ಕನ್ನಡಪ್ರಭ ವಾರ್ತೆ ಉಡುಪಿ
ತನ್ನನ್ನು ಮಿಸ್ಟರ್ ಕ್ಲೀನ್ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದು ನಿಜವೇ ಆಗಿದ್ದರೆ ತಕ್ಷಣ ರಾಜೀನಾಮೆ ಕೊಟ್ಟು ತನಿಖೆ ಎದರಿಸಿ, ಕ್ಲೀನಾಗಿ ಹೊರಗೆ ಬರಲಿ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಸವಾಲು ಹಾಕಿದರು.ಅವರು ಸೋಮವಾರ ಬಿಜೆಪಿ ಕಾರ್ಯಾಲಯದ ಬಳಿ, ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆದ ಪ್ರತಿಭಟನೆ, ರಾಸ್ತಾರೋಖೋವನ್ನು ಉದ್ದೇಶಿಸಿ ಮಾತನಾಡಿದರು.
ಬಿ.ಎಸ್.ಯಡಿಯೂರಪ್ಪ ಅವರ ಮೇಲೆಯೂ ಅಂದಿನ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದಾಗ, ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಅವರು ತಕ್ಷಣ ರಾಜೀನಾಮೆ ನೀಡಬೇಕು, ನಾನಾಗಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗ್ತಿದ್ದೆ ಎಂದಿದ್ದರು. ಹಾಗಾದರೆ ಈಗ ತಮ್ಮ ಮೇಲೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದಾಗ ಸಿದ್ದರಾಮಯ್ಯ ಯಾಕೆ ರಾಜೀನಾಮೆ ನೀಡಿ ಮನೆಗೆ ಹೋಗುತ್ತಿಲ್ಲ ಎಂದವರು ಪ್ರಶ್ನಿಸಿದ್ದಾರೆ.ನಾನು ಸಿದ್ಧಾಂತದಂತೆ ನಡೆಯುವವ, ಪ್ರಾಮಾಣಿಕ ಎಂದು ಸ್ವಯಂಘೋಷಿತ ಸಿದ್ದರಾಮಯ್ಯ ಅವರ ಬಣ್ಣ ಮುಡಾ ಹಗರಣದಲ್ಲಿ ಈಗ ಬಯಲಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಮಾತನಾಡಿ, ಯಡಿಯೂರಪ್ಪ ಅವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ಹಂಸರಾಜ್ ಭಾರದ್ವಜ್ ಅವರು ಸಂವಿಧಾನವನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕರಿಗೆ ಈಗ ಥಾವರ್‌ಚಂದ್ ಗೆಹ್ಲೋಟ್ ಸಂವಿಧಾನ ವಿರೋಧಿ ಹೇಗೆ ಆದರು ಎಂದು ಪ್ರಸ್ನಿಸಿದರು.ಜಿಲ್ಲಾ ಪ್ರ.ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ ಪ್ರತಿಭಟನೆಯನ್ನು ನಿರೂಪಿಸಿದರು. ಪಕ್ಷದ ನಾಯಕರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಶ್ರೀಕಾಂತ್ ನಾಯಕ್, ಗೀತಾಂಜಲಿ ಸುವರ್ಣ, ಶ್ಯಾಮಲಾ ಕುಂದರ್, ಸಂಧ್ಯಾ ರಮೇಶ್, ವೀಣಾ ಶೆಟ್ಟಿ, ಶ್ರೀಶ ನಾಯಕ್, ವಿಜಯ ಕೊಡವೂರು, ಶಿಲ್ಪ ಸುವರ್ಣ, ಸತ್ಯಾನಂದ ನಾಯಕ್, ರಾಜೇಶ್ ಕಾವೇರಿ ಮುಂತಾದವರು ಪ್ರತಿಭಟನೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಸಮೀಪದ ರಾಹೆಯಲ್ಲಿ ಕೆಲನಿಮಿಷ ಕುಳಿತು ಸಾಂಕೇತಿಕವಾಗಿ ರಾಸ್ತಾ ರೋಖೋ ನಡೆಸಲಾಯಿತು.