ಉಪ್ಪಿನಂಗಡಿ: ಪುತ್ತೂರು-ಬೆಳ್ತಂಗಡಿ ತಾಲೂಕಿನ ಸಂಪರ್ಕಕೊಂಡಿ ಉಪ್ಪಿನಂಗಡಿಯಲ್ಲಿನ ನೇತ್ರಾವತಿ ಸೇತುವೆಯಲ್ಲಿ ಬಿರುಕು ಬಿಟ್ಟಂತೆ ಕಾಣಿಸುತ್ತಿದ್ದು, ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾದೀತೇ ಎಂಬ ಶಂಕೆ ಉಂಟಾಗಿದೆ.
೬೦ ವರ್ಷಗಳ ಇತಿಹಾಸ ಹೊಂದಿರುವ ಈ ಸೇತುವೆ ಅಂದಿನ ಮೈಸೂರು ಸರಕಾರವು ಲೋಕೋಪಯೋಗಿ ಇಲಾಖೆಯ ಅನುದಾನದಡಿ ರಚಿಸಲ್ಪಟ್ಟಿದ್ದು, ಹಣಕಾಸು ಸಚಿವ ಬಿ.ಆರ್. ಭಗತ್ ಉದ್ಘಾಟಿಸಿದ್ದರು. ಇದರಿಂದಾಗಿ ಇಳಂತಿಲ ಗ್ರಾಮದ ಕಡವಿನಬಾಗಿಲ ಮೂಲಕ ಪ್ರಯಾಣಿಕ ವಾಹನಗಳು ನದಿ ದಾಟುವ, ಮಳೆಗಾಲದಲ್ಲಿ ಕಡವಿಬಾಗಿಲಲ್ಲಿ ಪ್ರಯಾಣಿಕರನ್ನು ಇಳಿಸಿ ದೋಣಿ ಮೂಲಕ ಪ್ರಯಾಣಿಕರು ನದಿಯನ್ನು ದಾಟಿ ಬೇರೊಂದು ಬಸ್‌ನಲ್ಲಿ ಪ್ರಯಾಣ ಮುಂದುವರಿಸುವ ತ್ರಾಸದಾಯಕ ವ್ಯವಸ್ಥೆಗಳು ನಿಂತು ಹೋಗಿ ನೇರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಾತ್ರವಲ್ಲದೆ ಅಂತರ್ ಜಿಲ್ಲಾ ಪ್ರಯಾಣವು ಪ್ರಾರಂಭಗೊಂಡಿತ್ತು.
ಮೇಲಾಗಿ ಅಂದಿನ ಈ ಭಾಗದ ಏಕೈಕ ವ್ಯಾವಹಾರಿಕ ಕೇಂದ್ರವಾಗಿದ್ದ ಉಪ್ಪಿನಂಗಡಿಗೆ ಬೆಳ್ತಂಗಡಿ ತಾಲೂಕಿನ ಇಳಂತಿಲ, ಕರಾಯ, ತಣ್ಣೀರುಪಂತ, ಕುಪ್ಪೆಟ್ಟಿ, ಹಲೇಜಿ ಜಾರಿಗೆಬೈಲು, ಗೇರುಕಟ್ಟೆ, ಗುರುವಾಯನಕೆರೆ, ಬಂದಾರು, ಪದ್ಮುಂಜ ಪ್ರದೇಶದ ಜನರು ನಿರಾತಂಕವಾಗಿ ಬರಲು ಅನುಕೂಲ ಲಭಿಸಿತ್ತು. ಒಟ್ಟಾರೆ ಜನರ ಬದುಕಿಗೆ ಹೊಸ ದಿಕ್ಕು ನೀಡಿದ್ದ ಉಪ್ಪಿನಂಗಡಿಯ ನೇತ್ರಾವತಿ ಸೇತುವೆ ಇದೀಗ ಬಿರುಕು ಬಿಟ್ಟಿದೆ ಎಂಬ ಅನುಮಾನ ಕಳವಳ ಮೂಡಿಸುತ್ತಿದೆ. ಕಳೆದೊಂದು ವರ್ಷದಿಂದ ಮೂಡುಬಿದಿರೆ ಕಡೆಯಿಂದ ಮೈಸೂರು ಕಡೆಗೆ ಸಾವಿರಾರು ಘನ ವಾಹನಗಳಲ್ಲಿ ಮಿತಿ ಮೀರಿದ ಮಣ್ಣು ಸಾಗಾಟ ಇದೇ ಸೇತುವೆ ಮೇಲಿಂದ ನಡೆಯುತ್ತಿದ್ದು, ಈ ಕಾರಣದಿಂದ ಸೇತುವೆಯಲ್ಲಿ ಬಿರುಕು ಮೂಡಿರಬಹುದೆಂದು ಸ್ಥಳೀಯರು ಅಂದಾಜಿಸಿದ್ದಾರೆ. ಈ ನಡುವೆ ಸೇತುವೆಯ ಫಿಲ್ಲರ್ ಗಳ ಕಾಂಕ್ರೀಟ್ ಕಿತ್ತು ಹೋಗಿದ್ದು, ಒಳಗಿನ ಕಬ್ಬಿಣದ ಸರಳು ಕಾಣಿಸುತ್ತಿದೆ.ಸೇತುವೆಯ ಸ್ಲ್ಯಾಬ್ ನಲ್ಲಿ ಅಶ್ವಥ ಗಿಡಗಳು ಮರವಾಗಿ ಬೆಳೆಯುತ್ತಿದ್ದು, ಅದರ ಬೇರುಗಳು ಕಾಂಕ್ರೀಟ್ ಪಟ್ಟಿಗಳನ್ನು ಛೇದಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಸೇತುವೆಯ ದುರ್ಬಲತೆಗೆ ಇದೂ ಪರೋಕ್ಷ ಕಾರಣವಾಗಿರಬಹುದು. ಈ ಸೂಕ್ಷ್ಮತೆಗಳನ್ನು ಗಮನಿಸಿ, ಸಮಸ್ಯೆಗಳನ್ನು ನಿವಾರಿಸುವ ವ್ಯವಸ್ಥೆಯನ್ನು ಸಂಬಂಧಿತ ಇಲಾಖೆ ನಡೆಸಬೇಕಾಗಿದೆ.
*ರಸ್ತೆ ಮತ್ತು ಸೇತುವೆ ಸುಸ್ಥಿತಿ ಬಗ್ಗೆ ಇಲಾಖಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಬೇಕಾಗಿದೆ. ಸೇತುವೆಯಲ್ಲಿ ಕಾಣಿಸುತ್ತಿರುವ ಬಿರುಕಿನಂತಹ ದೃಶ್ಯ ನಿಜವಾಗಿಯೂ ಅಪಾಯಕಾರಿಯಾಗಿರುವುದೇ ಎನ್ನುವುದನ್ನು ಅಧ್ಯಯನಕ್ಕೊಳಪಡಿಸಬೇಕಾಗಿದೆ. ಮಾತ್ರವಲ್ಲದೆ ಸೇತುವೆಯ ಸ್ಲ್ಯಾಬ್ ನಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಸೇತುವೆಯ ನಿರ್ವಹಣೆಯನ್ನು ಕಾಲ ಕಾಲಕ್ಕೆ ನಡೆಸಬೇಕಾಗಿದೆ. -ತಿಮ್ಮಪ್ಪ ಗೌಡ ಗ್ರಾಪಂ ಮಾಜಿ ಅಧ್ಯಕ್ಷ