ಕನ್ನಡಪ್ರಭ ವಾರ್ತೆ ಬೇಲೂರು
ಬೇಲೂರಿನ ಪೂರ್ಣಪ್ರಜ್ಞ ಶಾಲೆಯಲ್ಲಿ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಗೂ ಜನಮಿತ್ರ ಪತ್ರಿಕೆ, ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ, ನಮ್ಮ ಕಾಡು - ನಮ್ಮ ಜೀವ ಸೇವ್ ಫಾರೆಸ್ಟ್ - ಸೇವ್ ಅನಿಮಲ್ಸ್ ಎಂಬ ಉದ್ದೇಶದೊಂದಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಈಗಿನಿಂದಲೇ ಪರಿಸರ ಸಂರಕ್ಷಣೆ ಹಾಗೂ ವನ್ಯ ಪ್ರಾಣಿಗಳ ಬಗ್ಗೆ ಸಹಾನುಭೂತಿ ಬೆಳೆಸಿಕೊಳ್ಳಬೇಕು. ಸಾಲುಮರದ ತಿಮ್ಮಕ್ಕನವರು ಯಾವುದೇ ಪ್ರಶಸ್ತಿ ಪದವಿ ಆಸೆಯಿಂದ ಸಾಲುಮರಗಳನ್ನು ನೆಟ್ಟು ಬೆಳೆಸಿಲ್ಲ. ನಿಸ್ವಾರ್ಥ ಮನೋಭಾವದಿಂದ ಎಲ್ಲರಿಗೂ ಉಪಯೋಗವಾಗಲಿ ಎಂದು ಗಿಡಗಳನ್ನು ಪೋಷಿಸಿದರು. ಇವರ ಪರಿಸರ ಪ್ರೇಮ ಮನೆಮಾತಾಗಿ ಪದ್ಮಶ್ರೀ , ನಾಡೋಜ ಪ್ರಶಸ್ತಿ, ಹಾಗೂ ರಾಜ್ಯ ಸರ್ಕಾರದಲ್ಲಿ ಪರಿಸರ ರಾಯಭಾರಿ ಅಂತಹ ಉನ್ನತ ಉದ್ಯೋಗಗಳು ಹುಡುಕಿಕೊಂಡು ಬಂದವು. ಅದೇ ರೀತಿ ನಾವು ಕೂಡ ಪರಿಸರ ಹಾಗೂ ಪ್ರಾಣಿಗಳ ಸಂರಕ್ಷಣೆಗೆ ಬದ್ಧರಾಗಬೇಕು ಎಂದರು.
ಜನಮಿತ್ರ ಪತ್ರಿಕೆಯ ಸಂಪಾದಕ ನವೀನ್ ಸಿ ಆರ್ ಮಾತನಾಡಿ, ಮಕ್ಕಳಿಗೆ ಈಗಿನಿಂದಲೇ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಪರಿಸರ ಹಾಗೂ ವನ್ಯಜೀವಿಗಳ ಬಗ್ಗೆ ತಮ್ಮ ಮನಸ್ಸಿನಲ್ಲಿ ಇರುವ ಭಾವನೆಗಳನ್ನು ಚಿತ್ರ ಬಿಡಿಸುವುದರ ಮೂಲಕ ಅಭಿವ್ಯಕ್ತಗೊಳಿಸಿ ಪ್ರಕೃತಿಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಮಾತನಾಡಿ, ಕನ್ನಡ ದಿನಪತ್ರಿಕೆ ರಾಜಕೀಯ, ಕ್ರೈಂ, ಸಿನಿಮಾ ವಿಚಾರಗಳಿಗೆ ಮಾತ್ರ ಸೀಮಿತವಾಗದೆ ಮಕ್ಕಳಲ್ಲಿ ಕಾಡುಪ್ರಾಣಿ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸಲು ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಿರುವುದು ಸ್ವಾಗತಾರ್ಹ. ಇದರಿಂದ ಮಕ್ಕಳಲ್ಲಿ ಏಕಾಗ್ರತೆಯ ಜೊತೆಗೆ ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುವರ್ಣ ವಾಹಿನಿಯ ಜಿಲ್ಲಾ ವರದಿಗಾರ ಹರೀಶ್, ಪೂರ್ಣಪ್ರಜ್ಞ ಶಾಲೆಯ ಪ್ರಾಂಶುಪಾಲ ಪ್ರಶಾಂತ್ ಕುಮಾರ್, ಪ್ರಜಾವಾಣಿ ವರದಿಗಾರ ಮಲ್ಲೇಶ್, ಕನ್ನಡಪ್ರಭ ತಾಲೂಕು ವರದಿಗಾರ ರಾಘವೇಂದ್ರ ಹೊಳ್ಳ, ಜನಮಿತ್ರ ಪತ್ರಿಕೆಯ ವರದಿಗಾರ ಬಿ ಎನ್ ಗಣೇಶ್, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ ಬಿ ಶಿವರಾಜ್, ಕಸಾಪ ಅಧ್ಯಕ್ಷ ಮಾನ ಮಂಜೇಗೌಡ ಉಪಸ್ಥಿತರಿದ್ದರು.ಇಪ್ಪತ್ತಕ್ಕೂ ಹೆಚ್ಚು ಶಾಲೆಗಳಿಂದ 80 ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.