ಜಿಲ್ಲಾ ಮಟ್ಟದ ಯುವಜನೋತ್ಸವ ಮತ್ತು ಸಾಧಕ ಕ್ರೀಡಾಪಟುಗಳ ಅಭಿನಂದನಾ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸಿರುವ ನಾಡಿನ ದಿವ್ಯಾಂಗ ಚೇತನರ ರಕ್ಷಣೆಗೆ ಸರಕಾರ, ಸಂಘ ಸಂಸ್ಥೆಗಳು ಮುಂದಾಗಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮನವಿ ಮಾಡಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವ ಜನೋತ್ಸವ ಮತ್ತು ಸಾಧಕ ಕ್ರೀಡಾಪಟುಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಏಷ್ಯನ್ ಒಲಂಪಿಕ್ ನಲ್ಲಿ ಸಾಧನೆ ಮಾಡಿರುವ ದಿವ್ಯಾಂಗರ ಸಾಧನೆ ಬಗ್ಗೆ ರಾಜ್ಯದ ಮುಖ್ಯಮಂತ್ರಿ, ಕ್ರೀಡಾ ಇಲಾಖೆ ಸಚಿವರ ಕಿವಿಗೆ ಮುಟ್ಟುವಂತಾಗಲಿ ಎಂದರು. ಕಣ್ಣಿನ ದೃಷ್ಟಿ ಇಲ್ಲದವಳು ಏಷ್ಯನ್ ಪ್ಯಾರಾ ಒಲಂಪಿಕ್‌ನಲ್ಲಿ ಚಿನ್ನದ ಪದಕ ತಂದಿದ್ದೇನೆ. ದುರಾದೃಷ್ಟ ಆ ಪದಕವನ್ನು ನಾನೇ ಕಣ್ಣಲ್ಲಿ ನೋಡುವಂತಿಲ್ಲ. ಕಣ್ಣಿರುವ ನೀವು ಇನ್ನಾದರೂ ಕಣ್ಣೆತ್ತಿ ಚಿನ್ನದ ಪದಕ ತರುವ ಮೂಲಕ ದೇಶದ ಘನತೆ ಹೆಚ್ಚಿಸಿ ಎಂದು ಚಿನ್ನದ ಹುಡುಗಿ ರಕ್ಷಿತಾರಾಜು ಸಂದರ್ಶನವೊಂದರಲ್ಲಿ ಹೇಳಿರುವುದು ಯುವಜನರ ಹೃದಯದೊಳಗೆ ಸದ್ದು ಮಾಡಲಿ ಎಂದು ಕಿವಿಮಾತು ಹೇಳಿದರು. ಆಶಾಕಿರಣ ಅಂಧಮಕ್ಕಳ ಪಾಠಶಾಲೆ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಶಾಕಿರಣ ಸಂಸ್ಥೆಗೆ ಇಂದು ಸುವರ್ಣ ಅಕ್ಷರದಲ್ಲಿ ಬರೆದಿಡುವಂತ ದಿನವಾಗಿದೆ. ಏಷ್ಯನ್ ಒಲಂಪಿಕ್‌ನಲ್ಲಿ ಚಿನ್ನ ಗೆದ್ದವರನ್ನು ಅಭೂತಪೂರ್ವ ಮೆರವಣಿಗೆಯಲ್ಲಿ ಕರೆತಂದು ಇಡೀ ನಗರದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸ್ವಾಗತಿಸಿ ಅಭಿನಂದಿಸಿದ್ದಾರೆ. ರಾಜ್ಯ ಸರಕಾರ ಕೂಡ ದಿವ್ಯಾಂಗ ಮಕ್ಕಳ ಸಾಧನೆ ಪರಿಗಣಿಸಿ ಅವರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಳ್ಳಿ ಮಾತನಾಡಿ, ಆಶಾಕಿರಣ ಅಂಧಮಕ್ಕಳ ಶಾಲೆ 4 ವಿದ್ಯಾರ್ಥಿಗಳು ಈವರೆಗೆ ನಡೆದಿರುವ ಏಷ್ಯನ್ ಪ್ಯಾರಾ ಒಲಂಪಿಕ್ಸ್‌ನಲ್ಲಿ ಪದಕ ಪಡೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಬಾಳೂರು ಸಮೀಪದ ಗುಡ್ನಳ್ಳಿಯ ಲಲಿತಮ್ಮ ಎಂಬುವರ ಮೊಮ್ಮಗಳಾದ ರಕ್ಷಿತಾರಾಜು ಅವರು ಈ ಬಾರಿ ಚಿನ್ನದ ಪದಕ ಪಡೆದಿದ್ದಾರೆ. ಇವರೊಂದಿಗೆ ಚಿತ್ರದುರ್ಗದ ರಾಧ, ತುಮಕೂರಿನ ಶರತ್, ಹಾಸನದ ಕೇಶವಮೂರ್ತಿ ಕೂಡ ಚಿನ್ನದ ಪದಕ ಪಡೆದವರಾಗಿದ್ದಾರೆ. ರಕ್ಷಿತಾರಾಜು ಅವರಿಗೆ ಕೋಚ್ ಆಗಿದ್ದ ಅಂತಾರಾಷ್ಟ್ರೀಯ ತರಬೇತುದಾರ ರಾಹುಲ್ ಬಾಲಕೃಷ್ಣ ಅವರ ಪರಿಶ್ರಮ ಕೂಡ ಸಾಧನೆ ಹಿಂದಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿದರು. ಈ ವರ್ಷದಲ್ಲಿ ಚಿನ್ನದ ಪದಕ ಪಡೆದ ನಾಲ್ವರ ಜತೆಗೆ ಹಿಂದಿನ ಸಾಧಕರಾದ ಶವಾದ್, ಸುನೀಲ್, ಗೈಡ್ ರನ್ನರ್ ತಬರೀಶ್‌ಖಾನ್, ಗೋವಿಂದ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಸಮೀಪ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ, ಎಸ್ಪಿ ಡಾ. ವಿಕ್ರಮ್ ಅಮಟೆ ಮತ್ತಿತರೆ ಅಧಿಕಾರಿಗಳು ಪದಕ ವಿಜೇತರನ್ನು ಗೌರವಿಸಿದರು. ಪದಕ ವಿಜೇತರನ್ನು ಸಾರೋಟಿನಲ್ಲಿ ಕೂರಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು. ಜಿಪಂ ನಿಂದ ಹೊರಟ ಮೆರವಣಿಗೆ ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕಿನಲ್ಲಿ ಹಾದು ಬಂದು ಕಲಾಮಂದಿರದಲ್ಲಿ ಸಮಾಪ್ತಿ ಯಾಯಿತು. ನಗರದ ಸಹಸ್ರಾರು ಸಂಖ್ಯೆಯ ಶಾಲಾ, ಕಾಲೇಜು ವಿದ್ಯಾರ್ಥಿಗಳು ಚಿನ್ನದ ಸಾಧಕರನ್ನು ಸ್ವಾಗತಿಸಿದರು. ಹಾರ ತುರಾಯಿ ಹಾಕಿ ಅಭಿನಂದಿಸಿದರು. ಆಶಾಕಿರಣ ಸಂಸ್ಥೆ ಕಾರ್ಯದರ್ಶಿ ನಸ್ರುಲ್ಲಾ ಷರೀಫ್, ಕನ್ನಡ ಸೇನೆ ಅಧ್ಯಕ್ಷ ಪಿ.ಸಿ ರಾಜೇಗೌಡ, ಲಯನ್ಸ್ ಅಧ್ಯಕ್ಷ ಜಿ.ರಮೇಶ್, ನಿವೃತ್ತ ಉಪನ್ಯಾಸಕ ತಿಪ್ಪೇರುದ್ರಪ್ಪ, ಲಕ್ಷ್ಮಣ್ ಹುಣಸೇಮಕ್ಕಿ , ಬಕ್ಕಿ ಮಂಜುನಾಥ ಇದ್ದರು.. 17 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಮತ್ತು ಸಾಧಕ ಕ್ರೀಡಾಪಟುಗಳ ಅಭಿನಂದನಾ ಸಮಾರಂಭವನ್ನು ಡಾ. ಜೆ.ಪಿ. ಕೃಷ್ಣೇಗೌಡ ಉದ್ಘಾಟಿಸಿದರು.