ಹಗರಿಬೊಮ್ಮನಹಳ್ಳಿ: ೧೬ ವರ್ಷಗಳ ಹಿಂದೆ ಕಾರ್ಖಾನೆಗಳಿಗಾಗಿ ಬಳ್ಳಾರಿ ತಾಲೂಕಿನ ಕುಡಿತಿನಿ ಗ್ರಾಮದಲ್ಲಿ ಸಂಪದ್ಭರಿತ ಭೂಮಿಗಳ ಖರೀದಿ ಬೆಲೆಯಲ್ಲಿ ಮಾನದಂಡ ಅನುಸರಿಸದೇ ಸರ್ಕಾರ ಕೆಐಎಡಿಬಿ ಮೂಲಕ ಬಲವಂತವಾಗಿ ರೈತರ ಜಮೀನುಗಳನ್ನು ಖರೀದಿಸಿರುವುದು ಖಂಡನೀಯ ಎಂದು ಸಿಪಿಎಂ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆರ್.ಎಸ್. ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದರು.ಆರ್ಸೆಲರ್ ಮಿತ್ತೆಲ್, ಬ್ರಹ್ಮಿಣಿ, ವಿಜಯನಗರ ಸ್ಟೀಲ್ ಕೈಗಾರಿಕೆಗಳಿಗಾಗಿ ಬಲವಂತವಾಗಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡಿರುವುದನ್ನು ಖಂಡಿಸಿ ಭೂ ಸಂತ್ರಸ್ತ ಕುಟುಂಬಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಆಗ್ರಹಿಸಿದರು.
ಸಿಪಿಎಂ ತಾಲೂಕು ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ರೈತರಿಂದ ಎಕರೆಗೆ ಐದಾರು ಲಕ್ಷ ರು.ನಂತೆ ಖರೀದಿಸಿರುವ ಕೆಐಎಡಿಬಿ ಈಗ ಎಕರೆಗೆ ₹೧.೨೫ ಕೋಟಿಗೆ ಮಾರಾಟಕ್ಕಿಟ್ಟಿದೆ. ಈ ಬೃಹತ್ ವಂಚನೆಯ ಜಾಲದಲ್ಲಿ ರೈತರಿಗೆ ₹೨೦,೦೦೦ ಕೋಟಿ ನಷ್ಟವಾಗಿದೆ. ಇದೊಂದು ಬಳ್ಳಾರಿ ರಿಪಬ್ಲಿಕ್ ಹಾಗೂ ಯಡಿಯೂರಪ್ಪನವರ ಕಾಲದ ರೈತರನ್ನು ವಂಚಿಸಿರುವ ಬೃಹತ್ ಭ್ರಷ್ಟಾಚಾರದ ಪ್ರಕರಣವಾಗಿದೆ ಎಂದು ಕಿಡಿಕಾರಿದರು.
ಯಾವ ಸರ್ಕಾರಗಳು ಕೂಡ ರೈತರ ಹಿತಾಸಕ್ತಿ ಕಾಯುತ್ತಿಲ್ಲ ಎಂದು ಆರೋಪಿಸಿದ ಅವರು, ರೈತರನ್ನು ವಂಚಿಸಿರುವ ಗಂಭೀರ ಪ್ರಕರಣದ ತನಿಖೆಗೆ ಆಗ್ರಹಿಸಿ ಸಂತ್ರಸ್ತ ರೈತ ಕುಟುಂಬಗಳು ಜನಪರ ಸಂಘಟನೆಗಳ ನೇತೃತ್ವದಲ್ಲಿ ಕರೆ ನೀಡಿರುವ ಬಳ್ಳಾರಿ ಜಿಲ್ಲಾ ಬಂದ್‌ಗೆ ಪಕ್ಷವು ಬೆಂಬಲ ವ್ಯಕ್ತಪಡಿಸುತ್ತದೆ. ಅಲ್ಲಿನ ಭೂಸಂತ್ರಸ್ತರ ಜೊತೆ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಮಾನವೀಯತೆಯ ಹಿನ್ನೆಲೆಯಲ್ಲಿ ಚರ್ಚಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ತಹಸೀಲ್ದಾರ್ ಕವಿತಾ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪಕ್ಷದ ಪದಾಧಿಕಾರಿಗಳಾದ ಎಸ್.ಜಗನ್ನಾಥ್, ಆನಂದ್, ರಾಮಾಂಜನೇಯ, ರಮೇಶ್ , ಚಾಂದಬೀ, ಉಸ್ಮಾನ್ ಭಾಷಾ ಇದ್ದರು.