ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕಳೆದ ವರ್ಷ ಭಾರಿ ಬೇಸಿಗೆಯ ಜತೆ ಜಿಲ್ಲೆಯಲ್ಲಿ ಹೆಚ್ಚಿನ ಕಾಡ್ಗಿಚ್ಚು ಉಂಟಾಗಿ ಹಲವಾರು ಹೆಕ್ಟೇರ್ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿತ್ತು. ಇದು ಅರಣ್ಯ ನಷ್ಟ, ಉಷ್ಣತೆ ಏರಿಕೆ ಹಾಗೂ ಇನ್ನಿತರ ಏರುಪೇರಿಗೆ ಕಾರಣವಾಗಿತ್ತು. ಇದರ ಹತೋಟಿ ಅರಣ್ಯ ಇಲಾಖೆ ಹಾಗೂ ಪರಿಸರ ಪ್ರೇಮಿಗಳಿಗೆ ಸವಾಲಾಗಿತ್ತು. ಉರಿ ಬಿಸಿಲಿನ ಜತೆ ಅಹರ್ನಿಶಿಯಾಗಿ ಕಾಡ್ಗಿಚ್ಚು ಹತೋಟಿಗೆ ಶ್ರಮವಹಿಸಿದ ಮಂದಿ ಸ್ಮರಣೀಯ ಏರು ಎಂದರೆ ತಪ್ಪಾಗಲಾರದು.
ಒಂದೆಡೆ ಬೆಂಕಿ ಆರುತ್ತಿದ್ದಂತೆ ಇನ್ನೊಂದೆಡೆ ಹಬ್ಬುವ ಬೆಂಕಿ ಸವಾಲೊಡ್ಡುತ್ತಿತ್ತು. ಹೆಚ್ಚಿನ ಬೆಂಕಿ ಪ್ರಕರಣಗಳು ಅರಣ್ಯದ ಮಧ್ಯಭಾಗಗಳಲ್ಲಿ ಉಂಟಾಗುತ್ತಿದ್ದ ಕಾರಣ ಇಲ್ಲಿಗೆ ಅಗತ್ಯ ವಾಹನಗಳು ಸಂಚರಿಸಲು ಅಸಾಧ್ಯವಾಗಿದ್ದು ಕಾಲ್ನಡಿಗೆ ಮೂಲಕವೇ ಹಲವಾರು ಕಿ.ಮೀ. ಕ್ರಮಿಸಿ ಜತೆಗೆ ನೀರು ಆಹಾರವನ್ನು ಹೊತ್ತು ಅಗತ್ಯ ಸಲಕರಣೆಗಳು ಇಲ್ಲದೆ ಬೆಂಕಿ ನಂದಿಸಲು ಪಟ್ಟ ಹರಸಾಹಸವನ್ನು ಮರೆಯುವಂತಿಲ್ಲ.ಬೆಂಕಿಯ ಕೆನ್ನಾಲಿಗೆ ಪಸರಿಸುತ್ತಿದ್ದಂತೆ ಅದನ್ನು ಹತೋಟಿಗೆ ತರುವ ಹೋರಾಟದ ಮಧ್ಯೆ ಸಿಬ್ಬಂದಿಗಳು ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೂ ತುತ್ತಾಗಿದ್ದರು. ಹಲವು ಸ್ಥಳೀಯ ಪರಿಸರ ಪ್ರೇಮಿಗಳು ಜತೆಯಾಗಿ ಅರಣ್ಯ ಇಲಾಖೆಯ ಕೆಲಸವನ್ನು ಕೊಂಚ ಹಗುರಗೊಳಿಸಲು ಯತ್ನಿಸಿದ್ದರು. ಹೀಗಿದ್ದು ಸಂಪೂರ್ಣ ಬೆಂಕಿ ಹತೋಟಿಗೆ ಬರಲು ಮಳೆಗಾಲ ಆರಂಭದ ತನಕವು ಕಾಯಬೇಕಾಯಿತು.
ಅಳಿವಿನಂಚಿನಲ್ಲಿರುವ ಅನೇಕ ಪ್ರಾಣಿ, ಸರೀಸೃಪಗಳ ವಾಸಸ್ಥಾನವಾಗಿರುವ ವನ್ಯಜೀವಿ ವಿಭಾಗ ನಮ್ಮ ಬಹುದೊಡ್ಡ ಸಂಪತ್ತು. ಬೆಂಕಿಯಿಂದ ಇದನ್ನು ರಕ್ಷಿಸುವ ಬಗ್ಗೆ ಮುಂಜಾಗ್ರತೆ ಅತಿ ಅಗತ್ಯ.ಆಗಬೇಕಾದ ಅಗತ್ಯ ಕ್ರಮಗಳು: ಬೆಂಕಿ ಹತೋಟಿಗೆ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಬೇಕು. ಕಾಡ್ಗಿಚ್ಚಿನ ಮುನ್ನೆಚ್ಚರಿಕೆ, ಹತೋಟಿಗಾಗಿ ತಾತ್ಕಾಲಿಕ ಸಿಬ್ಬಂದಿ ನೇಮಕವಾಗಬೇಕು. ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಇಲಾಖೆಗೆ ಸಿಬ್ಬಂದಿ ಬಲ ಒದಗಿಸಬೇಕು, ಹಿರಿಯ ಅಧಿಕಾರಿಗಳು ಅರಣ್ಯ ಪ್ರದೇಶಗಳನ್ನು ಸಂದರ್ಶಿಸಿ ಅಲ್ಲಿನ ಪರಿಸರ ಅಧ್ಯಯನ ಮಾಡಬೇಕು. ಇಲಾಖೆಗೆ ಅಗತ್ಯ ವಾಹನಗಳನ್ನು ಒದಗಿಸಬೇಕು. ಶಿಕಾರಿ, ರಸ್ತೆಬದಿ ಅಡುಗೆ ಮಾಡುವುದು ಇತ್ಯಾದಿಗಳಿಗೆ ಕಠಿಣ ನಿರ್ಬಂಧ ಹೇರಬೇಕು. ಸಾರ್ವಜನಿಕರು, ಪ್ರವಾಸಿಗರು ಬೆಂಕಿಯ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಅಗ್ನಿಶಾಮಕ ದಳ, ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರನ್ನು ಸೇರಿಸಿಕೊಂಡು ಕಾಡ್ಗಿಚ್ಚು ಕುರಿತು ಮಾಹಿತಿ ಕಾರ್ಯಾಗಾರವನ್ನು ಶೀಘ್ರವೇ ನಡೆಸಲಾಗುವುದು. ಕಾಡ್ಗಿಚ್ಚು ಉಂಟಾಗದಂತೆ ಅಗತ್ಯ ಕ್ರಮಗಳನ್ನು ಇಲಾಖೆ ವತಿಯಿಂದ ಕೈಗೊಳ್ಳಲಾಗುವುದು. ಅಲ್ಲದೆ ಸುಧಾರಿತ ವ್ಯವಸ್ಥೆಗಳ ಮೂಲಕ ಬೆಂಕಿ ಉಂಟಾದ ಪ್ರದೇಶವನ್ನು ತಕ್ಷಣ ಪತ್ತೆ ಹಚ್ಚುವ ಬಗ್ಗೆ ಸ್ಯಾಟಲೈಟ್ ಮೂಲಕ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ,