ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ಪರವಾಗಿ ಮತ್ತು ವಿರೋಧಿಸಿ ರೈತರು ನಡೆಸುತ್ತಿರುವ ಚಳವಳಿ ತಾರಕಕ್ಕೇರಿದೆ. ಮತ್ತೊಂದೆಡೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ.
ಭೂ ಸ್ವಾಧೀನ ವಿರುದ್ಧ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಮಿತಿ ರಚಿಸಿಕೊಂಡು ಹೋರಾಟ ಆರಂಭಿಸಿದರು. ಬೈರಮಂಗಲ ವೃತ್ತವನ್ನೇ ಚಳವಳಿಯ ಕೇಂದ್ರ ಸ್ಥಳವನ್ನಾಗಿ ಮಾಡಿಕೊಂಡಿತು. ರೈತರ ಹೋರಾಟಕ್ಕೆ ಅನೇಕ ರೈತ, ದಲಿತ ಮತ್ತು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿ ಶಕ್ತಿ ತುಂಬಿದವು. ಜೆಡಿಎಸ್ ಹೋರಾಟವನ್ನು ಬೆಂಬಲಿಸಿದ್ದು ಮಾತ್ರವಲ್ಲದೆ ಸಂಪೂರ್ಣವಾಗಿ ಭಾಗವಹಿಸಿತು. ಅದಾದ ಬಳಿಕ ಬಿಜೆಪಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿತು..
ಇದೀಗ ಟೌನ್ ಶಿಪ್ ಯೋಜನೆ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಹೋರಾಟ ತೀವ್ರಗೊಳಿಸಿವೆ. ಆದರೆ, ಉಭಯ ಪಕ್ಷಗಳ ನಾಯಕರು ಒಗ್ಗಟ್ಟು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿಯೇ ಟೌನ್ ಶಿಪ್ ವಿರುದ್ಧದ ಹೋರಾಟ ಕವಲು ದಾರಿಯಲ್ಲಿ ಸಾಗಿದೆ.ದಳ - ಕಮಲದಲ್ಲಿ ಮೂಡದ ಮೈತ್ರಿ:
ಈ ಟೌನ್‌ಶಿಪ್ ಯೋಜನೆ ವಿರೋಧಿಸಿ ಕಳೆದ 495 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಚಳವಳಿಯ ವೇದಿಕೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಟ್ಟಾಗಿ ಕಾಣಿಸಿಕೊಂಡಿಲ್ಲ. ಯೋಜನೆ ವಿರುದ್ಧದ ಸುದ್ದಿಗೋಷ್ಠಿಗಳಾಗಲಿ ಅಥವಾ ಯೋಜನಾ ವ್ಯಾಪ್ತಿಯ ಗ್ರಾಮಗಳಿಗೆ ಭೀಟಿ ನೀಡುವ ವಿಚಾರದಲ್ಲಿಯೂ ಎರಡೂ ಪಕ್ಷದ ನಾಯಕರು ಒಗ್ಗಟ್ಟು ಪ್ರದರ್ಶಿಸುತ್ತಿಲ್ಲ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ನೇತೃತ್ವದ ಬಿಜೆಪಿ ನಿಯೋಗ ಗ್ರಾಮಗಳಿಗೆ ಬಂದಾಗ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಕಾಣಿಸಿಕೊಳ್ಳಲಿಲ್ಲ.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬಿಜೆಪಿ ನಡೆಸಿದ ಹೋರಾಟದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರರವರು ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಆದರೀಗ ಜೆಡಿಎಸ್ ನಾಯಕರು ತರಾತುರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಬಿಜೆಪಿಗೂ ಮೊದಲೇ ಪಾದಯಾತ್ರೆ ದಿನಾಂಕ ಘೋಷಣೆ ಮಾಡಿದೆ.
ಉಭಯ ಪಕ್ಷಗಳು ಸೇರಿ ಹೋರಾಟ ನಡೆಸುವ ಕುರಿತು ಎರಡೂ ಪಕ್ಷಗಳ ನಾಯಕರ ಮಟ್ಟದಲ್ಲಿ ತೀರ್ಮಾನವಾಗಬೇಕು ಎನ್ನುತ್ತಾರೆ ಸ್ಥಳೀಯ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು.
ಬಿಡದಿ ಟೌನ್ ಶಿಪ್ ಯೋಜನೆಗಾಗಿ ಬಿಡದಿ ಹೋಬಳಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಕಂದಾಯ ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ 15 ತಿಂಗಳ ಹಿಂದೆಯೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಜೂನ್ 10ರಂದು 3 ಗ್ರಾಮ ಹಾಗೂ ಜುಲೈ 15ರಂದು 4 ಕಂದಾಯ ಗ್ರಾಮಗಳ ಭೂ ಸ್ವಾಧೀನಕ್ಕಾಗಿ ಫೈನಲ್ ನೋಟಿಫಿಕೇಷನ್ ಹೊರ ಬಿದ್ದಿದೆ. ಮೊದಲ ಹಂತದಲ್ಲಿನ 518 ಎಕರೆ 45 ಗುಂಟೆ ಮತ್ತು ಎರಡನೇ ಹಂತದಲ್ಲಿನ 4941 ಎಕರೆ 59 ಗುಂಟೆ ಸೇರಿ ಒಟ್ಟು 5460 ಎಕರೆ 4 ಗುಂಟೆ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದಂತಾಗಿದೆ. ಇನ್ನು 2 ಕಂದಾಯ ಗ್ರಾಮಗಳ ಭೂ ಸ್ವಾಧೀನದ ಅಂತಿಮ ಅಧಿಸೂಚನೆ ಮಾತ್ರ ಬಾಕಿ ಉಳಿದಿದೆ.
8.ಬಿಜೆಪಿ ಚಿಹ್ನೆ
9.ಜೆಡಿಎಸ್ ಚಿಹ್ನೆ