ಠಾಣೆಗಳಲ್ಲಿ ಜನಸ್ನೇಹಿ ಪೊಲೀಸ್ ವಾತಾವರಣ ನಿರ್ಮಿಸಿ

KannadaprabhaNewsNetwork |  
Published : Nov 18, 2023, 01:00 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಠಾಣೆಗಳಲ್ಲಿ ಜನಸ್ನೇಹಿ ಪೊಲೀಸ್ ವಾತಾವರಣ ನಿರ್ಮಾಣ ಮಾಡವುದರ ಮೂಲಕ ಇಲಾಖೆಯ ಘನತೆ ಹೆಚ್ಚಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಪೊಲೀಸ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು. ಶುಕ್ರವಾರ ಚಿತ್ರದುರ್ಗದಲ್ಲಿ ನಡೆದ ಪೊಲೀಸ್ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಠಾಣೆಗಳಲ್ಲಿ ಹೆಲ್ಪಿಂಗ್ ಡೆಸ್ಕ್, ಸಿಸಿ ಕ್ಯಾಮರಾ ಇರಬೇಕು. ದೂರು ನೀಡಲು ಠಾಣೆಗೆ ಬರುವ ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಗೃಹಸಚಿವ ಡಾ.ಜಿ.ಪರಮೇಶ್ವರ ತಾಕೀತು.ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಠಾಣೆಗಳಲ್ಲಿ ಜನಸ್ನೇಹಿ ಪೊಲೀಸ್ ವಾತಾವರಣ ನಿರ್ಮಾಣ ಮಾಡವುದರ ಮೂಲಕ ಇಲಾಖೆಯ ಘನತೆ ಹೆಚ್ಚಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಪೊಲೀಸ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶುಕ್ರವಾರ ಚಿತ್ರದುರ್ಗದಲ್ಲಿ ನಡೆದ ಪೊಲೀಸ್ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಠಾಣೆಗಳಲ್ಲಿ ಹೆಲ್ಪಿಂಗ್ ಡೆಸ್ಕ್, ಸಿಸಿ ಕ್ಯಾಮರಾ ಇರಬೇಕು. ದೂರು ನೀಡಲು ಠಾಣೆಗೆ ಬರುವ ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದರು.

ಶೋಷಿತ ಸಮುದಾಯಗಳ‌ ರಕ್ಷಣೆ ಮಾಡುವ ಜವಾಬ್ದಾರಿ ಪೊಲೀಸರ ಮೇಲಿದೆ. ಇದನ್ನು ಅತ್ಯಂತ ಕಾಳಜಿ ಮತ್ತು ಸೂಕ್ಷ್ಮವಾಗಿ ಮಾಡಬೇಕು. ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವ ಪ್ರಮಾಣ ತೀರ ಕಡಿಮೆ ಇದೆ. ಇಡಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇಂತಹ ಪ್ರಕರಣಗಳನ್ನು ಠಾಣೆ ಮಟ್ಟದಲ್ಲಿ‌ ರಾಜಿ ಪಂಚಾಯ್ತಿ ಮಾಡುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಆರೋಪಿಗಳು ಕಾನೂ‌ನು ಪರಿದಿಯಿಂದ ತಪ್ಪಿಸಿಕೊಳ್ಳಬಾರದು. ಸೂಕ್ತ ಸಾಕ್ಷ್ಯಧಾರಗಳನ್ನು ಕಲೆ ಹಾಕಿ, ಶಿಕ್ಷೆ ಆಗುವಂತೆ ತನಿಖಾಧಿಕಾರಿಗಳು ನೋಡಿಕೊಳ್ಳಬೇಕು. ಹಿರಿಯ ಅಧಿಕಾರಿಗಳು ಆಗಾಗ ತನಿಖೆಯನ್ನು ಪರಿಶೀಲಿಸಿ, ಮಾರ್ಗದರ್ಶನ‌ ಮಾಡಬೇಕು ಎಂದರು.ಕಿಡಿಗೇಡಿಗಳು ಧರ್ಮ, ಜಾತಿ ಹೆಸರಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಸೃಷ್ಟಿಸಿ ಗಲಭೆ ಉಂಟು ಮಾಡಲು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿರುತ್ತಾರೆ. ಎಲ್ಲಿಯೋ ನಡೆದ ಘಟನೆಯನ್ನು ತಿರುಚಿ ಶಾಂತಿ‌ ಕದಡುವಂತೆ ಮಾಡುತ್ತಾರೆ. ಅಲ್ಲದೇ, ಡೀಪ್‌ಫೇಕ್ ಎಂಬ ತಂತ್ರಜ್ಞಾನ ಬಳಸಿಕೊಂಡು ಮಹಿಳೆಯರ ಮಾನ ಕಳೆಯುವ ಪ್ರಕರಣಗಳು ನಡೆಯುತ್ತಿರುವ ವರದಿಯಾಗುತ್ತಿವೆ. ಇಂತಹ ಪ್ರಕರಣಗಳನ್ನು ನಿರ್ಲಕ್ಷಿಸುವುದು ಬೇಡ. ಈ ರೀತಿಯ ದೂರುಗಳು ಬಂದಾಗ ಕೂಡಲೇ‌ ಎಫ್‌ಐಆರ್ ದಾಖಲಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

ರಾಜ್ಯದ ಪ್ರಮುಖ‌ ನಗರಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿವೆ. ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ತಂತ್ರಜ್ಞಾನವನ್ನು ಬಳಸಿಕೊಂಡು ಮಟ್ಟ ಹಾಕಬೇಕು. ತಾಂತ್ರಿಕ ಪದವೀಧರ ಸಿಬ್ಬಂದಿ ಗುರುತಿಸಿ ಜವಾಬ್ದಾರಿ ನೀಡಬೇಕು. ಸೈಬರ್ ಕ್ರೈಂ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜನರಿಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕು. ಹೆಚ್ಚು ಅಪಘಾತಗಳು ಸಂಭವಿಸುವ (ಬ್ಲಾಕ್ ಸ್ಪಾಟ್) ಸ್ಥಳಗಳನ್ನು ಗುರುತಿಸಿ, ಅಪಘಾತಕ್ಕೆ ಕಾರಣಗಳನ್ನು ಪತ್ತೆಹಚ್ಚಬೇಕು. ರಸ್ತೆಗಳಲ್ಲಿ ಸೂಚನಾಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಅಗತ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಮುಂದಾಗಬೇಕು. ಹೈವೆ ಪ್ಯಾಟ್ರೋಲಿಂಗ್ ಅಚ್ಚುಕಟ್ಟಾಗಿ ನಡೆಸಬೇಕು ಎಂದರು.

ಪ್ರತಿ ಜಿಲ್ಲೆಗೆ ಇಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನು ನಿಯೋಜಿಸಲಾಗುತ್ತಿದೆ. ಶಾಂತಿ ಸುವಸ್ಥೆ ಕಾಪಾಡಲು ಒಬ್ಬರು, ಅಪರಾಧ ವಿಭಾಗಕ್ಕೆ ಮೊತ್ತಬ್ಬರು ಎಎಸ್‌ಪಿಯನ್ನು‌ ನಿಯೋಜಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಡಿಐಜಿ ತ್ಯಾಗರಾಜ್, ಜಿಲ್ಲಾಧಿಕಾರಿ ದಿವ್ಯಾಪ್ರಭು, ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್‌ ಮೀನಾ ಇದ್ದರು.

-------------------------ಡ್ರಗ್ಸ್ ಮುಕ್ತ ಕರ್ನಾಟಕದ ಗುರಿ

ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದು ಸರ್ಕಾರದ ಗುರಿಯಾಗಿದೆ. ಈ‌ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲಿ ಮಾದರಿಯಾಗಿ ಹೊರ ಹೊಮ್ಮಬೇಕು ಎಂದು ಸಚಿವ ಪರಮೇಶ್ವರ್‌ ಹೇಳಿದರು.

ಪೆಡ್ಲರ್‌ಗಳು ಹೊರ ರಾಜ್ಯಗಳಿಂದ ವಿವಿಧ ಬಗೆಯ ಡ್ರಗ್ಸ್ ಸರಬರಾಜು ಮಾಡುತ್ತಿರುತ್ತಾರೆ. ಈ ಬಗ್ಗೆ ಚಲನವಲನಗಳ ಮೇಲೆ ಸೂಕ್ಷ್ಮವಾಗಿ ನಿಗಾವಹಿಸಬೇಕು. ಹೊರ ರಾಜ್ಯದ ಗಡಿಗಳಲ್ಲಿ ತಪಾಸಣೆ ನಡೆಸಬೇಕು. ಹೆಚ್ಚಾಗಿ ಕಾಲೇಜು ವಿದ್ಯಾರ್ಥಿ ಗಳು ಡ್ರಗ್ಸ್‌ ಚಟಗಳಿಗೆ ಮಾರು ಹೋಗುತ್ತಿದ್ದು, ಅವರ ಚಟುವಟಿಕೆಗಳ ಮೇಲೆ ನಿಗಾವಹಿಸುವುದು ಅಗತ್ಯ. ಡ್ರಗ್ಸ್ ಸೇವಿಸುವರು ಅಥವಾ ಪೂರೈಕೆ ಮಾಡುವವರು ಸಿಕ್ಕಿಬಿದ್ದರೆ, ಮೂಲ‌ ಆರೋಪಿಯನ್ನು‌ ಪತ್ತೆ ಹಚ್ಚುವವರೆಗೆ ತನಿಖೆ ಕೈಗೊಳ್ಳಬೇಕು. ಡ್ರಗ್ಸ್ ಸೇವನೆ ತಪ್ಪು, ಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!