ಮಾಗಡಿಯಲ್ಲಿ ಮನೆಮನೆಗಳಲ್ಲಿ ಮುತ್ತೈದೆಯರಿಂದ ಗೌರಿ ಪೂಜೆ

KannadaprabhaNewsNetwork |  
Published : Sep 07, 2024, 01:33 AM IST
6ಮಾಗಡಿ1: ಮಾಗಡಿ ಪಟ್ಟಣದ ಗೌರಮ್ಮನ ಕೆರೆ ಬಳಿ ಇರುವ ಪ್ರಸನ್ನ ರಾಮೇಶ್ವರ ಸ್ವಾಮಿ ದೇವಾಲಯದಲ್ಲಿ ಗೌರಮ್ಮನ ಪ್ರತಿಷ್ಠಾಪಿಸಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು.6ಮಾಗಡಿ2 : ಮಾಗಡಿ ತಾಲೂಕಿನ ವೀರೇಗೌಡನದೊಡ್ಡಿ ಗ್ರಾಮದಲ್ಲಿ ಚಂದ್ರಮೌಳೇಶ್ವರ ದೇವಾಲಯದಲ್ಲಿ ಗೌರಮ್ಮನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು.  | Kannada Prabha

ಸಾರಾಂಶ

ಗೌರಿ ಹಬ್ಬದ ಹಿನ್ನೆಲೆಯಲ್ಲಿ ಮಾಗಡಿ ತಾಲೂಕಿನ ಮನೆಗಳಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ, ನಂತರ ಮುತ್ತೈದೆಯರಿಗೆ ಮರದ ಬಾಗಿನ ಅರ್ಪಿಸಿ ಗೌರಿ ಹಬ್ಬವನ್ನು ಭಕ್ತಿಯಿಂದ ಮಹಿಳೆಯರು ಆಚರಿಸಿದ್ದು ಕಂಡುಬಂದಿತ್ತು.

ತಾಲೂಕಲ್ಲಿ ಗೌರಿ ಹಬ್ಬದ ಸಂಭ್ರಮ । ಗೌರಮ್ಮನ ಕೆರೆಯಲ್ಲಿ ದೊರೆತ ಗರಿಕೆ । ರೈತರ ಬೆಳೆಗೆ ಸುಗ್ಗಿಕಾಲ ಸೂಚನೆ ಕನ್ನಡಪ್ರಭ ವಾರ್ತೆ ಮಾಗಡಿ

ತಾಲೂಕಿನಲ್ಲಿ ಶುಕ್ರವಾರ ಶ್ರದ್ಧಾ- ಭಕ್ತಿಯಿಂದ ಗೌರಿ ಹಬ್ಬವನ್ನು ಸಡಗರ- ಸಂಭ್ರಮದಿಂದ ಮಹಿಳೆಯರು ಆಚರಿಸಿದರು.

ಗೌರಿ ಹಬ್ಬದ ಹಿನ್ನೆಲೆಯಲ್ಲಿ ಮನೆಗಳಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ, ನಂತರ ಮುತ್ತೈದೆಯರಿಗೆ ಮರದ ಬಾಗಿನ ಅರ್ಪಿಸಿ ಗೌರಿ ಹಬ್ಬವನ್ನು ಭಕ್ತಿಯಿಂದ ಮಹಿಳೆಯರು ಆಚರಿಸಿದ್ದು ಕಂಡುಬಂದಿತ್ತು.

ಹಬ್ಬದ ಅಂಗವಾಗಿ ಪಟ್ಟಣದ ಸಾರ್ವಜನಿಕ ವಿನಾಯಕ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ತಾಲೂಕಿನ ನೇತೇನಹಳ್ಳಿ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆ ಕಾರ್ಯಕ್ರಮಗಳು ನೆರವೇರಿದವು.

ಈ ಬಾರಿಯೂ ಗೌರಿ ಹಬ್ಬದ ದಿನದ ಬ್ರಾಹ್ಮಿ ಮುಹೂರ್ತದಲ್ಲಿ ಪಟ್ಟಣದ ಗೌರಮ್ಮನ ಕೆರೆಯಲ್ಲಿ ಗಂಗೆ ಪೂಜೆ ನೆರವೇರಿಸಿದರು. ಕೆರೆಯಿಂದ ಯಾವ ವಸ್ತು ಸಿಗುತ್ತದೆಯೋ ಆ ವರ್ಷ ಆ ವಸ್ತುವಿಗೆ ಹೆಚ್ಚಿನ ಪ್ರಾಮುಖ್ಯತೆ ಇರಲಿದ್ದು, ಈ ಬಾರಿ ಗೌರಮ್ಮನ ಕೆರೆಯಲ್ಲಿ ಗರಿಕೆ ದೊರಕಿದೆ. ಜತೆಗೆ ಕೆಂಪೇಗೌಡರ ಕಾಲದ ಕೆಂಪಸಾಗರ ಕೆರೆಯಲ್ಲಿ, ತಾಲೂಕಿನ ದಳವಾಯಿ ಕೆರೆಯಲ್ಲೂ ಕೂಡ ಗರಿಕೆ ಸಿಗುವ ಮೂಲಕ ಈ ಬಾರಿ ರೈತರ ಬೆಳೆ ಚೆನ್ನಾಗಿ ಬರುತ್ತದೆ ಎಂಬ ಸೂಚನೆಯಾಗಿದೆ ಎಂದು ದೇವಸ್ಥಾನದ ಅರ್ಚಕ ಕಿರಣ್ ದೀಕ್ಷಿತ್ ತಿಳಿಸಿದ್ದಾರೆ.

ಗೌರಿ ಹಬ್ಬದ ಪ್ರಯುಕ್ತ ಪಟ್ಟಣದ ಗೌರಮ್ಮನ ಕೆರೆ ಬಳಿ ಇರುವ ಪ್ರಸನ್ನ ರಾಮೇಶ್ವರ ಸ್ವಾಮಿ ದೇವಾಲಯದಲ್ಲಿ ಮುಂಜಾನೆ ಗಂಗೆ ಪೂಜೆ ನೆರವೇರಿಸಿ ಗೌರಿಯನ್ನು ಪ್ರತಿಷ್ಠಾಪಿಸಲಾಯಿತು.ಮದುವೆಯಾದ ನವದಂಪತಿಗಳು ಗೌರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ, ಮಡಿಲಕ್ಕಿ ಹಾಗೂ ಬಾಗಿನ ಅರ್ಪಿಸುವುದು ಇಲ್ಲಿನ ವಿಶೇಷವಾಗಿದೆ ಎಂದು ಕಿರಣ್ ದೀಕ್ಷಿತ್ ವಿವರಿಸಿದ್ದಾರೆ.

ಪಟ್ಟಣದ ಹಲವು ಮಹಿಳೆಯರು ಗೌರಿ ಹಬ್ಬದ ಪ್ರಯುಕ್ತ ಗೌರಮ್ಮನಕೆರೆ ಬಳಿ ಪ್ರತಿಷ್ಠಾಪಿಸಿರುವ ಗೌರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ತಾಲೂಕಿನ ಕೆಂಪೇಗೌಡರು ಕಟ್ಟಿಸಿರುವ ಕೆಂಪಸಾಗರ ಕೆರೆಯಲ್ಲಿ ಗಂಗಾ ಪೂಜೆ ನೆರವೇರಿಸಿ, ಗೌರಮ್ಮನ ಪ್ರತಿಷ್ಠಾಪಿಸಿ ನೂರಾರು ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು.

ವೀರೇಗೌಡನದೊಡ್ಡಿ ಗ್ರಾಮದಲ್ಲಿ ಗೌರಿ ಹಬ್ಬದ ಸಂಭ್ರಮ:

ತಾಲೂಕಿನ ವೀರೇಗೌಡನದೊಡ್ಡಿ ಗ್ರಾಮದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಗ್ರಾಮಸ್ಥರು ಗೌರಮ್ಮನನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಗ್ರಾಮದ ಅಭಿವೃದ್ಧಿಗಾಗಿ ಪ್ರಾರ್ಥಿಸಿ, ದಳವಾಯಿ ಕೆರೆಯಲ್ಲಿ ಗಂಗಾಪೂಜೆ ನೆರವೇರಿಸಿ, ನಂತರ ಗ್ರಾಮದಲ್ಲಿ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ, ಗೌರಮ್ಮ ದೇವಿಯನ್ನು ವಿಶೇಷ ಹೂವುಗಳಿಂದ ಅಲಂಕೃತಗೊಂಡ ಮಂಟಪದಲ್ಲಿ ಪ್ರತಿಷ್ಠಾಪಿಸಿದರು.

ನಂತರ ಗೌರಮ್ಮ ದೇವಿಗೆ ಗ್ರಾಮದ ಪ್ರತಿಯೊಂದು ಕುಟುಂಬದ ಹೆಣ್ಣು ಮಕ್ಕಳು ಮಡಿಲಕ್ಕಿ ಹಾಗೂ ಬಾಗಿನವನ್ನು ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳು ಸಿದ್ಧಿಯಾಗುವಂತೆ ಪ್ರಾರ್ಥಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ