ರಾಮನಗರ: ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ನೀಡುವ ಸಂಬಂಧ ಕಾಯ್ದೆ ರೂಪಿಸಿ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನಾ ಧರಣಿ ನಡೆಸಿದರು.
15 ವರ್ಷಗಳ ಕಾಲ ಕರ್ನಾಟಕದಲ್ಲಿ ನೆಲೆಸಿದವರನ್ನು ಕನ್ನಡಿಗರೆಂದು ಪರಿಗಣಿಸುವ ನಿಯಮವಿದೆ. ಇವರಿಗೆ ಕಡ್ಡಾಯವಾಗಿ ಕನ್ನಡ ಬರವಣಿಗೆಯ ಪರೀಕ್ಷೆಯನ್ನು ನೀಡಿ, ಅದರಲ್ಲಿ ಉತ್ತೀರ್ಣರಾದವರನ್ನು ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು. ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ನೀಡಿರುವ ಮಾನ್ಯತೆ ರದ್ದುಗೊಳಿಸಿ ಅವುಗಳಿಗೆ ಭೂಮಿ ನೀಡಲಾಗಿದ್ದರೆ ಹಿಂದಕ್ಕೆ ಪಡೆಯುವ ಮತ್ತು ಆ ಸಂಸ್ಥೆಗಳಿಗೆ ನೀಡಿರುವ ಎಲ್ಲ ಸವಲತ್ತುಗಳನ್ನು ಹಿಂದಕ್ಕೆ ಪಡೆಯುವ ನಿಯಮವನ್ನು ರೂಪಿಸಬೇಕು. ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ದಂಡ ವಿಧಿಸಬೇಕು. ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು.
ಎಲ್ಲ ಖಾಸಗಿ ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇಕಡ 100ರಷ್ಟು ಹುದ್ದೆಗಳು ಕನ್ನಡಿಗರಿಗೆ ಮೀಸಲಿಡಬೇಕು. ಇತರೆ ಹುದ್ದೆಗಳಲ್ಲಿ ಶೇ.80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು. ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ ನೀಡಬೇಕು. ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇಕಡ 100ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.ರಾಜ್ಯ, ಕೇಂದ್ರ ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶವನ್ನು ಉದ್ದೇಶಿತ ಕಾನೂನಿನಲ್ಲಿ ಅಳವಡಿಸಬೇಕು.
ಬಾಕ್ಸ್............
ಈ ವೇಳೆ ವೇದಿಕೆ ಜಿಲ್ಲಾಧ್ಯಕ್ಷ ವಾಡೆದೊಡ್ಡಿ ಕಬ್ಬಾಳೇಗೌಡ ಮಾತನಾಡಿ, ಕರ್ನಾಟಕ ದೇಶದಲ್ಲಿಯೇ ಅತಿ ಹೆಚ್ಚು ಭೌಗೋಳಿಕ ಸಂಪನ್ಮೂಲಗಳನ್ನು ಹೊಂದಿರುವ ರಾಜ್ಯ. ಹೀಗಾಗಿಯೇ ಇತರೆ ರಾಜ್ಯಗಳಿಂದ ದೊಡ್ಡ ಪ್ರಮಾಣದ ವಲಸೆ ನಡೆದುಕೊಂಡು ಬಂದಿದೆ. ಎರಡು - ಮೂರು ದಶಕಗಳಲ್ಲಿ ಅದು ತಾರಕಕ್ಕೇರಿದೆ. ಮೊದಲು ದಕ್ಷಿಣ ಭಾರತದ ಇತರ ರಾಜ್ಯಗಳಿಂದ ಜನರು ವಲಸೆ ಬಂದರು. ಈಗ ಉತ್ತರ ಮತ್ತು ಈಶಾನ್ಯ ರಾಜ್ಯಗಳ ಜನರ ಪ್ರವಾಹವೇ ಹರಿದು ಬರುತ್ತಿದೆ. ರಾಜ್ಯದ ಮಹಾನಗರಗಳಲ್ಲಿ ವಲಸೆ ಪ್ರಮಾಣ ಮಿತಿ ಮೀರಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಡಾ.ಸರೋಜಿನಿ ಮಹಿಷಿ ವರದಿ ಸಮರ್ಪಕ ಜಾರಿಗೆ ಆಗ್ರಹ:
ಕೇಂದ್ರ ಸರ್ಕಾರದ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946ರ ಪ್ರಕಾರ ಆಯಾ ರಾಜ್ಯಗಳಲ್ಲಿ ನಿಯಮಾವಳಿ ರೂಪಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇರುತ್ತದೆ. ರಾಜ್ಯಸರ್ಕಾರವು ರೂಪಿಸುವ ಕಾನೂನನ್ನು 50ಕ್ಕೂ ಹೆಚ್ಚು ಮಂದಿ ನೌಕರರನ್ನು ಹೊಂದಿರುವ ಕೈಗಾರಿಕೆಗಳನ್ನು ಪಾಲಿಸಬೇಕಾಗುತ್ತದೆ. ಈ ಕಾಯ್ದೆಯಡಿ ರಾಜ್ಯಸರ್ಕಾರ ಪ್ರತ್ಯೇಕ ಕಾನೂನನ್ನು ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿ ಮಾಡಬಹುದಾಗಿದೆ. ಇದಕ್ಕೆ ರಾಜ್ಯಸರ್ಕಾರ ಇಚ್ಛಾಶಕ್ತಿಯನ್ನು ತೋರಬೇಕು ಎಂದು ಕಬ್ಬಾಳೇಗೌಡ ಹೇಳಿದರು.
ರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.