ಕಸ್ತೂರ್ಬಾ ಆಸ್ಪತ್ರೆ: 12 ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆ ಯಶಸ್ವಿ

KannadaprabhaNewsNetwork |  
Published : Jul 08, 2026, 02:45 AM IST
ಕೆಎಂಸಿ | Kannada Prabha

ಸಾರಾಂಶ

ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಅಪರೂಪದ, ಅತ್ಯಂತ ಸಂಕೀರ್ಣ ಮತ್ತು ಅತ್ಯಂತ ದೀರ್ಘಾವಧಿಯ ಶಸ್ತ್ರಕ್ರಿಯೆ ಯಶಸ್ವಿಯಾಗಿ ನಡೆಸಿದ್ದು, ರೋಗಿ ಚೇತರಿಸಿಕೊಂಡಿದ್ದಾರೆ.

ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಅಪರೂಪದ, ಅತ್ಯಂತ ಸಂಕೀರ್ಣ ಮತ್ತು ಅತ್ಯಂತ ದೀರ್ಘಾವಧಿಯ ಶಸ್ತ್ರಕ್ರಿಯೆ ಯಶಸ್ವಿಯಾಗಿ ನಡೆಸಿದ್ದು, ರೋಗಿ ಚೇತರಿಸಿಕೊಂಡಿದ್ದಾರೆ.ಶಿವಮೊಗ್ಗದ 63 ವರ್ಷದ ರೋಗಿಯು ಒಂದು ತಿಂಗಳಿನಿಂದ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತಪಾಸಣೆಗೊಳಪಡಿಸಿ ಅವರ ಎಡ ಮೂತ್ರಪಿಂಡದಲ್ಲಿ ದೊಡ್ಡ ಗಾತ್ರದ ಕ್ಯಾನ್ಸರ್ ಗೆಡ್ಡೆ ಇರುವುದನ್ನು ಪತ್ತೆಹಚ್ಚಲಾಯಿತು. ಈ ಗೆಡ್ಡೆಯು ದೇಹದ ಅತಿದೊಡ್ಡ ರಕ್ತನಾಳವಾದ ವೆನಾ ಕ್ಯಾವಾ ಮೂಲಕ ಹರಡಿ ಹೃದಯದ ಬಲ ಹೃತ್ಕರ್ಣದವರೆಗೆ ತಲುಪಿತ್ತು.

ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಚಾವ್ಲಾ ನೇತೃತ್ವದಲ್ಲಿ ಹೃದಯ, ಎದೆ ಮತ್ತು ರಕ್ತನಾಳಗಳ ಶಸ್ತ್ರಚಿಕಿತ್ಸೆ ವಿಭಾಗದ ತಜ್ಞರು ಸಮನ್ವಯತೆಯಿಂದ ಶಸ್ತ್ರಚಿಕಿತ್ಸೆಯ ಸಮಗ್ರ ಯೋಜನೆ ರೂಪಿಸಿದರು. ರೋಗಿಯು ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆ ಹಾಗೂ ಸೌಮ್ಯ ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಆದ್ದರಿಂದ ಮೊದಲು ಹೃದಯಶಾಸ್ತ್ರ ಮತ್ತು ಎಂಡೋಕ್ರಿನೊಲೊಜಿ ವಿಭಾಗಗಳ ತಜ್ಞರು ಅವರ ಸ್ಥಿತಿ ಮೌಲ್ಯಮಾಪನ ಮಾಡಿ, ಶಸ್ತ್ರಚಿಕಿತ್ಸೆಗೆ ಸೂಕ್ತವಾಗುವಂತೆ ಚಿಕಿತ್ಸೆ ನೀಡಿದರು.ನಂತರ ಮೊದಲ ಹಂತದಲ್ಲಿ ಮೂತ್ರಶಾಸ್ತ್ರ ತಜ್ಞರು ಕ್ಯಾನ್ಸರ್ ಪೀಡಿತ ಮೂತ್ರಪಿಂಡ ತೆರವುಗೊಳಿಸಿದರು. ನಂತರ ಎದೆ - ಹೃದಯ ತಜ್ಞರು ಎದೆ ತೆರೆದು ರೋಗಿಯನ್ನು ತಾತ್ಕಾಲಿಕ ಹೃದಯ - ಶ್ವಾಸಕೋಶ ಯಂತ್ರಕ್ಕೆ ಸಂಪರ್ಕಿಸಿದರು. ನಂತರ, ಮೆದುಳು ಸೇರಿದಂತೆ ಪ್ರಮುಖ ಅಂಗಗಳನ್ನು ರಕ್ಷಿಸುವುದಕ್ಕಾಗಿ ರೋಗಿಯ ದೇಹದ ಉಷ್ಣತೆಯನ್ನು 22 ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಲಾಯಿತು.ಬಳಿಕ ರಕ್ತದ ಪರಿಚಲನೆ ಕೆಲಕಾಲ ಸಂಪೂರ್ಣ ಸ್ಥಗಿತಗೊಳಿಸಲಾಯಿತು. ಹೃದಯದ ಬಲ ಹೃತ್ಕರ್ಣ ಹಾಗೂ ಕೆಳಗಿನ ವೆನಾ ಕ್ಯಾವಗಳನ್ನು ಏಕಕಾಲದಲ್ಲಿ ತೆರೆದು ಗೆಡ್ಡೆ ಸುರಕ್ಷಿತವಾಗಿ ತೆರವುಗೊಳಿಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ ತೀವ್ರ ನಿಗಾ ಆರೈಕೆಯ ನಂತರ ಮೂರು ದಿನದಲ್ಲಿ ರೋಗಿಯು ನಡೆಯುವಷ್ಟು ಚೇತರಿಸಿಕೊಂಡರು. ಎರಡು ವಾರಗಳ ಬಳಿಕ ಆರೋಗ್ಯ ಸ್ಥಿರಗೊಂಡ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಈ ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಹೃದಯ ಎದೆ ಮತ್ತು ರಕ್ತನಾಳಗಳ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಶ್ಯಾಮ್ ಕೆ. ಹಾಗೂ ಡಾ. ಗಣೇಶ್ ಕಾಮತ್, ಮೂತ್ರಶಾಸ್ತ್ರ ತಜ್ಞರಾದ ಡಾ. ಅರುಣ್ ಚಾವ್ಲಾ ಹಾಗೂ ಡಾ. ಜಿ. ವಿ. ಶ್ರೀನಾಥ್ ಪ್ರಮುಖ ಪಾತ್ರ ವಹಿಸಿದರು. ಅರಿವಳಿಕೆ ತಜ್ಞರಾದ ಡಾ. ವಿಜಯ್ ಕುಮಾರ್, ಡಾ. ಸಾಯಿ ಕೃಷ್ಣ ನೆರವು ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಬಿ ಜಿ ರಾಮ್ ಜಿ ಯೋಜನೆ ಯಶಸ್ವಿಗೆ ಪಿಡಿಒಗಳಿಗೆ ಸಿಇಒ ಸೂಚನೆ
ಎಪಿಎಲ್ ಕಾರ್ಡ್‌ದಾರರಿಗೂ ‘ಆಯುಷ್ಮಾನ್’ ವಿಸ್ತರಣೆ: ಖಾದರ್