ಸಮಾಜದ ಅಗತ್ಯಕ್ಕೆ ಸ್ಪಂದಿಸುವ ಎಐ ಪರಿಹಾರ ರೂಪಿಸಿ

KannadaprabhaNewsNetwork |  
Published : Jul 25, 2026, 01:30 AM IST
ಪೋಟೋ: 24ಎಸ್‌ಎಂಜಿಕೆಪಿ01ಶಿವಮೊಗ್ಗದ ಜೆ.ಎನ್.ಎನ್ ಎಂಜಿನಿಯರಿಂಗ್‌ ಕಾಲೇಜಿನ ಇನ್ಫಾರ್ಮೇಷನ್ ಸೈನ್ಸ್ ವಿಭಾಗ ಹಾಗೂ ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ‘ಯುಗ್ಮಾ ಟೆಕ್‌ಫೆಸ್ಟ್-2.0 ಮೇದದೃಷ್ಟಿ’ ರಾಷ್ಟ್ರಮಟ್ಟದ ಎಐ ಹ್ಯಾಕಥಾನ್‌ನಲ್ಲಿ  ವಿಧಾನಪರಿಷತ್ತಿನ ಮಾಜಿ ಸದಸ್ಯ, ಉದ್ಯಮಿ ಎಸ್. ರುದ್ರೇಗೌಡ ಮಾತನಾಡಿದರು.  | Kannada Prabha

ಸಾರಾಂಶ

ಶಿವಮೊಗ್ಗ ಯುವ ತಂತ್ರಜ್ಞರು ಸಮಾಜದ ನೈಜ ಸಮಸ್ಯೆಗಳನ್ನು ಗುರುತಿಸಿ, ಜನಸಾಮಾನ್ಯರ ಜೀವನ ಮಟ್ಟವನ್ನು ಸುಧಾರಿಸುವಂತಹ ನಾವೀನ್ಯ ಎಐ ಆಧಾರಿತ ಪರಿಹಾರಗಳನ್ನು ರೂಪಿಸಿ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ, ಉದ್ಯಮಿ ಎಸ್. ರುದ್ರೇಗೌಡ ಕರೆ ನೀಡಿದರು‌‌.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಯುವ ತಂತ್ರಜ್ಞರು ಸಮಾಜದ ನೈಜ ಸಮಸ್ಯೆಗಳನ್ನು ಗುರುತಿಸಿ, ಜನಸಾಮಾನ್ಯರ ಜೀವನ ಮಟ್ಟವನ್ನು ಸುಧಾರಿಸುವಂತಹ ನಾವೀನ್ಯ ಎಐ ಆಧಾರಿತ ಪರಿಹಾರಗಳನ್ನು ರೂಪಿಸಿ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ, ಉದ್ಯಮಿ ಎಸ್. ರುದ್ರೇಗೌಡ ಕರೆ ನೀಡಿದರು‌‌.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್‌ ಕಾಲೇಜಿನ ಇನ್ಫಾರ್ಮೇಷನ್ ಸೈನ್ಸ್ ವಿಭಾಗ ಹಾಗೂ ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ‘ಯುಗ್ಮಾ ಟೆಕ್‌ಫೆಸ್ಟ್-2.0 ಮೇದದೃಷ್ಟ’ ರಾಷ್ಟ್ರಮಟ್ಟದ ಎಐ ಹ್ಯಾಕಥಾನ್ ಉದ್ಘಾಟಿಸಿ ಮಾತನಾಡಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಭವಿಷ್ಯದ ನವೋದ್ಯಮಿಗಳಾಗಿ, ತಂತ್ರಜ್ಞಾನ ನಾಯಕರಾಗಿ ಬದಲಾಗಬೇಕು. ಅಂತಹ ಬದಲಾವಣೆಗೆ ಹ್ಯಾಕಥಾನ್ ಅದ್ಭುತ ವೇದಿಕೆ. ಭಾರತವು ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಅತ್ಯಂತ ಗಮನಾರ್ಹ ಸಾಧನೆಯನ್ನು ಮಾಡಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು. 1970ರ ದಶಕದ ಮಧ್ಯಭಾಗದಲ್ಲಿ ಕಂಪ್ಯೂಟರ್‌ ತಂತ್ರಜ್ಞಾನ ಆರಂಭವಾದ ದಿನಗಳಿಂದ ಹಿಡಿದು ಇಂದಿನ ಕೃತಕ ಬುದ್ಧಿಮತ್ತೆ ಯುಗದವರೆಗೆ ನಮ್ಮ ದೇಶವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಇಂದು ಎಐ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದರೂ ಪ್ರತಿಭಾವಂತ ಸಾಫ್ಟ್‌ವೇರ್‌ ವೃತ್ತಿಪರರ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದ್ದು, ನಿಮ್ಮಂತಹ ಯುವ ನವೋದ್ಯಮಿಗಳಿಗೆ ಅಪಾರ ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂದು ತಿಳಿಸಿದರು.ಜಗತ್ತಿನ ಅತಿದೊಡ್ಡ ಗ್ರಾಹಕ ಮಾರುಕಟ್ಟೆಗಳಲ್ಲಿ ಭಾರತವೂ ಒಂದಾಗಿದೆ. ನಮ್ಮ ದೇಶದಲ್ಲಿಯೇ ಅಪಾರ ಅವಕಾಶಗಳಿವೆ. ಆದ್ದರಿಂದ ನಿಮ್ಮ ಜ್ಞಾನ, ಕೌಶಲ್ಯ ಮತ್ತು ಸೃಜನಶೀಲತೆಯನ್ನು ಭಾರತದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಳಸಿಕೊಳ್ಳಿ. ನಿಮ್ಮಲ್ಲಿ ಹಲವರಿಗೆ ವಿದೇಶಗಳಲ್ಲಿ ಕೆಲಸ ಮಾಡುವ ಅವಕಾಶಗಳು ದೊರೆಯಬಹುದು. ಆದರೆ ನಿಮ್ಮ ಪ್ರತಿಭೆಯಿಂದ ನಮ್ಮ ದೇಶದಲ್ಲಿಯೇ ಮಹತ್ತರ ಬದಲಾವಣೆಗಳನ್ನು ತರಲು ಸಾಧ್ಯ ಎಂಬುದನ್ನು ಎಂದಿಗೂ ಮರೆಯಬೇಡಿ ಎಂದು ಕಿವಿಮಾತು ಹೇಳಿದರು.ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಮಾತನಾಡಿ, ಯುಗ್ಮಾ ಎಂಬ ಶೀರ್ಷಿಕೆಯು ಕೂಡುವಿಕೆಯ ಸಂಕೇತವಾಗಿದೆ. ಪ್ರಾಯೋಗಿಕ ಜ್ಞಾನ ನೀಡುವಂತಹ ಸಾಧಕರ ಒಡನಾಟದಿಂದ ನಮ್ಮಲ್ಲಿ ಮತ್ತಷ್ಟು ಜ್ಞಾನ ವಿಕಸನಗೊಳ್ಳಲಿದೆ. ಎಐ ಎಲ್ಲಾ ರಂಗದಲ್ಲಿ ಅಳವಡಿಸಿಕೊಳ್ಳಲಾಗಿದೆ ಮತ್ತು ಪರಿಣಾಮಕಾರಿ ಫಲಿತಾಂಶ ಪಡೆಯಲಾಗುತ್ತಿದೆ. ಅದರೇ ಎಐ ಮನುಷ್ಯನಿಗೆ ಭಸ್ಮಾಸುರನಂತೆ ಕಾಡದಿರಲಿ. ಆವಿಷ್ಕಾರಗಳು ಬದುಕಿಗೆ ಪೂರಕವಾಗಿರಬೇಕು ಎಂದರು. ಈ ನೆಲದ ಋಣ ತೀರಿಸುವತ್ತ ಯುವಸಮೂಹ ಗಮನಹರಿಸಬೇಕಿದೆ. ಪರ ಊರುಗಳಿಗೆ ಅವಕಾಶಗಳಿಗಾಗಿ ಹಾರದೆ, ಸುತ್ತಲಿನ ವಾತಾವರಣ ಬಳಸಿಕೊಂಡು ನಮ್ಮ ಊರಿನಲ್ಲಿಯೇ ಆವಿಷ್ಕಾರಿ ಬದಲಾವಣೆಗಳನ್ನು ನಿರ್ಮಿಸುವ ಕಾರ್ಯವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಎಐನಂತಹ ತಂತ್ರಜ್ಞಾನಗಳ ಮೂಲಕ ಮತ್ತಷ್ಟು ಯೋಜನೆಗಳು ಅರಳಲಿ ಎಂದು ಹೇಳಿದರು.

ಹ್ಯಾಕಥಾನ್ ಕೇವಲ ಸ್ಪರ್ಧೆಯಲ್ಲ: ಎನ್ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಹ್ಯಾಕಥಾನ್ ಎನ್ನುವುದು ಕೇವಲ ಒಂದು ಸ್ಪರ್ಧೆಯಲ್ಲ. ಅದು ತರಗತಿಯಲ್ಲಿ ಕಲಿತ ಜ್ಞಾನವನ್ನು ನೈಜ ಜೀವನದ ಸಮಸ್ಯೆಗಳಿಗೆ ಅನ್ವಯಿಸುವ ಸೇತುವೆಯಾಗಿದೆ. ತರಗತಿ ನಿಮಗೆ ಏನು ತಿಳಿಯಬೇಕು ಎಂಬುದನ್ನು ಕಲಿಸಿದರೆ, ಹ್ಯಾಕಥಾನ್ ತಿಳಿದಿರುವ ಜ್ಞಾನವನ್ನು ಸಮಾಜದ ಒಳಿತಿಗಾಗಿ ಹೇಗೆ ಬಳಸಬೇಕು? ಎಂಬ ಮಹತ್ವದ ಪ್ರಶ್ನೆಗೆ ಉತ್ತರ ಹುಡುಕುವ ಅವಕಾಶವನ್ನು ನೀಡುತ್ತದೆ. ನಿಜವಾದ ಕಲಿಕೆ ಅಲ್ಲಿಂದಲೇ ಆರಂಭವಾಗುತ್ತದೆ ಎಂದು ಹೇಳಿದರು. ನೀವು ರೂಪಿಸುವ ಪ್ರತಿಯೊಂದು ಯೋಜನೆಯಲ್ಲಿಯೂ ವಿಸ್ತರಣಾ ಸಾಮರ್ಥ್ಯ, ಸಂಪನ್ಮೂಲ ಹಾಗೂ ಇಂಧನ ದಕ್ಷತೆ, ಸಾಮಾಜಿಕ ಪರಿಣಾಮ ಹೊಂದಿರಬೇಕಾಗಿರುವುದು ಅತ್ಯಂತ ಅವಶ್ಯಕವಾಗಿದೆ. ಸುಸ್ಥಿರ ಅಭಿವೃದ್ಧಿ ಇಂದು ಜಗತ್ತಿನ ಪ್ರಮುಖ ಸವಾಲಾಗಿದೆ. ಎಐ ಅಪಾರ ಅವಕಾಶಗಳನ್ನು ನೀಡಿದರೂ, ಹೆಚ್ಚಿನ ಗಣಕ ಶಕ್ತಿ ಮತ್ತು ವಿದ್ಯುತ್ ಬಳಕೆಯಿಂದ ಕಾರ್ಬನ್ ಹೆಜ್ಜೆ ಗುರುತನ್ನೂ ಹೆಚ್ಚಿಸುತ್ತದೆ. ಆದ್ದರಿಂದ ಭವಿಷ್ಯದ ಎಂಜಿನಿಯರ್‌ಗಳಾದ ನೀವು ಬುದ್ಧಿವಂತಿಕೆಯ ಜೊತೆಗೆ ಪರಿಸರ ಸ್ನೇಹಿ ಹಾಗೂ ಸಾಮಾಜಿಕ ಜವಾಬ್ದಾರಿಯುತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್, ಇನ್ಫಾರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಆರ್‌.ಜೆ.ರಾಘವೇಂದ್ರ, ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಸಂಯೋಜಕ ಎಚ್‌.ಟಿ.ವಿರೇಶ್ ಉಪಸ್ಥಿತರಿದ್ದರು. ಸಂಘಟನಾ ಸಮಿತಿಯ ಸದಸ್ಯರಾದ ಡಾ. ಎಂ.ಪಿ. ಪವನ್ ಕುಮಾರ್‌ ಸ್ವಾಗತಿಸಿದರು. ವಿವಿಧ ರಾಜ್ಯಗಳ 150 ಕ್ಕೂ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದರು.

------------------

ಪೋಟೋ: 24ಎಸ್‌ಎಂಜಿಕೆಪಿ01

ಶಿವಮೊಗ್ಗದ ಜೆ.ಎನ್.ಎನ್ ಎಂಜಿನಿಯರಿಂಗ್‌ ಕಾಲೇಜಿನ ಇನ್ಫಾರ್ಮೇಷನ್ ಸೈನ್ಸ್ ವಿಭಾಗ ಹಾಗೂ ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ‘ಯುಗ್ಮಾ ಟೆಕ್‌ಫೆಸ್ಟ್-2.0 ಮೇದದೃಷ್ಟಿ’ ರಾಷ್ಟ್ರಮಟ್ಟದ ಎಐ ಹ್ಯಾಕಥಾನ್‌ನಲ್ಲಿ ವಿಧಾನಪರಿಷತ್ತಿನ ಮಾಜಿ ಸದಸ್ಯ, ಉದ್ಯಮಿ ಎಸ್. ರುದ್ರೇಗೌಡ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರು ಸಮಗ್ರ ಪರಿಷ್ಕರಣೆಗೆ ಸಹಕಾರ ನೀಡಿ
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ತರಬಹಳ್ಳಿ ಮಂಜುನಾಥ್‌