ಲಕ್ಷ್ಮೇಶ್ವರದಲ್ಲಿ ಪತ್ರಕರ್ತರಿಂದ ಸ್ಮಶಾನ ಸ್ವಚ್ಛತಾ ಸೇವೆ

KannadaprabhaNewsNetwork |  
Published : Jul 27, 2026, 03:00 AM IST
ಪತ್ರಿಕಾ ದಿನಾಚರಣೆ ಅಂಗವಾಗಿ ಲಕ್ಷ್ಮೇಶ್ವರದಲ್ಲಿ ಸ್ಮಶಾನ ಭೂಮಿಯನ್ನು ಸ್ವಚ್ಛಗೊಳಿಸಲಾಯಿತು. | Kannada Prabha

ಸಾರಾಂಶ

ಚಂದ್ರು ಮಾಗಡಿ ಮಾತನಾಡಿ, ಶಾಲೆಗೆ ಹೊಂದಿಕೊಂಡಿದ್ದ ಸ್ಮಶಾನ ಭೂಮಿಯಲ್ಲಿ ಆಳೆತ್ತರ ಗಿಡಗಂಟೆ, ತ್ಯಾಜ್ಯ ತುಂಬಿಕೊಂಡಿದ್ದರಿಂದ ಶಾಲೆಯ ಮಕ್ಕಳು ತೊಂದರೆ ಅನುಭವಿಸುವಂತಾಗಿತ್ತು. ಪತ್ರಕರ್ತರ ಸೇವಾ ಕಾರ್ಯದಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.

ಲಕ್ಷ್ಮೇಶ್ವರ: ಸಮಾಜದ ಸಮಸ್ಯೆಗಳನ್ನು ಕೇವಲ ಸುದ್ದಿಯಾಗಿಸುವುದಷ್ಟೇ ಅಲ್ಲ, ಅವುಗಳ ಪರಿಹಾರಕ್ಕೂ ಕೈಜೋಡಿಸಬೇಕು ಎಂಬ ಸಂದೇಶ ಸಾರುವ ಅಪರೂಪದ ಸಮಾಜಮುಖಿ ಕಾರ್ಯಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಸಾಕ್ಷಿಯಾಯಿತು.

ಪತ್ರಿಕಾ ದಿನಾಚರಣೆಯ ಅಂಗವಾಗಿ ಸಂಘದ ಸದಸ್ಯರು ಪಟ್ಟಣದ ಸರ್ಕಾರಿ ಪ್ರೌಢಶಾಲೆ ಹೊಂದಿಕೊಂಡಿರುವ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದ್ದ ಸ್ಮಶಾನ ಭೂಮಿ ಸ್ವಚ್ಛಗೊಳಿಸುವ ಮೂಲಕ ಮಾದರಿ ಸೇವೆ ಸಲ್ಲಿಸಿದರು.

ಈ ಸೇವಾ ಕಾರ್ಯದಲ್ಲಿ ಮಾತನಾಡಿದ ಹಿರಿಯರಾದ ಚಂಬಣ್ಣ ಬಾಳಿಕಾಯಿ ಅವರು, ವರ್ಷಗಳಿಂದ ನಿರ್ವಹಣೆಯ ಕೊರತೆಯಿಂದ ಸ್ಮಶಾನ ಭೂಮಿಯಲ್ಲಿ ಆಳೆತ್ತರದ ಜಾಲಿ, ಮುಳ್ಳು ಕಂಟಿಗಳು, ಕಸ ಕಡ್ಡಿಗಳು ಬೆಳೆದು, ಎಲ್ಲೆಂದರಲ್ಲಿ ತ್ಯಾಜ್ಯ ತುಂಬಿಕೊಂಡಿತ್ತು. ಅಂತ್ಯಸಂಸ್ಕಾರಕ್ಕಾಗಿ ಬರುವ ಕುಟುಂಬಸ್ಥರು ಕೂಡ ಒಳಗೆ ಪ್ರವೇಶಿಸಲು ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿತ್ತು. ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು, ಸ್ಮಶಾನದ ಪಾವಿತ್ರ‍್ಯವೇ ಮಂಕಾಗುವಂತಾಗಿತ್ತು.

ಈ ಸಮಸ್ಯೆ ಕುರಿತು ಸ್ಥಳೀಯ ನಿವಾಸಿಗಳು, ಜನಪ್ರತಿನಿಧಿಗಳು ಹಾಗೂ ಪುರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ, ಸಮಸ್ಯೆಯನ್ನು ಎತ್ತಿ ತೋರಿಸುವುದಕ್ಕಿಂತ ಪರಿಹಾರದಲ್ಲಿ ಪಾಲುದಾರರಾಗೋಣ ಎಂಬ ಧ್ಯೇಯದೊಂದಿಗೆ ಪತ್ರಕರ್ತರು ಸ್ವತಃ ಜನರ ಸಹಕಾರ ಪಡೆದು ಜೆಸಿಬಿ ಯಂತ್ರಗಳ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು. ಗಿಡಗಂಟಿಗಳನ್ನು ತೆರವುಗೊಳಿಸಿ, ತ್ಯಾಜ್ಯವನ್ನು ವಿಲೇವಾರಿ ಮಾಡಿ, ಸ್ಮಶಾನ ಭೂಮಿಯನ್ನು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಈ ವೇಳೆ ಚಂದ್ರು ಮಾಗಡಿ ಮಾತನಾಡಿ, ಶಾಲೆಗೆ ಹೊಂದಿಕೊಂಡಿದ್ದ ಸ್ವಶಾನ ಭೂಮಿಯಲ್ಲಿ ಆಳೆತ್ತರ ಗಿಡಗಂಟೆ, ತ್ಯಾಜ್ಯ ತುಂಬಿಕೊಂಡಿದ್ದರಿಂದ ಶಾಲೆಯ ಮಕ್ಕಳು ತೊಂದರೆ ಅನುಭವಿಸುವಂತಾಗಿತ್ತು. ಪತ್ರಕರ್ತರ ಸೇವಾ ಕಾರ್ಯದಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನಕೂಲವಾಗಿದೆ. ಕಳೆದ ವರ್ಷವೂ ಪತ್ರಿಕಾ ದಿನಾಚರಣೆಯ ಅಂಗವಾಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ೩೦ಕ್ಕೂ ಹೆಚ್ಚು ಜನರಿಂದ ರಕ್ತದಾನ ಮಾಡಿಸಿ ಜೀವದಾನಕ್ಕೆ ಕಾರಣವಾಗಿತ್ತು. ಈ ವರ್ಷ ಸ್ವಚ್ಛತಾ ಸೇವೆಯ ಮೂಲಕ ಸಾರ್ವಜನಿಕ ಆಸ್ತಿಯ ಸಂರಕ್ಷಣೆಗೆ ಒತ್ತು ನೀಡಿರುವುದು ಸಂಘದ ನಿರಂತರ ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿದೆ ಎಂದರು.

ಈ ಸೇವಾ ಕಾರ್ಯದ ವೇಳೆ ನಾಗಪ್ಪ ಮಂಜುನಾಥ ಮಾಗಡಿ, ಮುದಕಣ್ಣ ಬೂದಿಹಾಳ, ಶಂಕರ ಬ್ಯಾಡಗಿ, ನಾಗಪ್ಪ ಓಂಕಾರಿ, ಹೊನ್ನಪ್ಪ ವಡ್ಡರ, ವೆಂಕರಡ್ಡಿ ಪಾಟೀಲ, ಪುರಸಭೆಯ ಪರಶುರಾಮ ಪಶುಪತಿಹಾಳ ಸೇರಿ ಓಣಿಯ ನಾಗರಿಕರು, ಪೌರಕಾರ್ಮಿಕರು ಇದ್ದರು. ಪತ್ರಕರ್ತರ ಈ ಸೇವಾ ಕಾರ್ಯವನ್ನು ಸಾರ್ವಜನಿಕರು, ವಿವಿಧ ಸಂಘ- ಸಂಸ್ಥೆಗಳ ಮುಖಂಡರು ಹಾಗೂ ಹಿರಿಯ ನಾಗರಿಕರು ಮುಕ್ತಕಂಠದಿಂದ ಶ್ಲಾಘಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆದ್ದಾರಿ ಸುವ್ಯವಸ್ಥಿತ ರಿಕ್ಷಾ ಪಾರ್ಕಿಂಗ್‌ ವ್ಯವಸ್ಥೆ: ಶಾಸಕ ಪೂಂಜ
ಜನವರಿಯಲ್ಲಿ ಆಳ್ವಾಸ್ ನುಡಿಸಿರಿ-ವಿರಾಸತ್