದನ್ನು ಕುಡಿದವರು ಘರ್ಜಿಸಲೇಬೇಕು ಎನ್ನುವಂತೆ ಈಗಿನ ಕಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಶಿಕ್ಷಣದಿಂದ ಸಂಘಟಿತರಾಗಬೇಕು. ವಿದ್ಯೆಯಿಂದ ವಿನಯತೆ, ಸಂಸ್ಕಾರ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಗಳಿಗೇರಲು ಶ್ರಮಪಡಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿಧ್ಯಾರ್ಥಿಗಳು ಹೆಚ್ಚು ಅಂಕ ಪಡೆದು ಉಳಿದ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಬೇಕೆಂದು ತಿಳಿಸಿದರು.ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ ಮಾತನಾಡಿ, ಶಾಸಕರಿಂದ ಪುರಸ್ಕರಿಸಲ್ಪಟ್ಟ ಪ್ರತಿಭಾವಂತ ವಿದ್ಯಾರ್ಥಿಗಳು ಮತಷ್ಟು ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಪದವಿ ಪಡೆಯಲಿ ಎಂದರು.
ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ತಾಲೂಕಿನಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ. ತಾಲೂಕಿನಾದ್ಯಂತ ಎಸ್ಸೆಸ್ಸೆಲ್ಸಿಯಲ್ಲಿ 250 ಮತ್ತು ಪಿಯುಸಿಯಲ್ಲಿ 50 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಆರ್. ಆಶೋಕ್ ಕುಮಾರ್, ಕೊಚಿಮುಲ್ ಮಾಜಿ ನಿರ್ದೇಶಕ ಕಾಂತರಾಜು, ಕ್ಷೇತ್ರಶಿಕ್ಷಣಾಧಿಕಾರಿ ಗಂಗರೆಡ್ಡಿ, ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ವೆಂಕಟರಾಮರೆಡ್ಡಿ, ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.