ಚನ್ನಗಿರಿ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಠಿ: ಲೋಹಿತ್ ಆರೋಪ

KannadaprabhaNewsNetwork |  
Published : Oct 31, 2026, 01:45 AM IST
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತೀರುವ ಜಿಲ್ಲಾ ಎಸ್.ಟಿ.ಮೋರ್ಚಾದ ಅಧ್ಯಕ್ಷ ಮಂಗೇನಹಳ್ಳಿ ಪಿ.ಲೋಹಿತ್ | Kannada Prabha

ಸಾರಾಂಶ

ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ, ಇಸ್ಪೀಟ್, ಗಾಂಜಾ, ಓ.ಸಿ., ಅಂದರ್‌ ಬಾಹರ್‌ನಂಥ ಜೂಜಾಟಗಳ ಹಾವಳಿಯಿಂದ ತಾಲೂಕಿನ ಯುವಜನತೆ ಹಾಳಾಗುತ್ತಿದೆ. ಈ ಪಿಡುಗುಗಳಿಗೆ ಕಡಿವಾಣ ಹಾಕದ ಖಂಡಿಸಿ ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಬಗ್ಗೆ ಮಾಧ್ಯಮದವರು ಕ್ಷೇತ್ರದ ಶಾಸಕ ಬಸವರಾಜ್ ಅವರನ್ನು ಪ್ರಶ್ನಿಸಿದರೆ, ಮಲ್ಲಿಕಾರ್ಜುನ್ ಮಾಡಾಳು ಯಾರು ಎಂದು ಪ್ರಶ್ನಿಸಿದ್ದಾರೆ. ಇಂಥ ಹೇಳಿಕೆ ನೀಡಿರುವ ಬಸವರಾಜ್‌ ಕ್ಷೇತ್ರದ ಶಾಸಕರಾಗಲು ಯೋಗ್ಯರಲ್ಲ ಎಂದು ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಅಧ್ಯಕ್ಷ ಮಂಗೇನಹಳ್ಳಿ ಪಿ.ಲೋಹಿತ್ ಹೇಳಿದ್ದಾರೆ.

- ಎಸ್‌ಪಿ, ಡಿಸಿ, ಐಜಿ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದು ಹೋರಾಟ ಹೇಳಿಕೆ ಹಾಸ್ಯಾಸ್ಪದ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ, ಇಸ್ಪೀಟ್, ಗಾಂಜಾ, ಓ.ಸಿ., ಅಂದರ್‌ ಬಾಹರ್‌ನಂಥ ಜೂಜಾಟಗಳ ಹಾವಳಿಯಿಂದ ತಾಲೂಕಿನ ಯುವಜನತೆ ಹಾಳಾಗುತ್ತಿದೆ. ಈ ಪಿಡುಗುಗಳಿಗೆ ಕಡಿವಾಣ ಹಾಕದ ಖಂಡಿಸಿ ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಬಗ್ಗೆ ಮಾಧ್ಯಮದವರು ಕ್ಷೇತ್ರದ ಶಾಸಕ ಬಸವರಾಜ್ ಅವರನ್ನು ಪ್ರಶ್ನಿಸಿದರೆ, ಮಲ್ಲಿಕಾರ್ಜುನ್ ಮಾಡಾಳು ಯಾರು ಎಂದು ಪ್ರಶ್ನಿಸಿದ್ದಾರೆ. ಇಂಥ ಹೇಳಿಕೆ ನೀಡಿರುವ ಬಸವರಾಜ್‌ ಕ್ಷೇತ್ರದ ಶಾಸಕರಾಗಲು ಯೋಗ್ಯರಲ್ಲ ಎಂದು ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಅಧ್ಯಕ್ಷ ಮಂಗೇನಹಳ್ಳಿ ಪಿ.ಲೋಹಿತ್ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಸಮೀಕ್ಷೆ ನಡೆಸಿದಾಗ ಬಿಜೆಪಿ ಗೆಲ್ಲುವ ಕ್ಷೇತ್ರಗಳಲ್ಲಿ ಚನ್ನಗಿರಿ ಕ್ಷೇತ್ರವೂ ಒಂದಾಗಿತ್ತು. ಮಾಡಾಳು ಮಲ್ಲಿಕಾರ್ಜುನ್ ಜನಪ್ರಿಯತೆ ಸಹಿಸದ ಕೆಲವರು ಪಿತೂರಿ ಮಾಡಿದ್ದರಿಂದ ಬಿಜೆಪಿ ಟಿಕೆಟ್ ವಂಚಿತರಾಗಿದ್ದರು. ಕಾರ್ಯಕರ್ತರ ಒತ್ತಡದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿಯೂ 62 ಸಾವಿರ ಮತಗಳನ್ನು ಪಡೆದಿದ್ದ ಮಾಡಾಳು ಮಲ್ಲಿಕಾರ್ಜುನ್ ಯಾರೆಂದು ಶಾಸಕರು ಪ್ರಶ್ನೆ ಮಾಡುತ್ತಿರುವುದು ಸರಿಯೇ ಎಂದರು.

ಕ್ಷೇತ್ರದಲ್ಲಿ ಯುವಜನತೆ ಜೂಜುಗಳಿಗೆ ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮೂರುವರೆ ವರ್ಷದಿಂದ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಠಿಯಾಗಿದೆ. ಜೂಜುಗಳಿಗೆ ಬಲಿಯಾಗಿ ಹಲವು ಯುವಕರು ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕ್ಷೇತ್ರದ ಶಾಸಕರೇ ನೇರಹೊಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2008ರಲ್ಲಿ ಇದೇ ಮಾಡಾಳು ಮಲ್ಲಿಕಾರ್ಜುನ್ ನಿಮ್ಮನ್ನು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ಮಾಡಿದವರಾಗಿದ್ದಾರೆ. ಅವರ ರಾಜಕೀಯ ಗರಡಿಯಲ್ಲಿ ಬೆಳೆದ ನೀವು ಈಗ ಅವರು ಯಾರೆಂದು ಗೊತ್ತಿಲ್ಲ ಎನ್ನೋದು ಸರಿಯಲ್ಲ. ಮಾಡಾಳು ಮಲ್ಲಿಕಾರ್ಜುನ್ ಹೋರಾಟಕ್ಕೆ ಹೆದರಿ ಈಗ ಎಸ್‌ಪಿ, ಡಿಸಿ, ಐಜಿ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದು ಹೋರಾಟ ಮಾಡುತ್ತೇನೆ ಎಂದು ಹೇಳುತ್ತಿದ್ದೀರಿ. ಇದು ಹಾಸ್ಯಾಸ್ಪದ. ಆಡಳಿತ ಪಕ್ಷದ ಶಾಸಕರಾದ ನೀವು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಚನ್ನಗಿರಿ ಕ್ಷೇತ್ರವು ಎನ್.ಜಿ.ಹಾಲಪ್ಪ, ಜೆ.ಎಚ್.ಪಟೇಲ್, ವಡ್ನಾಳ್ ರಾಜಣ್ಣ, ಮಹಿಮಾ ಜೆ. ಪಟೇಲ್, ಮಾಡಾಳು ವಿರೂಪಾಕ್ಷಪ್ಪ ಅವರಂತಹ ಮಹಾನ್ ನಾಯಕರು ಆಳ್ವಿಕೆ ಮಾಡಿದ ಕ್ಷೇತ್ರವಾಗಿದೆ. ಅಂತಹ ಮಹಾನ್ ನಾಯಕರ ಹೆಸರಿಗೆ ಮಸಿ ಬಳಿಯುವಂತಹ ಕೆಲಸ ಈಗಿನ ಶಾಸಕರು ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಮಲಹಾಳ್ ಡಿ.ಸಿ. ಕುಮಾರಸ್ವಾಮಿ ಮಾತನಾಡಿ, ಸಂತೆಬೆನ್ನೂರು, ತಾವರೆಕೆರೆ, ನಲ್ಲೂರು, ಚನ್ನಗಿರಿ ಪಟ್ಟಣದಲ್ಲಿ ನಡೆಯುತ್ತಿರುವ ಎಲ್ಲ ಕ್ಲಬ್‌ಗಳನ್ನು ನಡೆಸುತ್ತಿರುವುದು ಶಾಸಕರ ಬೆಂಬಲಿಗರೇ ಆಗಿದ್ದಾರೆ. ಮಾಡಾಳು ಮಲ್ಲಿಕಾರ್ಜುನ್ ಅವರ ಪ್ರತಿಭಟನೆಯಿಂದ ಮಾಧ್ಯಮದವರು ಪ್ರಶ್ನೆ ಕೇಳಿದರೆ ಏನು ಗೊತ್ತಿಲ್ಲದ ರೀತಿಯಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಹೇಳುವ ಶಾಸಕರು ತಾಲೂಕಿನಲ್ಲಿ ಅರಾಜಕತೆಯನ್ನು ಸೃಷ್ಠಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಮುಖಂಡರಾದ ಶಶಿಕಲಾ ನಾಗರಾಜ್, ಹೇಮಂತ್, ಕುಬೇಂದ್ರೋಜಿ ರಾವ್, ತರಕಾರಿ ಮಂಜು, ಚನ್ನಬಸಪ್ಪ, ಪಟ್ಲಿ ನಾಗರಾಜ್, ಸಂತೆಬೆನ್ನೂರು ಬಸವರಾಜ್, ಪಿ.ಬಿ.ನಾಯಕ, ಸುಣಿಗೆರೆ ಕುಮಾರ್, ದಿಗ್ಗೇನಹಳ್ಳಿ ನಾಗರಾಜ್, ಹರೋನಹಳ್ಳಿ ಮಲ್ಲಿಕಾರ್ಜುನ್, ಬುಳ್ಳಿ ನಾಗರಾಜ್ ಹಾಜರಿದ್ದರು.

- - -

-29ಕೆಸಿಎನ್‌ಜಿ1: ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಮಂಗೇನಹಳ್ಳಿ ಪಿ.ಲೋಹಿತ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ