ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸಿ: ಡಾ.ಶಿವಕುಮಾರಸ್ವಾಮಿ ತಾತ

KannadaprabhaNewsNetwork |  
Published : Jul 20, 2024, 12:46 AM IST
ಸಿರುಗುಪ್ಪ ತಾಲೂಕಿನ ಮಿಟ್ಟೆಸೂಗೂರು ಗ್ರಾಮದಲ್ಲಿ ಜರುಗಿದ ರಂಗ ಮುಂಗಾರು -೨೦೨೪ ಕಾರ್ಯಕ್ರಮಕ್ಕೆ ಹಿರಿಯ ರಂಗಭೂಮಿ ಕಲಾವಿದ ಡಾ.ಶಿವಕುಮಾರಸ್ವಾಮಿ ತಾತ ಚಾಲನೆ ನೀಡಿದರು.  | Kannada Prabha

ಸಾರಾಂಶ

ಇಂದಿನ ಮಕ್ಕಳು ಸಾಮಾನ್ಯ ಸಮಸ್ಯೆಗಳನ್ನು ಸಹ ಎದುರಿಸಲಾಗದ ದುರ್ಬಲ ಮನಸ್ಥಿತಿಯಲ್ಲಿದ್ದಾರೆ.

ಬಳ್ಳಾರಿ: ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಹಾಗೂ ಸಂಸ್ಕಾರವಂತರನ್ನಾಗಿಸುವ ಕೆಲಸಗಳು ಹೆಚ್ಚಾಗಿ ನಡೆಯಬೇಕಾಗಿದೆ ಎಂದು ಹಿರಿಯ ರಂಗಭೂಮಿ ಕಲಾವಿದ ಡಾ. ಶಿವಕುಮಾರಸ್ವಾಮಿ ತಾತ ಅಭಿಪ್ರಾಯಪಟ್ಟರು.

ಸಿರುಗುಪ್ಪ ತಾಲೂಕಿನ ಮಿಟ್ಟೆಸೂಗೂರು ಗ್ರಾಮದ ಮಾರಮ್ಮ ದೇವಿ ಸಭಾಂಗಣದಲ್ಲಿ ಭೈರಗಾಮದಿನ್ನೆಯ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ''ರಂಗ ಮುಂಗಾರು -೨೦೨೪'' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ಮಕ್ಕಳು ಸಾಮಾನ್ಯ ಸಮಸ್ಯೆಗಳನ್ನು ಸಹ ಎದುರಿಸಲಾಗದ ದುರ್ಬಲ ಮನಸ್ಥಿತಿಯಲ್ಲಿದ್ದಾರೆ. ಸಮಾಜದಲ್ಲಿ ಚಿಕ್ಕ ಚಿಕ್ಕ ವಿಚಾರಗಳಿಗೂ ಮಕ್ಕಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಮಕ್ಕಳ ಮನಸ್ಥಿತಿ ಬದಲಾವಣೆ ಹಾಗೂ ಅವರನ್ನು ಸದಾ ಕ್ರೀಯಾಶೀಲರನ್ನಾಗಿಸಲು ಸಾಂಸ್ಕೃತಿಕ ಪ್ರಜ್ಞೆ ಬಿತ್ತುವುದು ಅತ್ಯಂತ ಅಗತ್ಯವಿದೆ. ಈ ದಿಸೆಯಲ್ಲಿ ಸರ್ಕಾರವಷ್ಟೇ ಅಲ್ಲ; ಸಂಘ, ಸಂಸ್ಥೆಗಳು ಸಹ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.

ಕಳೆದ ಹತ್ತು ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಬಯಲಾಟ, ನಾಟಕ, ಪುರಾಣ, ಪ್ರವಚನ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುತ್ತಿದ್ದವು. ಅವುಗಳೇ ನಮ್ಮನ್ನು ಕಲಾವಿದರನ್ನಾಗಿ ತಯಾರಿಸಿದವು. ಆದರೆ ಇಂದಿನ ಟಿವಿ, ಮೊಬೈಲ್‌ಗಳ ಅನಿಯಮಿತ ಬಳಕೆಯಿಂದಾಗಿ ಮನುಷ್ಯನಲ್ಲಿನ ಸಾಂಸ್ಕೃತಿಕ ಪ್ರಜ್ಞೆ ಅಧೋಗತಿಯತ್ತ ಸಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಸ್ಥೆಯ ಕಾರ್ಯದರ್ಶಿ ಆರ್‌.ಪಿ. ಮಂಜುನಾಥ್ ಬಿ.ಜಿ. ದಿನ್ನೆ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಸಾಂಸ್ಕೃತಿಕ ಪರಂಪರೆಗೆ ಪುನಶ್ಚೇತನ ಕೊಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಶಿಕ್ಷಣದಲ್ಲಿ ರಂಗಭೂಮಿಯನ್ನು ಅಳವಡಿಸುವ ಮೂಲಕ ಮಕ್ಕಳಲ್ಲಿ ಪ್ರಬುದ್ಧತೆಯನ್ನು ಹಾಗೂ ಸಮಾಜದಲ್ಲಿ ಸ್ವಾಸ್ಥ್ಯತೆಯನ್ನು ಬೆಳೆಸಬಹುದಾಗಿದೆ ಎಂದರು.

ಇದೇ ವೇಳೆ ರಂಗದಿಗ್ಗಜ ಚಿದಾನಂದ ಗವಾಯಿಗಳಿಗೆ ''''ಕಾರಂತ ರತ್ನ -೨೦೨೪'' ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾವಿಹಾಳ್ ಗ್ರಾಪಂ ಅಧ್ಯಕ್ಷ ಬಿ. ಜಯರಾಮರೆಡ್ಡಿ, ಹಚ್ಚೊಳ್ಳಿ ರೈತ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ. ನರಸನಗೌಡ, ವೈದ್ಯ ಡಾ. ಜಿ. ನಂದೀಶ್, ಡಾ. ಮಸ್ತಾನ್ ವಲಿ ಖಾದ್ರಿ ಹಾಗೂ ಮುಖಂಡ ಮಾರೆಪ್ಪ, ಆರ್. ಮಲ್ಲನಗೌಡ, ರಮೇಶ ಮತ್ತಿತರರು ಭಾಗವಹಿಸಿದ್ದರು.

ಸಂಸ್ಥೆಯ ಸದಸ್ಯ ಡಿ.ಎಂ. ಯಲ್ಲಪ್ಪ, ವಿನಯ್ ಹಾಗೂ ಅತಿಥಿ ಶಿಕ್ಷಕ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ವಿವಿಧ ತಂಡಗಳಿಂದ ಸಮೂಹ ನೃತ್ಯಗಳು, ಗೊರವರ ಕುಣಿತ, ಕೊರವಂಜಿ ನೃತ್ಯರೂಪಕ, ಕೋಲಾಟ, ಸುಗಮ ಸಂಗೀತ ಹಾಗೂ ಹಾರೋಹಕ್ಕಿ ನಾಟಕ ಪ್ರದರ್ಶನ ಜರುಗಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಡಗಿ, ನಾಲತವಾಡಗೆ ಪಿಯು ಕಾಲೇಜು ಪರಿಶೀಲಿಸಿ ಮಂಜೂರು
ಲಗಾನಿ ಹೆಸರಿನಲ್ಲಿ ಕಬ್ಬು ಬೆಳೆಗಾರರ ಲೂಟಿ