ಬಳ್ಳಾರಿ: ಬಾಲ್ಯ ವಿವಾಹ ತಡೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ನಿಷೇಧ ಹಾಗೂ ಮಹಿಳಾ ಅಭಿವೃದ್ಧಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಜತೆಗೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುವ ಸಮುದಾಯಗಳಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಹೇಳಿದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಂಡು ಬಂದಾಗ ಅಧಿಕಾರಿಗಳು ಪೊಲೀಸರ ಸಹಕಾರ ಪಡೆದು ಬಾಲ್ಯ ವಿವಾಹ ತಡೆಗಟ್ಟಬೇಕು. ಇದಕ್ಕೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದ್ದು, ಈ ಕುರಿತು ಅಧಿಕಾರಿಗಳು ಸಮನ್ವತೆ ಸಾಧಿಸಬೇಕು ಎಂದು ಹೇಳಿದರು.
ಶಾಲಾ ಕಾಲೇಜುಗಳಲ್ಲಿ ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಬೇಕು. “ತೆರೆದ ಮನೆ” ಕಾರ್ಯಕ್ರಮದಡಿ ಪೊಲೀಸ್ ಠಾಣೆ, ನ್ಯಾಯಾಲಯ ಸೇರಿದಂತೆ ವಿವಿಧ ಇಲಾಖೆಗಳಿಗೆ ವಾರಕ್ಕೊಮ್ಮೆ ವಿದ್ಯಾರ್ಥಿಗಳನ್ನು ಕರೆದೊಯ್ದು, ಕಾನೂನು ಸುವ್ಯವಸ್ಥೆ ಪ್ರಾತಕ್ಷಿಕೆ ತೋರಿಸಿ ಅಧಿಕಾರಿಗಳೊಂದಿಗೆ ನಿರ್ಭೀತಿಯಿಂದ ಸ್ನೇಹ ಬೆಸೆದುಕೊಳ್ಳಲು ಅನುವು ಮಾಡಿ ಎಂದು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದರು.ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸ್ಥಳೀಯ ಮಟ್ಟದಲ್ಲಿ ಎರಡು ಅಥವಾ ಮೂರು ಶಾಲೆಯ ಮಕ್ಕಳನ್ನು ಒಂದೆಡೆ ಸೇರಿಸಿ ಮಕ್ಕಳ ಸಹಾಯವಾಣಿ, ಪೊಕ್ಸೊ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಮತ್ತಿತರ ವಿಷಯಗಳ ಬಗ್ಗೆ ತಿಳಿಸಬೇಕು ಎಂದರು.
ಶಾಲೆಯಲ್ಲಿ ಮಕ್ಕಳು ತಮ್ಮ ಮೇಲಿನ ದೌರ್ಜನ್ಯವನ್ನು ಹೇಗೆ ತಡೆಗಟ್ಟಬಹುದು. ಬ್ಯಾಡ್ ಟಚ್ ಅಂದರೇನು? ಗುಡ್ ಟಚ್ ಅಂದರೇನು? ಯಾರಾದಾರೂ ಬ್ಯಾಡ್ ಟಚ್ ಮಾಡಿದರೆ ಅದನ್ನು ಹೇಗೆ ಗುರುತಿಸಬೇಕು. ಅವುಗಳನ್ನು ತಡೆಗಟ್ಟಲು ಮಕ್ಕಳು ಏನು ಮಾಡಬೇಕು ಎಂಬುದರ ಮಾಹಿತಿ ಮಕ್ಕಳಿಗೆ ನೀಡಬೇಕು. ಕಾಯ್ದೆ ಬಗ್ಗೆ ಪರಿಪೂರ್ಣವಾಗಿ ಅರಿತುಕೊಳ್ಳಬೇಕು ಎಂದು ತಿಳಿಸಿದರು.
55 ಬಾಲ್ಯವಿವಾಹಕ್ಕೆ ತಡೆ:
ಬಾಲ್ಯವಿವಾಹವೆಂದು ಗುರುತಿಸಲು ಸಂತ್ರಸ್ತೆಯ ಆಧಾರ್ ಕಾರ್ಡ್‌ನಲ್ಲಿನ ಜನ್ಮ ದಿನಾಂಕ ಪರಿಗಣಿಸದೇ ಶಾಲಾ ದಾಖಲೆ, ಜನನ ಪ್ರಮಾಣಪತ್ರವನ್ನು ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.