ಗದಗ
ಗದಗನಿಂದ ನಿತ್ಯವೂ ಬೆಂಗಳೂರಿಗೆ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ವೋಲ್ವೋ ಬಸ್ ಸೌಲಭ್ಯ ಸ್ಥಗಿತಗೊಂಡು ಹಲವಾರು ತಿಂಗಳು ಕಳೆದಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು, ಈ ಕುರಿತು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಆದರೆ ಗದಗನಿಂದ ಬೆಂಗಳೂರಿಗೆ ವೋಲ್ವೋ ಬಸ್ ಸೌಲಭ್ಯವಿಲ್ಲ ಎನ್ನುವುದು ಈಗ ಅಂತಾರಾಷ್ಟ್ರೀಯ ಸುದ್ದಿಯಾಗಿದ್ದು, ಗದಗನವರೇ ಆಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ಸುನೀಲ್ ಜೋಶಿ ತಮ್ಮ ಟ್ವೀಟರ್ ಖಾತೆಯಲ್ಲಿ ಗದಗನಿಂದ ಬೆಂಗಳೂರಿಗೆ ತೆರಳುವ ವೋಲ್ವೋ ಬಸ್ ಸೇವೆ ರದ್ದುಗೊಳಿಸಲಾಗಿದೆ. ಇದಕ್ಕೆ ಯಾವುದೇ ವಿವರಣೆ ನೀಡಲಾಗಿಲ್ಲ. ಮುಖ್ಯಮಂತ್ರಿಗಳೇ ಈ ವಿಷಯದಲ್ಲಿ ಚರ್ಚಿಸಿ ಎಂದು ಟ್ವೀಟರ್ ನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೊಂದು ಟ್ವೀಟರ್ ನಲ್ಲಿ ಗದಗ ಜಿಲ್ಲಾ ಉಸ್ತುವಾರಿ ಮಂತ್ರಿ ಎಚ್.ಕೆ. ಪಾಟೀಲ ಹಾಗೂ ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ ಕೂಡಲೇ ವೋಲ್ವೋ ಬಸ್ ಸೇವೆ ಪ್ರಾರಂಭಿಸಿ ಎಂದು ಸಾರಿಗೆ ಸಂಸ್ಥೆಯ ವೋಲ್ವೋ ಬಸ್ ನ ಚಿತ್ರ ಹಾಕಿ ಟ್ವೀಟ್ ಮಾಡಿದ್ದಾರೆ. ಇದಕ್ಕಾದರೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸ್ಪಂದಿಸುತ್ತಾರೆಯೇ ಕಾಯ್ದು ನೋಡಬೇಕು.ಕೆಲ ತಿಂಗಳ ಹಿಂದೆ ಗದಗನಿಂದ ಬೆಂಗಳೂರಿಗೆ ರಾಜಹಂಸ ಬಸ್ ಸಂಚಾರವಿತ್ತು. ರಿಪೇರಿ ನೆಪದಲ್ಲಿ ಅದನ್ನು ಸ್ಥಗಿತಗೊಳಿಸಿ, ಗದಗ-ಹುಬ್ಬಳ್ಳಿ ನಡುವೆ ಓಡಿಸುತ್ತಿದ್ದಾರೆ. ಮೊದಲು ಚಾಲ್ತಿಯಲ್ಲಿದ್ದ ಎಸಿ ಸ್ಲೀಪರ್ ಬಸ್ ಬಹಳಷ್ಟು ರಿಪೇರಿ ಇವೆ, ಮಳೆಯಾದರೆ ಸೋರುತ್ತಿವೆ ಎಂದು ಆ ಬಸ್ ಗಳ ಸೇವೆ ಸ್ಥಗಿತಗೊಳಿಸಿ ಹಲವಾರು ತಿಂಗಳುಗಳೇ ಗತಿಸಿವೆ. ಫೆಬ್ರವರಿಯಲ್ಲಿ ಸಾರಿಗೆ ಸಚಿವರು ಗದಗ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಪಲ್ಲಕ್ಕಿ ಹೆಸರಿನ ಹೊಸ ಬಸ್ ನೀಡುವಂತೆ ಮನವಿ ಮಾಡಿದ್ದರೂ ಇದುವರೆಗೂ ಹೊಸ ಬಸ್ ಬಂದಿಲ್ಲ, ಹಳೆಯ ಬಸ್ ಸೇವೆಯೂ ಆರಂಭವಾಗಿಲ್ಲ ಹಾಗಾಗಿ ಜನರು ಅನಿವಾರ್ಯವಾಗಿ ಹೆಚ್ಚಿನ ಹಣ ನೀಡಿ ಖಾಸಗಿ ಬಸ್ ಸೇವೆ ಪಡೆಯುವಂತಾಗಿದೆ.