ಕನ್ನಡಪ್ರಭ ವಾರ್ತೆ ಮಡಿಕೇರಿ
ಇಂದಿನ ಯುವಪೀಳೆಗೆ ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳಲ್ಲಿಯೂ ಆಸಕ್ತಿ ತಾಳಿ ಉತ್ತಮ ಕ್ರೀಡಾಪಟುಗಳಾಗುವತ್ತ ಚಿತ್ತ ಹರಿಸಬೇಕು ಎಂದು ನಿವೃತ್ತ ಏರ್ ಮಾರ್ಷಲ್ ಕೆ ಸಿ ಕಾರ್ಯಪ್ಪ ಕರೆ ನೀಡಿದ್ದಾರೆ.ನಗರದ ಕೊಡಗು ವಿದ್ಯಾಲಯ ವತಿಯಿಂದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ ಡಾ ಅಖಿಲ್ ಕುಟ್ಟಪ್ಪ - ಅಶ್ವಥ್ ಅಯ್ಯಪ್ಪ ಸ್ಮರಣಾರ್ಥ 10 ನೇ ವರ್ಷದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿನ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಕ್ಷೇತ್ರದಲ್ಲಿ ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಅವಕಾಶಗಳು ವಿಸ್ತಾರವಾಗಿದ್ದು ತಮ್ಮಲ್ಲಿನ ಕ್ರೀಡಾ ಪ್ರತಿಭೆಯನ್ನು ತೋರಲು ಯುವಪೀಳಿಗೆ ಬೆಟ್ಟದಷ್ಟು ಅವಕಾಶ ಇದೆ, ಕ್ರಿಕೆಟ್ ನಂತೆಯೇ ಇತರ ಕ್ರೀಡೆಗಳಲ್ಲಿಯೂ ಯುವಪೀಳಿಗೆ ಹೆಚ್ಚಿನ ಆಸಕ್ತಿ ತಾಳಿದರೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪ್ರತಿಭೆಗಳು ದೇಶಕ್ಕೆ ದೊರಕಲು ಸಾಧ್ಯವಿದೆ ಎಂದು ನಿವೃತ್ತ ಏರ್ ಮಾರ್ಷಲ್ ಕಾರ್ಯಪ್ಪ ಅಭಿಪ್ರಾಯಪಟ್ಟರು.ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ ಐ ಮುನೀರ್ ಅಹಮ್ಮದ್ ಮಾತನಾಡಿ, ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಬಗ್ಗೆ ನಿರ್ದಿಷ್ಟ ಗುರಿಯಿರಬೇಕು, ದೂರದ ಬೆಟ್ಟದಲ್ಲಿ ಕಾಣುವ ದೇವಾಲಯವನ್ನು ಹತ್ತಿ ದೇವರ ದರ್ಶನ ಪಡೆಯಬೇಕಾದರೆ ಮೊದಲು ಬೆಟ್ಟದ ತಳಮುಟ್ಟಬೇಕು, ನಂತರ ಹಂತಹಂತವಾಗಿ ಬೆಟ್ಟವನ್ನು ಏರುತ್ತಾ ಸಾಗಿದರೆ ದೇವಾಲಯ ಸಂಕೀಣ೯ದ ಮೂಲಕ ಪ್ರವೇಶ ಪಡೆದು ಗರ್ಭಗೃಹದಲ್ಲಿನ ದೇವರ ದಶ೯ನ ಪಡೆಯಲು ಸಾಧ್ಯ, ಇದೇ ರೀತಿ ಹಂತಹಂತವಾಗಿ ಜೀವನದಲ್ಲಿಯೂ ಸಾಧನೆಯ ಮೆಟ್ಟಿಲನ್ನು ಪರಿಶ್ರಮದಿಂದ ಹತ್ತುತ್ತಾ ಹೋದಾಗ ಖಂಡಿತವಾಗಿಯೂ ಉದ್ದೇಶಿತ ಗುರಿ ತಲುಪಿ ಸಾಧನೆ ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಪಂದ್ಯಾವಳಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಜೀವನೋತ್ಸಾಹ ತುಂಬುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದು ಮುನೀರ್ ಅಹಮ್ಮದ್ ಅಭಿಪ್ರಾಯಪಟ್ಟರು.
ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ತರಬೇತುದಾರ ಡಾ. ರೆನ್ ಟ್ರೇವರ್ ಮಾತನಾಡಿ, ಕ್ರಿಕೆಟ್ ಜತೆಗೇ ಪ್ರತೀ ಕ್ರೀಡೆಯನ್ನೂ ಕ್ರೀಡಾರ್ಥಿಗಳು ಧ್ಯಾನದಂತೆ ಪರಿಗಣಿಸಿ ಮನಸ್ಸನ್ನು ಕೇಂದ್ರೀಕರಿಸಿದಾಗ ಮಾತ್ರ ಸಾಧನೆಯ ಗುರಿ ಮುಟ್ಟಲು ಸಾಧ್ಯ ಎಂದರು. ಪ್ರತೀ ಪಂದ್ಯಾವಳಿಯ ಮುನ್ನ ಕೆಲ ನಿಮಿಷ ಧ್ಯಾನ ಮಾಡಿದಾಗ ಆ ಪಂದ್ಯಾವಳಿಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.ಶಿವಮೊಗ್ಗದಲ್ಲಿರುವ ಅಖಿಲ್ - ಅಶ್ವಥ್ ಮಾರ್ಗದರ್ಶಿಯಾಗಿದ್ದ ರಾಜಶೇಖರ್ ಮಾತನಾಡಿ, ಕ್ರಿಕೆಟ್ ಮಾತ್ರವಲ್ಲ, ಕೃತಿಕಾರನಾಗಿ, ಕೂಡ ಅಖಿಲ್ - ಅಶ್ವಥ್ ಸಾಧಕರಾಗಿ ಹೊರಹೊಮ್ಮುತ್ತಿದ್ದರು, ಯುವಪ್ರತಿಭೆಗಳ ಅಕಾಲಿಕ ಕಣ್ಮರೆ ತುಂಬಲಾರದ ನಷ್ಟವಾಗಿದೆ ಎಂದರು.
ಪಂದ್ಯಾವಳಿಯ ಆಯೋಜಕರಾದ ಕೋಡಿಮಣಿಯಂಡ ರಘು ಮಾದಪ್ಪ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ದಶಮಾನೋತ್ಸವ ಕಂಡಿರುವ ಈ ಪಂದ್ಯಾವಳಿಯನ್ನು ಭವಿಷ್ಯದಲ್ಲಿ ನಡೆಸಲು ಕಷ್ಟಸಾಧ್ಯವಾಗಲಿದೆ, ಮುಂದಿನ ಮಾರ್ಗ ಯಾವುದು ಎಂದು ಸಮಾನಮನಸ್ಕರು ಸೇರಿ ನಿರ್ಧರಿಸಲಿದ್ದೇವೆ ಎಂದು ಹೇಳಿದರು.ಕೊಡಗು ವಿದ್ಯಾಲಯ ಆಡಳಿತ ಮಂಡಳಿ ನಿರ್ದೇಶಕ ಸಿ ಎಸ್ ಗುರುದತ್ ಮಾತನಾಡಿ, ಕೊಡಗಿನ ಪಾಲಿಗೆ ಯುವ ಸಾಧಕರಾಗಬಹುದಾಗಿದ್ದ ಅಖಿಲ್ ಮತ್ತು ಅಶ್ವಥ್ ಅವರನ್ನು ಅತ್ಯಂತ ಬೇಗ ಕಳೆದುಕೊಂಡ ನೋವು ಎಲ್ಲರ ಮನಸ್ಸಿನಲ್ಲಿದೆ ಎಂದು ವಿಷಾದಿಸಿದರಲ್ಲದೇ, ತನ್ನ ತಂದೆ ಕ್ರಿಕೆಟ್ ಗುರು ಸಿ ವಿ ಶಂಕರ್ ಮತ್ತು ಈ ಪಂದ್ಯಾವಳಿಯ ಆಯೋಜನೆಗೆ ಮುಖ್ಯ ಕಾರಣಕರ್ತರಾದ ರಘುಮಾದಪ್ಪ ಅವರು ನಿಕಟ ಬಾಂಧವ್ಯ ಹೊಂದಿದ್ದು ಇವರೀರ್ವರೂ ಕೊಡಗಿನಲ್ಲಿ ಕ್ರೀಡಾ ಚಟವಟಿಕೆಗಳಿಗೆ ನೀಡಿದ ಪ್ರೋತ್ಸಾಹ ಮರೆಯುವಂಥದ್ದಲ್ಲ ಎಂದರು. ಅಕಾಲಿಕವಾಗಿ ಅಗಲಿದೆ ತಮ್ಮ ಮಕ್ಕಳ ನೆನಪಿನಲ್ಲಿ 10 ವರ್ಷಗಳಿಂದ ಈ ಪಂದ್ಯಾವಳಿಯನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸುತ್ತಾ ಬಂದಿರುವ ರಘುಮಾದಪ್ಪ ಮತ್ತು ಅನಿತಾ ದಂಪತಿ ಕೊಡಗಿನ ಯುವ ಕ್ರೀಡಾಪಟುಗಳನ್ನು ಮುಂದಿನ ವರ್ಷಗಳಲ್ಲಿಯೂ ಇದೇ ರೀತಿ ಪ್ರೋತ್ಸಾಹಿಸಲಿ ಎಂದು ಕೋರಿದರು.
ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ ಎಸ್ ಸುಮಿತ್ರಾ, ಆಡಳಿತಾತ್ಮಕ ವ್ಯವಸ್ಥಾಪಕ ರವಿ, ಪ್ರಮುಖರಾದ ಅನಿತಾ ರಘು ಮಾದಪ್ಪ, ಐ ಕೆ ಅನಿಲ್, ಭಾನು, ಕೋಡಿಮಣಿಯಂಡ ರಾಜನ್, ಕೊಂಗಂಡ ಸುರೇಶ್ , ತಮ್ಮು ಪೂವಯ್ಯ ಸೇರಿದಂತೆ ಅನೇಕರು ಹಾಜರಿದ್ದರು.ಕೊಡಗು ಯು - 16 ಬಾಲಕಿಯರು ಮತ್ತು ಮಂಗಳೂರು ತಂಡಗಳ ನಡುವೆ ಉದ್ಘಾಟನಾ ಪಂದ್ಯಾವಳಿ ನಡೆಯಿತು. ಐ ಪಿ ನಂದ, ಹರೀಶ್ ಯಾಲದಾಳು, ಇ ಎಲ್ ಸುರೇಶ್, ಬಿ ವಿ ನಂದ ಮತ್ತಿತರರು ಪಂದ್ಯಾವಳಿಯ ಆಯೋಜನೆಗೆ ಸಹಕರಿಸಿದ್ದರು.