ಜ್ಞಾನ ಬೆಳೆಸಿಕೊಳ್ಳುವ ವಾತಾವರಣ ನಿರ್ಮಿಸಿ: ಬಿಇಒ ಸುರೇಂದ್ರ ಕಾಂಬಳೆ

KannadaprabhaNewsNetwork |  
Published : Feb 13, 2025, 12:45 AM IST
ಪೋಟೊ11ಕೆಎಸಟಿ2: ಕುಷ್ಟಗಿ ಪಟ್ಟಣದ ಬಾಲಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ವಿಚಾರ ಸಂಕಿರ್ಣ ಕಾರ್ಯಕ್ರಮ ನಡೆಯಿತು. ಅಭಿನಂದನಾ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಶಿಕ್ಷಕರು ತಯಾರಿಸಿದ ಪ್ರಾಯೋಗಿಕ ಚಟುವಟಿಕೆಗಳನ್ನು ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ಶಿಕ್ಷಕರು ಶಾಲಾ ಅವಧಿಯ ನಂತರವೂ ಅಧ್ಯಯನ ಮಾಡುವ ಮೂಲಕ ಹಲವು ಮೂಲಗಳಿಂದ ಜ್ಞಾನವನ್ನು ಪಡೆದುಕೊಂಡು ಶಾಲೆಯಲ್ಲಿ ಮಕ್ಕಳಿಗೆ ಜ್ಞಾನವನ್ನು ಕಟ್ಟಿಕೊಳ್ಳುವ ವಾತಾವರಣ ಸೃಷ್ಟಿಸಬೇಕು.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ವಿಚಾರ ಸಂಕೀರ್ಣ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಶಿಕ್ಷಕರು ಶಾಲಾ ಅವಧಿಯ ನಂತರವೂ ಅಧ್ಯಯನ ಮಾಡುವ ಮೂಲಕ ಹಲವು ಮೂಲಗಳಿಂದ ಜ್ಞಾನವನ್ನು ಪಡೆದುಕೊಂಡು ಶಾಲೆಯಲ್ಲಿ ಮಕ್ಕಳಿಗೆ ಜ್ಞಾನವನ್ನು ಕಟ್ಟಿಕೊಳ್ಳುವ ವಾತಾವರಣ ಸೃಷ್ಟಿಸಬೇಕು ಎಂದು ಬಿಇಒ ಸುರೇಂದ್ರ ಕಾಂಬಳೆ ಹೇಳಿದರು.

ಪಟ್ಟಣದಲ್ಲಿನ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ 2023-24ನೇ ಸಾಲಿನಲ್ಲಿ ನೇಮಕಾತಿಯಾದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ವಿಚಾರ ಸಂಕೀರ್ಣ ಹಾಗೂ ಶಾಲೆ ಅನುಭವದ ಅನಾವರಣದ ಕಾರ್ಯಾಗಾರದಲ್ಲಿ ಮಾತನಾಡಿದರು.

ಶಿಕ್ಷಕರು ತಾಳ್ಮೆ ಹಾಗೂ ಸಹನೆ ಇಟ್ಟುಕೊಳ್ಳುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ತಾಲೂಕಿನಲ್ಲಿ ಶಿಕ್ಷಣ ಅಭಿವೃದ್ಧಿಯಾಗಬೇಕು. ಎಲ್ಲ ಮಕ್ಕಳು ವಿದ್ಯಾವಂತರಾಗಬೇಕು ಎಂದರು. ಈ ನಮ್ಮ ಶೈಕ್ಷಣಿಕ ಕಾರ್ಯಗಳಿಗೆ ಅಜೀಮ ಪ್ರೇಮಜಿ ತಂಡದವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಹಿರಿಯ ಪತ್ರಕರ್ತ ಸೋಮರಡ್ಡಿ ಅಳವಂಡಿ ಮಾತನಾಡಿ, ಶಿಕ್ಷಕ ವೃತ್ತಿಗೆ ನೇಮಕಾತಿಯಾದ ನಂತರ ತಾವು ಕಲಿತ ಪುಸ್ತಕಗಳನ್ನು ಮುಚ್ಚಿಡುವ ಕೆಲಸ ಮಾಡಬಾರದು. ಅಂದಿನಿಂದ ಮತ್ತೊಮ್ಮೆ ಆ ಪುಸ್ತಕಗಳ ಅಧ್ಯಯನ ಶುರುವಾಗಲಿದೆ. ಶಿಕ್ಷಕರು ಶಾಲೆಯಲ್ಲಿ ಕಲಿಯುತ್ತಿರುವಂತಹ ಯಾವುದೇ ಮಕ್ಕಳನ್ನು ದಡ್ಡ ಮಕ್ಕಳು ಎಂದು ಪರಿಗಣಿಸಬಾರದು. ಮಕ್ಕಳೊಂದಿಗೆ ಮಕ್ಕಳಾಗುವ ಮೂಲಕ ಹತ್ತು ಹಲವು ಉತ್ತಮ ದಾರಿಗಳನ್ನು ತೋರಿಸುವ ಕೆಲಸ ಮಾಡಬೇಕು ಎಂದರು.

ಈಗ ಎಐ ಜಗತ್ತಿನಾದ್ಯಂತ ಕಾಲಿಟ್ಟಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಬರಲಿದೆ. ಶಿಕ್ಷಕರು ಹೊಸ ಹೊಸ ಆವಿಷ್ಕಾರಗಳ ಮೂಲಕ ಮಕ್ಕಳಿಗೆ ಉತ್ತಮವಾದ ಪಾಠ ಮಾಡಬೇಕು. ಪ್ರತಿಭೆಯು ಅರಮನೆಯಲ್ಲಿ ಹುಟ್ಟುವುದಿಲ್ಲ, ಗುಡಿಸಲಿನಲ್ಲೆ ಹುಟ್ಟುವಂತದ್ದು. ಅದನ್ನು ಹುಟ್ಟುಹಾಕುವ ಶಕ್ತಿ ಶಿಕ್ಷಕರಲ್ಲಿದೆ ಎಂದರು.

ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಜಗದೀಶಪ್ಪ ಮೆಣೇದಾಳ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಜ್ಞಾನ ಕೊಡುವ ಉತ್ತಮ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಪಠ್ಯಪುಸ್ತಕದ ಜೊತೆಗೆ ಪಠ್ಯೇತರ ಚಟುವಟಿಕೆ ಕಲಿಸಬೇಕು. ವೈಜ್ಞಾನಿಕ ಪದ್ದತಿಯಲ್ಲಿ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.

ಈ ಸಂದರ್ಭ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಿಂಗಪ್ಪ ಗುನ್ನಾಳ, ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ರಾಮಪ್ಪ ಅಮರಾವತಿ, ಇಸಿಒ ಶಿವಾನಂದ ಪಂಪಣ್ಣನವರು. ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಗ್ಯಾನಪ್ಪ ರಾಂಪುರು, ಸಿಆರ್‌ಪಿ ಬಿಆರ್‌ಪಿ ಸಂಘದ ಅಧ್ಯಕ್ಷ ಸೋಮಲಿಂಗಪ್ಪ ಗುರಿಕಾರ, ಸುಭಾನಸಾಬ ನದಾಫ್, ಅಜೀಮ ಪ್ರೇಮಜಿ ತಂಡದ ಸಂಯೋಜಕ ಚಿಕ್ಕ ವೀರೇಶ, ವಾಣಿಶ್ರೀ, ಜೀವನಸಾಬ ಬಿನ್ನಾಳ ಸೇರಿದಂತೆ ನೂರಾರು ಶಿಕ್ಷಕರು ಇದ್ದರು.ಶಿಕ್ಷಕಿ ವಿದ್ಯಾಶ್ರೀ ಅರ್ಕಸಾಲಿ ಪ್ರಾರ್ಥಿಸಿದರು. ಶರಣಪ್ಪ ಉಪ್ಪಾರ ಸ್ವಾಗತಿಸಿ, ಶ್ರೀಕಾಂತ ಬೆಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣು ತೆಮ್ಮಿನಾಳ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು ಶಿಕ್ಷಕರು ತಯಾರಿಸಿದ ಪ್ರಾಯೋಗಿಕ ಚಟುವಟಿಕೆಗಳನ್ನು ವೀಕ್ಷಣೆ ಮಾಡಿದರು. ತರಬೇತಿ ಪಡೆದವರಿಗೆ ಅಭಿನಂದನಾ ಪ್ರಮಾಣ ಪತ್ರ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು