ಜಾತಿ ಸಮೀಕ್ಷೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork |  
Published : Sep 22, 2025, 01:00 AM IST
೨೧ಕೆಎಂಎನ್‌ಡಿ-೫ಮಂಡ್ಯದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಜಾತಿ ಸಮೀಕ್ಷೆ ಕುರಿತು ಆಯೋಜಿಸಿದ್ದ ಸಭೆಯಲ್ಲಿ ವಿವಿಧ ಸಮುದಾಯ ಮುಖಂಡರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಒಂದು ಕುಟುಂಬ ಮತ್ತು ವ್ಯಕ್ತಿಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಇದಾಗಿದ್ದು, ಸಮೀಕ್ಷೆಯಲ್ಲಿ ಕೆಲವು ವೈಯಕ್ತಿಕ ಹಾಗೂ ಕುಟುಂಬ ಮಾಹಿತಿಗಳನ್ನು ಸಂಗ್ರಹಿಸಲಾಗುವುದು. ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಧನಾತ್ಮಕವಾಗಿ ಸಹಕರಿಸಲು ಜನರಿಗೆ ತಿಳಿಸಿ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಜಿಲ್ಲೆಯಲ್ಲಿ ಸೆ.೨೨ರಿಂದ ಅ.೭ರವರೆಗೆ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಲು ಸಮುದಾಯ ಮುಖಂಡರು ಸಾರ್ವಜನಿಕರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಸಮುದಾಯ ಮುಖಂಡರೊಂದಿಗೆ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯಾದ್ಯಂತ ನಾಗರಿಕರ ಸ್ಥಿತಿ-ಗತಿ, ಅಗತ್ಯತೆ, ಬೇಡಿಕೆ ತಿಳಿಯಲು ಹಾಗೂ ಅವರ ಪರವಾಗಿ ಯೋಜನೆಗಳನ್ನು ರೂಪಿಸಲು ಅಂಕಿ-ಅಂಶ ಸಂಗ್ರಹಿಸುವ ಸಲುವಾಗಿ ಜಿಲ್ಲೆಯಲ್ಲಿ ಸಮೀಕ್ಷೆ ಕೈಗೊಂಡಿದ್ದು, ಸಾಧ್ಯವಾದಷ್ಟು ಸಮೀಕ್ಷೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಒಂದು ಕುಟುಂಬ ಮತ್ತು ವ್ಯಕ್ತಿಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಇದಾಗಿದ್ದು, ಸಮೀಕ್ಷೆಯಲ್ಲಿ ಕೆಲವು ವೈಯಕ್ತಿಕ ಹಾಗೂ ಕುಟುಂಬ ಮಾಹಿತಿಗಳನ್ನು ಸಂಗ್ರಹಿಸಲಾಗುವುದು. ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಧನಾತ್ಮಕವಾಗಿ ಸಹಕರಿಸಲು ಜನರಿಗೆ ತಿಳಿಸಿ. ಈಗಾಗಲೇ ಆಶಾ ಕಾರ್ಯಕರ್ತೆಯರು, ಸ್ಥಳೀಯ ಸಂಸ್ಥೆಗಳ ಕಸ ವಿಲೇವಾರಿ ವಾಹನಗಳಲ್ಲಿ ಜಿಂಗಲ್ಸ್, ಬ್ಯಾನರ್‌ಗಳನ್ನು ಅಳವಡಿಸುವ ಮೂಲಕ ಸಮೀಕ್ಷೆ ಕುರಿತು ಪ್ರಚಾರ ಕೈಗೊಂಡಿದ್ದು, ಅರಿವು ಮತ್ತು ಜಾಗೃತಿ ಮೂಡಿಸಲು ಸಮುದಾಯದ ಮುಖ್ಯಸ್ಥರ ಪಾತ್ರವೂ ದೊಡ್ಡದಾಗಿದ್ದು ಸಮೀಕ್ಷೆ ಕುರಿತು ಹೆಚ್ಚು ಪ್ರಚುರಪಡಿಸುವಂತೆ ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಮಾತನಾಡಿ, ಈಗಾಗಲೇ ಗಣತಿದಾರರಿಗೆ ಸಮೀಕ್ಷೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗಿದೆ. ಗಣತಿದಾರರು ತರಬೇತಿಯಲ್ಲಿ ನೀಡಲಾಗಿರುವ ಮಾರ್ಗದರ್ಶನದಂತೆ ಸಮೀಕ್ಷೆ ನಡೆಸಲಿದ್ದಾರೆ. ಸಮಯ ಕಡಿಮೆಯಿದ್ದು, ಸಾರ್ವಜನಿಕರಿಗೆ ಸಮೀಕ್ಷೆ ಕುರಿತು ಮಾಹಿತಿ ನೀಡುವುದು ಹಾಗೂ ಜಾಗೃತಿ ಮೂಡಿಸುವ ಅಗತ್ಯವಿದೆ. ಸಮೀಕ್ಷೆ ಯಶಸ್ವಿಗೊಳಿಸಲು ಜನರಲ್ಲಿ ಜಾಗೃತಿ ಮೂಡಿಸಲು ಸಹಕರಿಸುವಂತೆ ತಿಳಿಸಿದರು.

ದಸರಾ ಮತ್ತು ಇತರೆ ಹಬ್ಬಗಳ ಆಚರಣೆಯ ಸಮಯವಾದ್ದರಿಂದ ಹಾಗೂ ರಜಾ ಸಮಯವೂ ಆಗಿರುವುದರಿಂದ ಸಮೀಕ್ಷೆ ಸಂದರ್ಭದಲ್ಲಿ ಕುಟುಂಬಸ್ಥರಿಗೆ ಅವರ ಮನೆಯಲ್ಲಿರುವಂತೆ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ತಲುಪಿಸಿರುವ ಪ್ರಶ್ನಾವಳಿಯ ಬಗ್ಗೆ ಮಾಹಿತಿ ಹೊಂದಿರಲು ಸಾರ್ವಜನಿಕರಿಗೆ ತಿಳಿಸುವಂತೆ ಹೇಳಿದರು.

ಸಮುದಾಯದ ಮುಖಂಡರು ಮಾತನಾಡಿ ಸಮೀಕ್ಷೆಯ ದಿನವನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ತಿಳಿಸಿದರೆ ಕುಟುಂಬದ ಸದಸ್ಯರು ಮನೆಯಲ್ಲಿರಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ಗಣತಿದಾರರು ಸಂಪೂರ್ಣ ಪ್ರಶ್ನೆಗಳನ್ನು ಕೇಳುವುದಿಲ್ಲ, ಪ್ರಶ್ನಾವಳಿಯಲ್ಲಿರುವ ಎಲ್ಲಾ ಪ್ರಶ್ನೆಗಳನ್ನು ಕೇಳಿ ಉತ್ತರಪಡೆಯಲು ಹಾಗೂ ಸಾರ್ವಜನಿಕರೊಂದಿಗೆ ಸ್ನೇಹದಿಂದ ವರ್ತಿಸಲು ತಿಳಿಸಬೇಕು. ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ಹಳ್ಳಿಗಳಲ್ಲಿ ಹಳ್ಳಿಯ ಸಂಪ್ರದಾಯದಂತೆ ಟಾಂ ಟಾಂ ಮೂಲಕ ಸಮೀಕ್ಷೆ ಕುರಿತು ಪ್ರಚಾರ ನೀಡಿ ಹಾಗೂ ಸಮೀಕ್ಷೆಯ ದಿನದಂದು ಕುಟುಂಬಸ್ಥರು ಮನೆಯಲ್ಲಿರುವಂತೆ ಸಾರಿ ಹೇಳಲು ತಿಳಿಸಬೇಕು ತಂದು ತಿಳಿಸಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳ ಹಾಗೂ ವಿವಿಧ ಸಮುದಾಯದ ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ