ಮಾಲವಿ ಜಲಾಶಯದ 9ನೇ ಗೇಟ್ ದುರಸ್ತಿಗೆ ಒತ್ತಾಯ

KannadaprabhaNewsNetwork |  
Published : Aug 20, 2024, 12:49 AM IST
19ಎಚ್‌ಪಿಟಿ4- ಹಗರಿಬೊಮ್ಮನಹಳ್ಳಿ ಮಾಲವಿ ಜಲಾಶಯದ 9ನೇ ಗೇಟ್ ದುರಸ್ತಿಗೆ ಒತ್ತಾಯಿಸಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಇವರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್ ಇವರ ನೇತೃತ್ವದಲ್ಲಿ ಹೊಸಪೇಟೆಯಲ್ಲಿ ಮನವಿಪತ್ರ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದ 9ನೇ ಗೇಟ್ ದುರಸ್ತಿ ಮೂಲಕ ನೀರು ಉಳಿಸಿಕೊಳ್ಳುವಂತೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ನೇತೃತ್ವದಲ್ಲಿ ನಗರದಲ್ಲಿ ಮನವಿ ಸಲ್ಲಿಸಲಾಯಿತು.

ಹೊಸಪೇಟೆ: ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದ 9ನೇ ಗೇಟ್ ದುರಸ್ತಿ ಮೂಲಕ ನೀರು ಉಳಿಸಿಕೊಳ್ಳುವಂತೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ನೇತೃತ್ವದಲ್ಲಿ ನಗರದಲ್ಲಿ ಮನವಿ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಅಕ್ಕಿ ತೋಟೇಶ್, ಮಾಲವಿ ಜಲಾಶಯದಲ್ಲಿ ಎರಡು ಟಿಎಂಸಿಯಷ್ಟು ನೀರು ಸಂಗ್ರಹಗೊಳ್ಳುತ್ತದೆ. ಈ ಹಿಂದೆ ಶಾಸಕರಾಗಿದ್ದ ಎಸ್. ಭೀಮಾ ನಾಯ್ಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಆಡಳಿತ ಅವಧಿಯಲ್ಲಿ ₹165 ಕೋಟಿ ಅನುದಾನ ಒದಗಿಸಿದ ಪರಿಣಾಮವಾಗಿ ತುಂಗಭದ್ರಾ ಜಲಾಶಯದಿಂದ ನೀರು ಹರಿದು ಬರುತ್ತಿದೆ. ಆದರೆ, ಮಾಲವಿ ಜಲಾಶಯದ 9ನೇ ಗೇಟ್ ತುಂಗಭದ್ರಾ ಜಲಾಶಯದ 19ನೇ ಗೇಟ್ ಮಾದರಿಯಲ್ಲಿಯೇ ವರ್ಷದ ಹಿಂದೆ ಕೆಟ್ಟಿದೆ. ಜಲಾಶಯದ ಗೇಟ್ ರಿಪೇರಿ ಮಾಡಲಾಗದೆ ಇದೀಗ ನೀರು ವ್ಯರ್ಥವಾಗಿ ಹರಿಯುತ್ತಿದೆ. ಕೂಡಲೇ ಮಾಲವಿ ಜಲಾಶಯದ ಗೇಟ್ ರಿಪೇರಿ ಮಾಡಿಸಬೇಕು ಮತ್ತು ಕಾಲುವೆಗಳನ್ನು ಸುಸ್ಥಿತಿಯಲ್ಲಿರಿಸಬೇಕು. ಈಗಾಗಲೇ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಪದವಿ ಕಾಲೇಜು ಆರಂಭಿಸುವಂತೆ ಒತ್ತಾಯಿಸಿ ಪಾದಯಾತ್ರೆ ನಡೆಸಲಾಗಿದೆ. ಆದರೆ ಈ ವರೆಗಿನ ಸರ್ಕಾರಗಳು ಕಾಲೇಜು ಆರಂಭಕ್ಕೆ ಸ್ಪಂದನೆ ನೀಡಿಲ್ಲ. ಸಾವಿರಾರು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಕೂಡಲೇ ಪದವಿ ಕಾಲೇಜು ಆರಂಭಿಸಬೇಕು. ತುಂಗಭದ್ರಾ ಜಲಾಶಯದಿಂದ ಮೂರೂವರೆ ಸಾವಿರ ಎಕರೆ ನೀರುಣಿಸಲು ಸಾಧ್ಯವಾಗಿರುವ ಗ್ರಾಮದ ಏತ ನೀರಾವರಿ ಯೋಜನೆಯ 2ನೇ ಹಂತದ ಯೋಜನೆಯನ್ನು ಆರಂಭಿಸಲು ಅನುದಾನ ಒದಗಿಸಬೇಕು. ಈ ಕುರಿತಂತೆಯೂ ಜಿಲ್ಲಾ ಕೇಂದ್ರದ ವರೆಗೆ ಸುತ್ತಲಿನ ಗ್ರಾಮಸ್ಥರು ಪಾದಯಾತ್ರೆ ನಡೆಸಿದ್ದರೂ ಫಲಕಾರಿಯಾಗಿಲ್ಲ ಎಂದು ದೂರಿದರು.

ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಟಿ. ವೆಂಕೋಬಪ್ಪ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಮೇಲಿನ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ ಗ್ರಾಮೀಣ ಪ್ರದೇಶದ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಗೌರಜ್ಜನವರ ಗಿರೀಶ್, ಸುರೇಶ್ ಯಳಕಪ್ಪನವರ, ಐಟಿ ಕೊಟ್ರೇಶ್, ಅಂಬಾಡಿ ಮಹೇಶ್, ವಸಂತಕುಮಾರ ಜನ್ನು ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?