ನಮ್ಮಲ್ಲಿ ಡೆಂಘೀ ಪ್ರಕರಣಗಳು ನಿಯಂತ್ರಣದಲ್ಲಿ ಇವೆ. ಇದು ಹೆಚ್ಚಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ.
ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು ಇದರಿಂದ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಡೆಂಘೀ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.ತಮ್ಮ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಡೆಂಘೀ ನಿಯಂತ್ರಣ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 3493 ಜನರಿಗೆ ಪರೀಕ್ಷೆ ನಡೆಸಿದ್ದು, ಇದರಲ್ಲಿ 481 ಜನರಿಗೆ ಡೆಂಘೀ ಪ್ರಕರಣಗಳು ಕಂಡು ಬಂದಿದ್ದು, ಶೇ.14 ಪ್ರಕರಣಗಳು ಕಂಡು ಬಂದಿವೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ನಲ್ಲಿ ಶೇ.18 ಇದ್ದು, ಈಗ ಶೇ.11 ಡೆಂಘೀ ಪ್ರಕರಣಗಳು ಇಳಿದಿವೆ ಎಂದು ತಿಳಿಸಿದರು. ನಮ್ಮಲ್ಲಿ ಡೆಂಘೀ ಪ್ರಕರಣಗಳು ನಿಯಂತ್ರಣದಲ್ಲಿ ಇವೆ. ಇದು ಹೆಚ್ಚಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ. ಡೆಂಘೀ ಸೊಳ್ಳೆಗಳ ಕಡಿತದಿಂದ ಬರುತ್ತದೆ. ಸೊಳ್ಳೆಗಳು ನಿಂತ ನೀರಿನಲ್ಲಿ ಉತ್ಪತ್ತಿ ಆಗುತ್ತವೆ. ಬಸ್ ಡಿಪೊಗಳು, ಚರಂಡಿಗಳು, ಹಳೆಯ ಟೈರ್ ಗಳು, ತೆಂಗಿನ ಚಿಪ್ ಗಳಲ್ಲಿ, ನೀರಿನ ತೊಟ್ಟಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಜನರಿಗೆ ಈ ಕುರಿತು ಅರಿವು ಮೂಡಿಸಬೇಕು ಎಂದರು.ನಿಯಮಿತವಾಗಿ ಫಾಗಿಂಗ್ ಮಾಡಿಸಬೇಕು. ಇದರಿಂದಲೂ ಜನರಿಗೆ ಡೆಂಘೀ ಕುರಿತು ಅರಿವು ಮೂಡಿಸಬೇಕು. ಈ ಸಂಬಂಧ ಗ್ರಾಮ ಪಂಚಾಯಿತಿಗಳು, ಪುರಸಭೆ ನಗರಸಭೆ, ಕಾರ್ಯ ನಿರ್ವಹಿಸಬೇಕು. ಶುದ್ಧ ಕುಡಿಯುವ ನೀರು ಪೂರೈಸುತ್ತಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪ್ರತಿದಿನ ಪರಿಶೀಲನೆ ನಡೆಸಬೇಕು. ನಿಯಮಿತವಾಗಿ ನೀರಿನ ಟ್ಯಾಂಕ್ ಗಳು ಹಾಗೂ ಓವರ್ ಹೆಡ್ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಬೇಕು ಎಂದು ಅವರು ಸೂಚಿಸಿದರು. ಗ್ಯಾಂಬುಷಿಯಾ ಮತ್ತು ಗಂಪ್ಪಿ ಪಿಶ್ ಗಳನ್ನು ನೀರಿನ ತೊಟ್ಟಿಗಳಲ್ಲಿ ಬಿಡಬೇಕು. ಪಾರ್ಕ್ ಮತ್ತು ಜನರು ಹೆಚ್ಚು ಇರುವ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಜನರು ಡೆಂಘೀ ಕುರಿತು ಆತಂಕ ಬೇಡ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ ಎಂದು ಅವರು ತಿಳಿಸಿದರು.ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.ಖಾಸಗಿ ಆಸ್ಪತ್ರೆಗಳು ಡೆಂಘೀ ಪ್ರಕರಣಗಳು ಕಂಡು ಬಂದರೆ ಮಾಹಿತಿ ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಡೆಂಘೀ ಚಿಕಿತ್ಸೆಗೆ ನಿಗದಿತ ದರವನ್ನು ಮಾತ್ರ ವಿಧಿಸಬೇಕು. ಹೆಚ್ಚಿನ ದರ ಪಡೆದರೆ ಸಂಬಂಧಿಸಿದ ಆಸ್ಪತ್ರೆ ಮೇಲೆ ಕ್ರಮ ಕೈಗೊಳ್ಳಲಾಗುವುದು.- ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.