ಪೂರ್ವಾಗ್ರಹವಿಲ್ಲದ ನೈಜ ಇತಿಹಾಸ ನಿರ್ಮಾಣ ಇಂದಿನ ಅಗತ್ಯ

KannadaprabhaNewsNetwork |  
Published : May 17, 2026, 01:45 AM IST
f | Kannada Prabha

ಸಾರಾಂಶ

ಇಂದಿನ ಯುವ ಇತಿಹಾಸಕಾರರು ಯಾವುದೇ ಪೂರ್ವಗ್ರಹಗಳಿಲ್ಲದ ನೈಜ ಚರಿತ್ರೆಯನ್ನು ಕಟ್ಟಿಕೊಡಬೇಕಿದೆ ಹಾಗೂ ಸುಳ್ಳು ಸಂಗತಿಗಳನ್ನು ಉತ್ಪಾದಿಸುತ್ತಿರುವ ಕಾರ್ಖಾನೆಗಳನ್ನು ತಡೆಯುವ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕಿದೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಇಂದಿನ ಯುವ ಇತಿಹಾಸಕಾರರು ಯಾವುದೇ ಪೂರ್ವಗ್ರಹಗಳಿಲ್ಲದ ನೈಜ ಚರಿತ್ರೆಯನ್ನು ಕಟ್ಟಿಕೊಡಬೇಕಿದೆ ಹಾಗೂ ಸುಳ್ಳು ಸಂಗತಿಗಳನ್ನು ಉತ್ಪಾದಿಸುತ್ತಿರುವ ಕಾರ್ಖಾನೆಗಳನ್ನು ತಡೆಯುವ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕಿದೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಕರೆ ನೀಡಿದರು.ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಚೆನ್ನೈನ ಸೇವ್ ಅವರ್ ಕಂಟ್ರಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಇತಿಹಾಸೋತ್ಸವ: 30 ವರ್ಷಗಳ ಸಾರ್ಥಕ ಪಯಣ ಮತ್ತು ಡಿಜಿಟಲ್ ಯುಗದಲ್ಲಿ ಐತಿಹಾಸಿಕ ಸಂಶೋಧನೆಯ ವೈಜ್ಞಾನಿಕ ಪ್ರಗತಿ ಕುರಿತ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಇತಿಹಾಸ ಕ್ಷೇತ್ರವು ಇಂದು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಬರಗೂರು ಅವರು, ರಾಜಕೀಯ ಲಾಭಕ್ಕಾಗಿ ಚರಿತ್ರೆಯನ್ನು ತಿರುಚುವ ಕೆಲಸ ನಡೆಯುತ್ತಿರುವುದು ಹೀನಾಯವಾದುದು ಎಂದು ತಿಳಿಸಿದರು. ಜಾತಿ-ಮತಗಳ ಆಧಾರದ ಮೇಲೆ ಸುಳ್ಳುಗಳನ್ನು ಸೃಷ್ಟಿಸಲಾಗುತ್ತಿದೆ ಹಾಗೂ ಇಂದಿರಾ ಗಾಂಧಿಯವರು ಚಿನ್ನ ಬೆಳ್ಳಿ ಕೊಳ್ಳಬೇಡಿ ಎಂದು ಹೇಳಿದ್ದರು ಎಂಬಂತಹ ತಪ್ಪು ಮಾಹಿತಿಗಳು ಹರಡುತ್ತಿವೆ. ಇಂತಹ ಕಾಲಘಟ್ಟದಲ್ಲಿ ಸತ್ಯವನ್ನು ಜನರಿಗೆ ತಲುಪಿಸುವ ಮಧ್ಯವರ್ತಿಗಳಾಗಿ ಇತಿಹಾಸಕಾರರು ಕೆಲಸ ಮಾಡಬೇಕು ಎಂದರು.ವಿಶ್ವವಿದ್ಯಾಲಯಗಳಿಗೆ ಕೇವಲ ಕಟ್ಟಡಗಳಷ್ಟೇ ಮುಖ್ಯವಲ್ಲ, ಅದರೊಳಗಿನ ವಿಷಯಗಳು ಬಹಳ ಮುಖ್ಯವಾಗಿವೆ. ಇತ್ತೀಚಿನ ಸಂಶೋಧನೆಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆಯೇ ಎಂಬ ಭಯವಿದೆ ಎಂದು ಹೇಳಿದ ಅವರು, ಸಾಹಿತ್ಯ, ರಾಜಕೀಯ ಮತ್ತು ಶಿಕ್ಷಣ ತಜ್ಞರೆಲ್ಲರಿಗೂ ಇತಿಹಾಸ ಪ್ರಜ್ಞೆ ಅಗತ್ಯವಾಗಿದೆ ಎಂದರು. ಚರಿತ್ರೆಯಲ್ಲಿ ನಾವು ನಾಯಕರಾಗಿ ಕಾಣಿಸಿಕೊಳ್ಳಬೇಕೇ ಹೊರತು ಖಳನಾಯಕರಾಗಿ ಅಲ್ಲ ಎಂದರು.ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಎಸ್. ಚಂದ್ರಶೇಖರ್ ಮಾತನಾಡಿ, ಮೂಲಧಾರಗಳಿಲ್ಲದೆ ಇತಿಹಾಸವನ್ನು ವ್ಯಾಖ್ಯಾನಿಸುವುದು ಅಪರಾಧವಾಗಿದೆ ಹಾಗೂ ಭವಿಷ್ಯವನ್ನು ಉತ್ತಮಗೊಳಿಸಲು ಚರಿತ್ರೆಯನ್ನು ಓದಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಸಾಮಾಜಿಕ ಮಾಧ್ಯಮಗಳು ಸಂಬಂಧಗಳನ್ನು ಬೆಸೆಯಲು ಸಹಕಾರಿಯಾಗಿವೆ. ಆದರೆ ತಂತ್ರಜ್ಞಾನವನ್ನು ಕುತಂತ್ರಕ್ಕೆ ಬಳಸುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ತಿಳಿಸಿದರು.ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಹೊಸ ಕ್ಯಾಂಪಸ್ ನಿರ್ಮಾಣ ಮಾಡಲಾಗಿದೆ. ದಾನಿಗಳಿಂದ 15 ಕೋಟಿ ಸಂಗ್ರಹವಾಗಿದ್ದು ಇನ್ನು ಕೆಲವು ದಿನಗಳಲ್ಲಿ 5 ಕೋಟಿ ತರುವೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ವಿವಿ ಆವರಣದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಮೆರವಣಿಗೆ ನಡೆಯಿತು. ಸಮಾರಂಭದಲ್ಲಿ ಇತಿಹಾಸೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು ಹಾಗೂ ಹಳೆಯ ನಾಣ್ಯಗಳ ಪ್ರದರ್ಶನವನ್ನು ಆಯೋಜಿಸಿದ್ದರು.ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಎಲ್.ಪಿ. ರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು ಮತ್ತು ಪ್ರೊ. ಎಂ. ಕೊಟ್ರೇಶ್ ಸ್ವಾಗತಿಸಿದರು. ಡಾ. ಚಿಕ್ಕಣ್ಣ, ಡಾ. ಪ್ರಿಯಾ ಠಾಕೂರ್, ಡಾ. ಶ್ರೀನಿವಾಸ್ ಅನೇಕ ಹಳೆಯ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುವಾದಿ ರಾಷ್ಟ್ರ ನಿರ್ಮಾಣಕ್ಕೆ ಯತ್ನ: ಸನತ್‌ಕುಮಾರ ಬೆಳಗಲಿ
ಟೌನ್‌ಶಿಪ್‌ ಹೆಸರಲ್ಲಿ ಜಮೀನು ಕಬಳಿಕೆ: ಎಚ್‌ಡಿಡಿ