ಕನ್ನಡಪ್ರಭ ವಾರ್ತೆ ಬೆಂಗಳೂರು
ಬಳ್ಳಾರಿ ತಾಲೂಕಿನ ದಾಸರ ನಾಗೇನಹಳ್ಳಿಯಲ್ಲಿ ಸಿಡಿಲು ಬಡಿದು ಗಾದಿಲಿಂಗಪ್ಪ (32) ಮೃತಪಟ್ಟಿದ್ದಾರೆ. ತಮ್ಮ ತೋಟದಲ್ಲಿ ಹಣ್ಣು ಕೀಳುವಾಗ ಸಿಡಿಲು ಬಡಿದಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ಸಿಡಿಲಿಗೆ ವಿನೋದಾ (38) ಮೃತಪಟ್ಟಿದ್ದಾರೆ. ಶನಿವಾರ ಸಂಜೆ ಮಳೆ ಬೀಳುತ್ತಿದ್ದ ವೇಳೆ ಜಮೀನಿನಲ್ಲಿ ಕಟ್ಟಿ ಹಾಕಿದ ಎರಡು ಹಸುಗಳನ್ನು ಮನೆಗೆ ಕರೆ ತರುತ್ತಿದ್ದಾಗ ಸಿಡಿಲು ಬಡಿಯಿತು. ಈ ವೇಳೆ, ಅವರ ಮನೆಯ ಎರಡು ಹಸುಗಳೂ ಸಿಡಿಲಿಗೆ ಬಲಿಯಾಗಿವೆ.
ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆಯೂ ಮಳೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ತಾಲೂಕಿನ ಮೆಲಂದಗುಡ್ಡೆಯಲ್ಲಿ ಸಿಡಿಲಿಗೆ ಜಯಂತ್ ಮತ್ತು ಕವಿತಾ ಗಾಯಗೊಂಡಿದ್ದಾರೆ. ಇದೇ ವೇಳೆ, ಮಂಗಳೂರಲ್ಲಿ ಸಂಜೆಯ ವೇಳೆ ಬಿದ್ದ ಮಳೆಯಿಂದ ಕೆಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.ಶೃಂಗೇರಿ ಸೇರಿ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ಹಲವೆಡೆ ಅಡಕೆ, ಬಾಳೆ ತೋಟಗಳಲ್ಲಿ ಮರಗಳು ಉರುಳಿ ಬಿದ್ದಿವೆ. ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗೆ ಮರಗಳು ಬಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಲವೆಡೆ ಮಳೆಗೆ ಬಾಳೆ ಹಾಗೂ ತೆಂಗಿನ ಮರಗಳು ನೆಲಕ್ಕುರುಳಿವೆ.
ಈ ಮಧ್ಯೆ, ಬಂಗಾಳಕೊಲ್ಲಿಯಲ್ಲಿ ಒತ್ತಡ ಪ್ರಮಾಣ ಶಿಥಿಲವಾಗುತ್ತಿದ್ದಂತೆ ಮುಂಗಾರು ಅಂಡಮಾನ್ ದ್ವೀಪದಲ್ಲಿ ಕಾಣಿಸಲಿದ್ದು, ಮೇ 26ರಂದು ಮುಂಗಾರು ಕೇರಳ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.