ಸಂಡೂರು: ಬೆಲೆ ಏರಿಕೆ ತಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಎಂ ಪಕ್ಷದ ಮುಖಂಡರು ಬುಧವಾರ ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ನೂರು ಕೋಟಿ ಹಗರಣವನ್ನು ನ್ಯಾಯಾಂಗ ತನಿಖೆಗೆ ಕೊಡಬೇಕು. ಇತರೆ ಸಮುದಾಯಗಳ ಅಭಿವೃದ್ಧಿ ನಿಗಮಗಳಲ್ಲಿನ ಹಣಕಾಸು ನಿರ್ವಹಣೆಯನ್ನು ತನಿಖೆಗೆ ಒಳಪಡಿಸಬೇಕು. ಭೂಹಂಚಿಕೆಯನ್ನು ಭೂ ಸ್ವಾಧೀನ ಕ್ರಮಗಳ ಮೂಲಕ ಮತ್ತು ಈ ಸಮುದಾಯಗಳ ಫಲಾನುಭವಿಗಳಿಗಾಗಿ ಪ್ರತಿ ವರ್ಷ ಅರ್ಜಿ ಕರೆಯುವುದನ್ನು ನಿಲ್ಲಿಸಬೇಕು. ಇದಕ್ಕಾಗಿ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ ೫೦೦ ಎಕರೆ ಜಮೀನು ಒದಗಿಸಬೇಕು. ಪೂರ್ವ ಪ್ರಾಥಮಿಕ ಶಾಲೆಗಳನ್ನು ಅಂಗನವಾಡಿಗಳ ಮೂಲಕವೇ ನಡೆಸಬೇಕು ಎಂದರು.
ಅಕಾಡೆಮಿ ಮತ್ತು ಪ್ರಾಧಿಕಾರಗಳ ಸ್ವಾಯತ್ತತೆ ಬಲಪಡಿಸಬೇಕು. ಎಲ್ಲ ರೀತಿಯ ಗುತ್ತಿಗೆ, ಗೌರವಧನ, ಅತಿಥಿ ಹೆಸರಿನ ಪದ್ಧತಿಯನ್ನು ರದ್ದುಗೊಳಿಸಬೇಕು. ಅವರ ಉದ್ಯೋಗವನ್ನು ಖಾಯಂಗೊಳಿಸಬೇಕು. ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಶಿಕ್ಷಣ ಪೂರೈಸಿದ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವವರೆಗೆ ಮಾಸಿಕ ಕನಿಷ್ಠ ₹೧೦,೦೦೦ ನಿರುದ್ಯೋಗ ಭತ್ಯೆ ನೀಡಬೇಕು. ಸತತ ಬರಗಾಲ ಹಾಗೂ ಅತಿವೃಷ್ಟಿಯ ಹಿನ್ನೆಲೆಯಲ್ಲಿ ರೈತರ, ಕೂಲಿಕಾರರ, ದಲಿತರ ಹಾಗೂ ಮಹಿಳೆಯರ ಎಲ್ಲ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಖಲಂದರ್ ಬಾಷ, ಮುಖಂಡರಾದ ಮಾರಪ್ಪ, ಪಕ್ಕೀರಪ್ಪ ಹಾಗೂ ಕುಮಾರಸ್ವಾಮಿ ಉಪಸ್ಥಿತರಿದ್ದರು.