ಚನ್ನಪಟ್ಟಣ: ಪ್ರತಿಯೊಬ್ಬರೂ ತಮ್ಮ ಮನೆಗಳ ಸುತ್ತ ಮುತ್ತ ಕೊಳಚೆ ನೀರು ನಿಂತು, ಸೊಳ್ಳೆಗಳ ಉತ್ಪತ್ತಿಯಾಗದಂತೆ ಜಾಗೃತಿ ವಹಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪದ್ಮಾವತಿ ತಿಳಿಸಿದರು.
ಸಾಂಕ್ರಾಮಿಕ ಕಾಯಿಲೆಗಳಲ್ಲಿ ಮಲೇರಿಯಾ ಅಪಾಯಕಾರಿ. ಸಾಂಕ್ರಾಮಿಕ ಕಾಯಿಲೆಗಳು ಸೊಳ್ಳೆಗಳಿಂದಲೇ ಹೆಚ್ಚು ಹರಡುತ್ತವೆ. ಅನಾಫಿಲಸ್ ಜಾತಿಗೆ ಸೇರಿದ ಹೆಣ್ಣು ಸೊಳ್ಳೆಗಳಿಂದ ಮಲೇರಿಯಾ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಮಲೇರಿಯಾ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ವಿಶ್ವ ಮಲೇರಿಯಾ ದಿನಾಚರಣೆ ಆಚರಿಸುವ ಮೂಲಕ ಜನರಿಗೆ ಅರಿವು ಮೂಡಿಸುತ್ತಿದೆ ಎಂದು ಹೇಳಿದರು.
ಹರಿಯದೆ ನಿಂತುಕೊಳ್ಳುವ ಕೊಳಚೆ ನೀರು, ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಇಲ್ಲದ ಸ್ಥಳಗಳಲ್ಲಿ ಮಲೇರಿಯಾ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸೊಳ್ಳೆ ಒಬ್ಬರಿಂದ ಮತ್ತೊಬ್ಬರಿಗೆ ಕಡಿಯುವ ಮೂಲಕ ಮಲೇರಿಯಾ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಗೆ ಚಳಿ-ಜ್ವರ ಬರುವ ಲಕ್ಷ ಣ ಕಾಣಿಸಿಕೊಳ್ಳುತ್ತದೆ. ಕೂಡಲೇ ಹತ್ತಿರದಲ್ಲಿರುವ ಆಸ್ಪತ್ರೆಗೆ ಹೋಗಿ ವೈದ್ಯರಿಂದ ರಕ್ಷ ಪರೀಕ್ಷೆ ಮಾಡಿಸಿಕೊಳ್ಳುವುದರ ಜತೆಗೆ ಅವರ ಸೂಚನೆ ಮೇರೆಗೆ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಪ್ರಭಾರ ಆರೋಗ್ಯ ಮೇಲ್ವಿಚಾರಕ ರಾಜೇಂದ್ರ ಮಾತನಾಡಿ, ಮಲೇರಿಯಾ ತಡೆಗಟ್ಟುವ ಉದ್ದೇಶದಿಂದ ೨೦೦೭ರಿಂದ ವಿಶ್ವ ಮಲೇರಿಯಾ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಜನರಿಗೆ ಮಲೇರಿಯಾ ಹರಡುವಿಕೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಇದೀಗ ಮಲೇರಿಯಾ ಹರಡುವ ಸೊಳ್ಳೆಗಳನ್ನು ನಿಯಂತ್ರಿಸಲು ವಿಶೇಷ ಜಾತಿಯ ಚಿಕ್ಕ ಗಾತ್ರದ ಮೀನುಗಳನ್ನು ಸಾಕಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಈ ಮೀನುಗಳನ್ನು ಗ್ರಾಮೀಣ ಪ್ರದೇಶಗಳಲ್ಲಿರುವ ಕೆರೆಗಳಿಗೆ ಬಿಡಲಾಗುತ್ತದೆ. ಈ ಮೀನುಗಳು ಅಧಿಕ ಸಂಖ್ಯೆಯಲ್ಲಿ ಸಂತೋನ್ಪತ್ತಿಯಾಗಿ ಕೆರೆ ನೀರಿನೊಳಗೆ ಉತ್ಪತ್ತಿಯಾಗುವ ಸೊಳ್ಳೆ ಮರಿಗಳನ್ನು ತಿನ್ನುತ್ತವೆ. ಈ ಮಾರ್ಗೋಪಾಯದಿಂದ ಮಲೇರಿಯಾ ಬಾರದಂತೆ ನಿಯಂತ್ರಣ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್, ಪೌರಾಯುಕ್ತ ಮಹೇಂದ್ರ, ನಗರ ಆರೋಗ್ಯ ಕೇಂದ್ರದ ಡಾ.ಶಿಲ್ಪಾ, ಜಿಲ್ಲಾ ಕೀಟಶಾಸ್ತ್ರಜ್ಞೆ ಸೌಮ್ಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಕಾಶ್, ಎಂಎಲ್‌ಟಿಒ ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ಸೌಭಾಗ್ಯ, ಸತೀಶ್, ಕುಸುಮಾ, ನಗರ ಸಭೆ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.ಪೊಟೋ೧೭ಸಿಪಿಟಿ4: ಚನ್ನಪಪಟ್ಟಣದ ನಗರಸಭೆ ಸಭಾಂಗಣದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಜಾಗೃತಿ ಕಾರ್ಯಕ್ರಮ ನಡೆಯಿತು.