ರೇಬೀಸ್‌ ನಿಯಂತ್ರಣಕ್ಕೆ ಜಾಗೃತಿ ಮೂಡಿಸಿ

KannadaprabhaNewsNetwork |  
Published : Oct 08, 2026, 02:45 AM IST
(ಫೋಟೊಬಿಕೆಟಿ1, ಜಿಲ್ಲಾಧಿಕಾರಿ ಸಂಗಪ್ಪ ಅವರು ಜಿಲ್ಲಾಧಿಕಾರಿಗಳ ಕಚೇರಿ ಸಂಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ರೇಬೀಸ್ ನಿಯಂತ್ರಣಕ್ಕಾಗಿ ನಾಯಿ ಕಡಿತ ಪ್ರಕರಣಗಳಲ್ಲಿ ತಕ್ಷಣದ ಚಿಕಿತ್ಸೆ, ಲಸಿಕೆ ಹಾಗೂ ಅಗತ್ಯ ವೈದ್ಯಕೀಯ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವುದು, ಸಾರ್ವಜನಿಕರಲ್ಲಿ ರೇಬೀಸ್ ಕುರಿತು ಜಾಗೃತಿ ಮೂಡಿಸುವುದು ಹಾಗೂ ರೋಗದ ಹರಡುವಿಕೆ ತಡೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರೇಬೀಸ್ ನಿಯಂತ್ರಣಕ್ಕಾಗಿ ನಾಯಿ ಕಡಿತ ಪ್ರಕರಣಗಳಲ್ಲಿ ತಕ್ಷಣದ ಚಿಕಿತ್ಸೆ, ಲಸಿಕೆ ಹಾಗೂ ಅಗತ್ಯ ವೈದ್ಯಕೀಯ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವುದು, ಸಾರ್ವಜನಿಕರಲ್ಲಿ ರೇಬೀಸ್ ಕುರಿತು ಜಾಗೃತಿ ಮೂಡಿಸುವುದು ಹಾಗೂ ರೋಗದ ಹರಡುವಿಕೆ ತಡೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಂಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮ ಹಾಗೂ ಹಾವು ಕಡಿತದ ವಿಷಬಾಧೆ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳ ನಡುವೆ ಸಮನ್ವಯದಿಂದ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು.ಅದೇ ರೀತಿ, ಹಾವು ಕಡಿತದ ವಿಷಬಾಧೆಯಿಂದ ಸಂಭವಿಸಿದ ಸಾವುಗಳ ಬಗ್ಗೆಯೂ ಪರಿಶೀಲನೆ ನಡೆಸಿದ ಅವರು, ಹಾವು ಕಡಿತಕ್ಕೊಳಗಾದವರಿಗೆ ತಕ್ಷಣ ಚಿಕಿತ್ಸೆ ದೊರೆಯುವಂತೆ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ ಹಾಗೂ ಆಂಟಿ ಸ್ನೇಕ್ ವೆನಮ್ ಲಭ್ಯತೆ ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಯಿತು. ಹಾವು ಕಡಿತದ ಸಂದರ್ಭದಲ್ಲಿ ಸಕಾಲದಲ್ಲಿ ಆಸ್ಪತ್ರೆಗೆ ತೆರಳುವ ಕುರಿತು ಗ್ರಾಮೀಣ ಪ್ರದೇಶದ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯತೆಯನ್ನೂ ಸಭೆಯಲ್ಲಿ ಹೇಳಿದರು.ಜಿಲ್ಲಾ ಸರ್ವಲೆನ್ಸ್ ವಿಭಾಗದ ಡಾ.ಸೀಮಾ ಅವರು ರೇಬೀಸ್ ಹಾಗೂ ಹಾವು ಕಡಿತದಿಂದ ಆದ ಪ್ರಕರಣಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಕಳೆದ 2025ರಲ್ಲಿ ರೇಬೀಸ್‌ನಿಂದಾಗಿ 25,152 ಪ್ರಕರಣಗಳ ಪೈಕಿ 5 ಮೃತಪಟ್ಟರೆ, ಈ ವರ್ಷ ಜನವರಿಯಿಂದ ಸೆಪ್ಟೆಂಬರ್‌ವರೆಗೆ 24,092 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 7 ಜನ ಮೃತಪಟ್ಟಿದ್ದಾರೆ. ಹಾವು ಕಡಿತ ಪ್ರಕರಣಗಳಲ್ಲಿ 2025ರಲ್ಲಿ 586 ಪ್ರಕರಣಗಳಲ್ಲಿ 4 ಮೃತಪಟ್ಟರೆ, ಪ್ರಸಕ್ತ ವರ್ಷ 617 ಪ್ರಕರಣಗಳ ಪೈಕಿ 15 ಮೃತಪಟ್ಟಿರುವುದಾಗಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ, ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ.ಅಶೋಕ ಸೂರ್ಯವಂಶಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಶಿವನಗೌಡ ಪಾಟೀಲ, ಜಿಲ್ಲಾ ಶಸ್ತ್ರ ಚಿಕಿತ್ಸಕ ಮಹೇಶ ಕೋಣಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ, ಶಿಕ್ಷಣ ಇಲಾಖೆಯ ಉಪ ಸಮನ್ವಯಾಧಿಕಾರಿ ಪ್ರಮೋದಿನಿ ಬಳೂಲಮಟ್ಟಿ ಸೇರಿದಂತೆ ತಾಲೂಕಾ ಮಟ್ಟದ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.----

ಕೋಟ್‌

ರೇಬೀಸ್ ಹಾಗೂ ಹಾವು ಕಡಿತದಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟಲು ಆರೋಗ್ಯ, ಪಶುಪಾಲನೆ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಪ್ರಕರಣಗಳ ವರದಿ, ಪರಿಶೀಲನೆ, ಚಿಕಿತ್ಸಾ ವ್ಯವಸ್ಥೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳಲ್ಲಿ ಯಾವುದೇ ವಿಳಂಬವಾಗದಂತೆ ಅಧಿಕಾರಿಗಳು ಗಮನಹರಿಸಬೇಕು. ನಿಷ್ಕಾಳಜಿ ವಹಿಸುವವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗುವುದು.ಸಂಗಪ್ಪ, ಜಿಲ್ಲಾಧಿಕಾರಿಗಳು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12ರಂದು ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ
ತಾಪಂ: ಬೆಳಗಾವಿಯಲ್ಲಿ ಮಹಿಳೆಯರಿಗೆ ಸಿಂಹಪಾಲು