ವಿದ್ಯಾರ್ಥಿಗಳಿಗೆ ಸೃಜನಶೀಲ ಕಲಿಕೆ ಮುಖ್ಯ: ಪತ್ರಕರ್ತ ಗಂಗಾಧರ ಕೊಳಗಿ

KannadaprabhaNewsNetwork |  
Published : Jun 12, 2025, 02:27 AM IST
ಫೋಟೊಪೈಲ್- ೧೦ಎಸ್ಡಿಪಿ೨- ಸಿದ್ದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿರುವ ರಂಗಶಿಬಿರವನ್ನು ಗಂಗಾಧರ ಕೊಳಗಿ ಉದ್ಘಾಟಿಸಿ, ಮಾತನಾಡಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಪಠ್ಯದಷ್ಟೇ ಸೃಜನಶೀಲವಾದ ಕಲಿಕೆಯೂ ಮುಖ್ಯ.

ಸಿದ್ದಾಪುರ: ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಪಠ್ಯದಷ್ಟೇ ಸೃಜನಶೀಲವಾದ ಕಲಿಕೆಯೂ ಮುಖ್ಯ. ಅದನ್ನು ಸಾಹಿತ್ಯ, ನೃತ್ಯ, ಸಂಗೀತ ಸೇರಿದಂತೆ ಎಲ್ಲ ಕಲೆಗಳನ್ನು ಒಳಗೊಂಡ ನಾಟಕ ರಂಗಭೂಮಿ ಒದಗಿಸಿಕೊಡುತ್ತದೆ ಎಂದು ಪತ್ರಕರ್ತ ಗಂಗಾಧರ ಕೊಳಗಿ ಹೇಳಿದರು.

ಅವರು ಸ್ಥಳೀಯ ರಂಗಸೌಗಂಧ ರಂಗತಂಡ ಪಟ್ಟಣದ ಹಾಳತಕಟ್ಟಾದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ರಂಗ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಪಠ್ಯೇತರವಾದ ಇಂಥ ಅನುಭವಗಳು ಶೈಕ್ಷಣಿಕವಾದ ಪ್ರಯೋಜನದ ಜೊತೆಗೆ ಮುಂದಿನ ಜೀವನದಲ್ಲಿ ನೆರವಾಗುತ್ತದೆ. ಭಾರತೀಯ ಎಲ್ಲ ಕಲಾಪ್ರಕಾರಗಳೂ ಅದ್ವಿತೀಯವಾದವುಗಳೇ. ಸಾಹಿತ್ಯ ಬರಹಗಾರ ಮತ್ತು ಓದುಗನ ನಡುವೆ ನಡೆಯುವ ಸಂವಾದವಾದರೆ, ರಂಗಕರ್ಮಿಗಳು ಮತ್ತು ಪ್ರೇಕ್ಷಕರ ನಡುವಿನ ಸಂವಾದ ರಂಗಭೂಮಿಯಲ್ಲಿ ಜರುಗುತ್ತದೆ. ಸಮುದಾಯದ ಜೊತೆಗಿನ ಸಂಪರ್ಕ, ಮತ್ತೊಂದು ಪಾತ್ರವಾಗುವ ಪರಿ ಇವೆಲ್ಲ ಹೊಸ ಅನುಭವ ಒದಗಿಸುತ್ತದೆ. ವಿದ್ಯಾರ್ಥಿಗಳ ಯೋಚನಾಶಕ್ತಿ ಹೆಚ್ಚಿಸುವ, ಚೈತನ್ಯ ಮೂಡಿಸುವ ರಂಗ ಶಿಬಿರ ಆಯೋಜಿಸಿದ್ದು ಮಾದರಿಯಾದದ್ದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಿ.ಎಸ್. ಹೆಗಡೆ ಮಾತನಾಡಿ, ನಮ್ಮ ಕಾಲೇಜಿನಲ್ಲಿ ರಂಗ ಶಿಬಿರ ನಡೆಯುತ್ತಿರುವದು ಸಂತಸದ ಸಂಗತಿ. ಶೈಕ್ಷಣಿಕ ಚಟುವಟಿಕೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಈ ಶಿಬಿರ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಮಾನಸಿಕ ವಿಕಸನಕ್ಕೆ ಇಂಥ ಶಿಬಿರಗಳು ಸಹಕಾರಿಯಾಗುತ್ತವೆ ಎನ್ನುವ ದೃಷ್ಟಿಯಿಂದ ಶಿಬಿರವನ್ನು ನಡೆಸಲಾಗುತ್ತಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ರಂಗಸೌಗಂಧದ ಮುಖ್ಯಸ್ಥ, ರಂಗನಿರ್ದೇಶಕ ಗಣಪತಿ ಹೆಗಡೆ ಹುಲಿಮನೆ ಪ್ರಾಸ್ತಾವಿಕ ಮಾತನಾಡಿ, ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಂಗಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಬಾರಿ ಕಾಲೇಜು ವಿದ್ಯಾರ್ಥಿಗಳ ರಂಗ ಶಿಬಿರ ಆಯೋಜಿಸುತ್ತಿದ್ದೇವೆ. ಈ ಶಿಬಿರದಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದ ಕಥಾವಸ್ತುವುಳ್ಳ ನಾಟಕದ ತರಬೇತಿಯ ಜೊತೆಗೆ ರಂಗ ಕಲೆಗೆ ಸಂಬಂಧಿಸಿದ ಮುಖ್ಯವಾದ ಅಂಶಗಳನ್ನು ಶಿಬಿರಾರ್ಥಿಗಳಿಗೆ ಕಲಿಸಲಾಗುವುದು. ವಿದ್ಯಾರ್ಥಿಗಳ ನಿತ್ಯದ ಶಿಕ್ಷಣಕ್ಕೆ ತೊಂದರೆಯಾಗದ ರೀತಿಯಲ್ಲಿ ಈ ಶಿಬಿರ ನಡೆಯುತ್ತದೆ ಎಂದರು.

ಬರಹಗಾರ, ಉಪನ್ಯಾಸಕ ಪ್ರೊ.ರತ್ನಾಕರ ನಾಯ್ಕ ಸ್ವಾಗತಿಸಿ ರಂಗಭೂಮಿಯ ಕುರಿತಾದ ಹಲವು ವಿಷಯಗಳ ಕುರಿತು ಮಾತನಾಡಿದರು. ಉಪನ್ಯಾಸಕ ರಾಮಕೃಷ್ಣ ಸವಾಯಿ ವಂದಿಸಿದರು. ೨೦ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೊದಲ ದಿನದ ರಂಗಶಿಬಿರದಲ್ಲಿ ಪಾಲ್ಗೊಂಡಿದ್ದರು.

ಸಿದ್ದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿರುವ ರಂಗಶಿಬಿರವನ್ನು ಗಂಗಾಧರ ಕೊಳಗಿ ಉದ್ಘಾಟಿಸಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ