ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಜನತೆ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಲು ಮುಂದಾದರು. ಮನೆ ಮನೆಗಳಲ್ಲಿ ಗೌರಿ ಮೂರ್ತಿ, ಮರಳು ಗೌರಮ್ಮನನ್ನು ಪ್ರತಿಷ್ಠಾಪಿಸಿ ಪೂಜಿಸಿದರು.
ಪಟ್ಟಣದ ಬಳೆಗಾರ ವಂಶದ ಬಸೆಟ್ಟಿ ಅಯ್ಯನವರ ನಾಗೇಂದ್ರ ಸಾಂಪ್ರದಾಯಿಕ ಪೂಜೆ ಸಲ್ಲಿಸಲು ಪವಿತ್ರ ಗಂಗೆ ಪೂಜೆ ನೆರವೇರಿಸಿದರು. ಗಂಗೆಯಲ್ಲಿ ಮುಳುಗಿ ಕೈಗೆ ಸಿಕ್ಕ ಪವಿತ್ರ ವಸ್ತುವನ್ನು ಹಳದಿ ವಸ್ತ್ರದಲ್ಲಿ ಕಟ್ಟಿಕೊಂಡು ತಂದು ಮನೆಯಲ್ಲಿ ಗಂಗೆಗೌರಿ ಪೀಠದಲ್ಲಿ ಪ್ರತಿಷ್ಠಾಪಿಸಿ ವಿವಿಧ ಪರಿಮಳ ಪುಷ್ಪಗಳಿಂದ ಶೃಂಗರಿಸಿದರು.ವಿವಿಧ ಹಣ್ಣುಹಂಪಲುಗಳನ್ನು ಇಟ್ಟು ನೈವೇದ್ಯ ಅರ್ಪಿಸಿದರು. ಮಹಿಳೆಯರು ಗಂಗೆ-ಗೌರಿ ಪ್ರತಿಷ್ಠಾಪನೆ ಸ್ಥಳಕ್ಕೆ ತೆರಳಿ ಬಾಗಿನ ಅರ್ಪಿಸಿ ಮುಡಿತುಂಬಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಗಂಗಾಮತಸ್ಥ ಸಮುದಾಯದವರು ಅಮಾನಿಕೆರೆಯಲ್ಲಿ 3 ಬಾರಿ ಮುಳುಗಿ ಕೈಗೆ ಸಿಕ್ಕ ವಸ್ತುವನ್ನು ಗಂಗೆ ಗೌರಿ ಅಮ್ಮನವರಂತೆ ಹಳದಿ ಬಟ್ಟೆಯಲ್ಲಿ ಕಟ್ಟಿ ಪ್ರತ್ಯೇಕವಾಗಿ ತೊಟ್ಟಿಲುವಿನಲ್ಲಿ ಪ್ರತಿಷ್ಠಾಪಿಸಿದರು.
ಮಹಿಳೆಯರು, ಯುವತಿಯರು, ಪುಟಾಣಿ ಮಕ್ಕಳು ಹೊಸ ಬಟ್ಟೆತೊಟ್ಟು ಮನೆ ಎದುರು ರಂಗೋಲಿ ಬಿಡಿಸಿ ದೇವಿಯನ್ನು ಬರಮಾಡಿಕೊಂಡರು. ಪ್ರತಿ ಮನೆಗಳ ಮುಂದೆ ದೇವಿಗೆ ಬಾಗಿನ ಅರ್ಪಿಸಿ, ಹಣ್ಣು ಕಾಯಿ ನೀಡಿ ಕರ್ಪೂರದ ಆರತಿ ಬೆಳಗಿದರು.