ಇನ್ಸ್ಟಾದಲ್ಲಿ ಹಣ ಗಳಿಸುವ ಆಮಿಷಕ್ಕೆ ಬಿದ್ದು ವಂಚನೆ

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ರಾಮನಗರ: ಇನ್ಸ್ಟಾಗ್ರಾಂ ನೋಡುತ್ತಲೇ ಹಣ ಸಂಪಾದಿಸಬಹುದೆಂಬ ವಂಚಕರ ಆಮಿಷಕ್ಕೆ ಬಲಿಯಾದ ವ್ಯಕ್ತಿಯೊಬ್ಬ 2 ಲಕ್ಷ 2 ಸಾವಿರ ರುಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.

ರಾಮನಗರ: ಇನ್ಸ್ಟಾಗ್ರಾಂ ನೋಡುತ್ತಲೇ ಹಣ ಸಂಪಾದಿಸಬಹುದೆಂಬ ವಂಚಕರ ಆಮಿಷಕ್ಕೆ ಬಲಿಯಾದ ವ್ಯಕ್ತಿಯೊಬ್ಬ 2 ಲಕ್ಷ 2 ಸಾವಿರ ರುಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.

ಕನಕಪುರ ನಗರ ಕುವೆಂಪು ನಗರ ಬಡಾವಣೆ ವಾಸಿ ಕಿರಣ್ ನಾಯಕ್‌ ವಂಚನೆಗೆ ಒಳಗಾದವರು. ಇನ್ಸ್ಟಾಗ್ರಾಂನಲ್ಲಿ ಖಾತೆ ಹೊಂದಿರುವ ಕಿರಣ್ ನಾಯಕ್‌ , ಇನ್ಸ್ಟಾಗ್ರಾಂ ನೋಡುತ್ತಿದ್ದಾಗ MKaciaxz ಎಂಬ ಇನ್ಸ್ಟಾಗ್ರಾಂ ಖಾತೆಯ ರೀಲ್ಸ್ ನಲ್ಲಿ ನೀವು ಮನೆಯಲ್ಲಿ ಕುಳಿತುಕೊಂಡು ಇನ್ಸ್ಟಾಗ್ರಾಂ ನೋಡುತ್ತಲೇ ಹಣ ಗಳಿಸಬಹುದು ಎಂದು ಬರೆದಿತ್ತು.

ಆ ರೀಲ್ಸ್ ನಲ್ಲಿದ್ದ Contact us ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಅವರು ತಿಳಿಸಿದಂತೆ ಹಂತ ಹಂತವಾಗಿ ಪ್ರಕ್ರಿಯೆ ಮುಗಿಸಿದಾಗ ವಾಟ್ಸ್ ಆಪ್ ಚಾಟ್ಸ್ ಓಪನ್ ಆಗಿದೆ. ಅದಕ್ಕೆ ಕಿರಣ್ ನಾಯಕ್ ಹಾಯ್ ಎಂದು ಮೆಸೇಜ್ ಮಾಡಿದಾಗ ಅವರು ಇಂಗ್ಲಿಷ್ ನಲ್ಲಿ ಮನೆಯಲ್ಲಿ ಕುಳಿತು ದಿನಕ್ಕೆ 1ರಿಂದ 5 ಸಾವಿರ ರುಪಾಯಿ ಹಣ ಗಳಿಸಬಹುದು ಎಂದು ಟೆಲಿಗ್ರಾಮ್ ಲಿಂಕ್ ಕಳುಹಿಸಿದ್ದಾರೆ.

ಆ ಲಿಂಕ್ ನೊಂದಿಗೆ ಸಂಭಾಷಣೆ ನಡೆಸಿ ಅವರು ಕಳುಹಿಸಿದ ಯುಪಿ ಐಡಿಗೆ ನವೆಂಬರ್ 1ರಂದು 1 ಸಾವಿರ ರುಪಾಯಿ ಕಳುಹಿಸಿದಾಗ ತಕ್ಷಣ ಕಿರಣ್ ನಾಯಕ್‌ ಖಾತೆಗೆ 1300 ರುಪಾಯಿ ಜಮೆಯಾಗಿದೆ. ನಂತರ 2 ಸಾವಿರ ರು.ಗೆ ಪ್ರತಿಯಾಗಿ 2600 ರುಪಾಯಿ ಜಮಾ ಮಾಡಿದ್ದಾರೆ. ಇದನ್ನು ನಂಬಿದ ಕಿರಣ್ ನಾಯಕ್‌ ತಮ್ಮ ಐಸಿಐಸಿಐ ಬ್ಯಾಂಕ್ ಖಾತೆಯಿಂದ ವಿವಿಧ ಯುಪಿ ಐಡಿಗಳಿಗೆ ಮೊದಲು 10 ಸಾವಿರ, ಎರಡನೇ ಬಾರಿ 35 ಸಾವಿರ , ಮೂರನೇ ಬಾರಿ 1 ಲಕ್ಷ ಹಾಗೂ ನಾಲ್ಕನೇ ಬಾರಿ 50 ಸಾವಿರ ಕಳುಹಿಸಿದ್ದಾರೆ. ಅಲ್ಲದೆ, ಫೋನ್ ಪೇ ಮೂಲಕವೂ 3 ಸಾವಿರ, ಮತ್ತೊಮ್ಮೆ 4 ಸಾವಿರ ಹಾಕಿದ್ದಾರೆ. ಈ ರೀತಿ 2 ಲಕ್ಷ 2 ಸಾವಿರ ರುಪಾಯಿಗಳನ್ನು ಕಳುಹಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಖಾತೆಗೆ ಯಾವುದೇ ಹಣ ಜಮೆ ಆಗಿಲ್ಲ.

ಈ ವಿಚಾರವನ್ನು ಕಿರಣ್ ನಾಯಕ್‌ ತನ್ನ ಸ್ನೇಹಿತರ ಬಳಿ ತಿಳಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಆನಂತರ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Share this article