ಅಳ್ನಾವರ: ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಯ ಸೌಲಭ್ಯದಿಂದ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ನೋಡಿಕೋಳ್ಳಿ ಎಂದು ಅಳ್ನಾವರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಾಯಕ ಕುರುಬರ ಅಧಿಕಾರಿಗಳಿಗೆ ಮತ್ತು ಸಮಿತಿ ಸದಸ್ಯರಿಗೆ ಸೂಚಿಸಿದರು.
ಸಮೀಪದ ಕಡಬಗಟ್ಟಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಆಯೋಜಿಸಿಲಾಗಿದ್ದ ಸಮಿತಿ ಮಾಸಿಕ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದರು.ಸರ್ಕಾರದ ಈ ಮಹಾತ್ವಾಕಾಂಕ್ಷಿ ಯೋಜನೆಗಳು ಯಶಸ್ವಿಗೊಳ್ಳಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯವಿದೆ. ವಿವಿದ ಕಾರಣಗಳಿಂದ ಸೌಲಭ್ಯ ಪಡೆಯದ ಕುಟುಂಬಗಳಿಗೆ ನಿಗದಿತ ಅವಧಿಯೊಳಗೆ ಯೋಜನೆಯ ಲಾಭ ಸಿಗುವಂತೆ ಕ್ರಮವಹಿಸಬೇಕು. ಮುಂಬರುವ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿಯೂ ಸಭೆಗಳನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುವುದು. ಅಳ್ನಾವರ-ಧಾರವಾಡ ನಡುವೆ ಮತ್ತು ತಾಲೂಕಿನ ಕಾಡಂಚಿನ ಭಾಗದ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ನೂತನ ಬಸ್‌ಗಳನ್ನು ಒದಗಿಸಲು ಉಸ್ತುವಾರಿ ಸಚಿವ ಸಂತೊಷ ಲಾಡ್ ಅವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.ಕಡಬಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೨೯೮ ಗೃಹಲಕ್ಷಿ ಫಲಾನುಭವಿಗಳಿದ್ದು ಐವರು ಯೋಜನೆಯಿಂದ ಹೊರಗುಳಿದಿದ್ದಾರೆ. ತಾಂತ್ರಿಕ ಸಮಸ್ಯೆ ಬಗೆಹರಿಸಿ ಯೋಜನೆ ವ್ಯಾಪ್ತಿಗೆ ಸೇರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಧಾ ಶಿರೋಳಕರ ತಿಳಿಸಿದರು.
ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ ೮೦೪೨ ಫಲಾನುಭವಿಗಳಿದ್ದಾರೆ. ಇವರಲ್ಲಿ ೭೮೭೨ ಜನ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ತಿಳಿಸಿದ ಆಹಾರ ನಿರೀಕ್ಷಕ ವಿನಾಯಕ ದೀಕ್ಷಿತ ಅವರು ವಿಟಾಮಿನ್‌ಯುಕ್ತ ಅಕ್ಕಿಯನ್ನು ಬೆರೆಸಿ ವಿತರಣೆ ಮಾಡುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರಲ್ಲಿ ಇರುವ ಪ್ಲಾಸ್ಟಿಕ ಅಕ್ಕಿಯ ಕಲ್ಪನೆ ದೂರ ಮಾಡಿಕೊಳ್ಳಬೇಕು ಎಂದರು.ತಾಪಂ ಯೋಜನಾಧಿಕಾರಿ ಪ್ರಕಾಶ ಹಾಲಮತ, ಗ್ರಾಪಂ ಅಧ್ಯಕ್ಷ ರಾಜಶೇಖರ ಬೇಕ್ವಾಡಕರ, ಪಿಡಿಒ ಆನಂದ ಪಾಟೀಲ, ಕಾರ್ಯದರ್ಶಿ ಷಣ್ಮುಖ ಸುಳಗೇಕರ, ಹೆಸ್ಕಾಂ ಶಾಖಾಧಿಖಾರಿ ಕೆ.ಎಲ್. ನಾಯಕ, ಸಾರಿಗೆ ನಿಯಂತ್ರಣಾಧಿಕಾರಿ ಸುರೇಶ ಕಲ್ಲವಡ್ಡರ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರು ಮತ್ತಿತರರು ಇದ್ದರು.