ಕನ್ನಡಪ್ರಭ ವಾರ್ತೆ ರಾಮನಗರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಮಾಯಿಸಿ ಮೆರವಣಿಗೆ ಹೊರಟ ಸಾವಿರಾರು ಕಾರ್ಯಕರ್ತರು, ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಮೊಳಗಿಸುತ್ತಾ ಕೇಂದ್ರದ ಏಜೆಂಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಕಿಡಿಕಾರಿದರಲ್ಲದೆ, ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣಕ್ಕೆ ಆಗಮಿಸಿ ಧರಣಿ ಕುಳಿತರು.
ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಸಚಿವರಾದ ಅಮಿತ್ ಶಾ, ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಪ್ಲೇಕಾರ್ಡ್‌ಗಳನ್ನು ಪ್ರದರ್ಶನ ಮಾಡುತ್ತಾ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ಸಂವಿಧಾನದ ರಕ್ಷಣೆ ಮಾಡಬೇಕಾದ ರಾಜ್ಯಪಾಲರು ಕೇಂದ್ರದ ಎನ್‌ಡಿಎ ಸರ್ಕಾರದ ಕೈ ಗೊಂಬೆಯಂತೆ ವರ್ತಿಸುತ್ತ ಸುಪ್ರೀಂಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿರುವ ಪ್ರಕರಣಗಳು ಸಾಕಷ್ಟಿವೆ. ಆದರೆ, ರಾಜ್ಯಪಾಲರು ವ್ಯಕ್ತಿಯೊಬ್ಬರ ಖಾಸಗಿ ದೂರು ಆಧರಿಸಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ಅನುಮತಿ ನೀಡುವ ಮೂಲಕ ಸಂವಿಧಾನ ದತ್ತವಾಗಿ ಆಯ್ಕೆಯಾದ ಸರ್ಕಾರವನ್ನು ಅಭದ್ರಗೊಳಿಸುವ ಸಂವಿಧಾನ ವಿರೋಧಿ ಕಾರ್ಯ ನಡೆಸಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ - ಜೆಡಿಎಸ್ ನವರು ಸ್ಪಷ್ಟವಾಗಿ ರಾಜಭವನವನ್ನು ದುರುಪಯೋಗ ಪಡಿಸಿಕೊಂಡು ಸಂವಿಧಾನದ ಕಗ್ಗೋಲೆ ಮಾಡಿದ್ದಾರೆ. ಮುಡಾ ವಿಚಾರದಲ್ಲಿ ಯಾವುದೇ ತಿರುಳಿಲ್ಲ ಎಂಬುದು ರಾಜ್ಯಪಾರಿಗೂ ತಿಳಿದಿದೆ. ಆದರೂ ಸಹ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಈ ರಾಜ್ಯದ ಸಮಸ್ತ ಜನರಿಗೆ ಮಾಡಿರುವ ದ್ರೋಹ. ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸಬೇಕೆಂದು ಜೆಡಿಎಸ್ - ಬಿಜೆಪಿಯವರು ಸೇರಿಕೊಂಡು ಈ ಅನೈತಿಕವಾದ ಆಟ ಆಡುತ್ತಿದ್ದಾರೆ. ಆ ಆಟಕ್ಕೆ ಮೈದಾನವನ್ನು ರಾಜ್ಯಪಾಲರು ತಮ್ಮ ಕಚೇರಿಯನ್ನು ಒದಗಿಸಿಕೊಟ್ಟಿದ್ದಾರೆ ಎಂದು ದೂರಿದರು.ರಾಜ್ಯಪಾಲರು ತಮ್ಮ ಹುದ್ದೆಯ ಘನತೆ ಮತ್ತು ಸಂವಿಧಾನದ ಆಶಯಗಳನ್ನು ಕೊಂದು ಹಾಕಿದ್ದಾರೆ. ಅವರು ಒಂದು ಪಕ್ಷದ ಏಜೆಂಟರಂತೆ ವರ್ತಿಸಿದ್ದಾರೆ ಎಂಬುದು ಸಂಶಯಾತೀತವಾಗಿದೆ. ರಾಜ್ಯಪಾಲರು ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿದ್ದರೆ ಕರ್ನಾಟಕ ಲೋಕಾಯುಕ್ತವು ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರುವ ಗಂಭೀರವಾದ ವಿಷಯಗಳ ಕುರಿತು ಯಾಕೆ ಮೌನವಹಿಸಿದ್ದಾರೆ? ನೇರವಾಗಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಲವು ಬಿಜೆಪಿ - ಜೆಡಿಎಸ್ ಮುಖಂಡರ ಕುರಿತಂತೆ ಏಕೆ ಅನುಮತಿ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಶಶಿಕಲಾ ಜೊಲ್ಲೆ, ಪರಣ್ಣ ಮುನವಳ್ಳಿ ಮುಂತಾದವರ ಮೇಲೆ ಲಂಚ ವಸೂಲಿ ಕುರಿತ ಪ್ರಾಥಮಿಕ ಸಾಕ್ಷ್ಯಗಳು ಲಭಿಸಿವೆ. ಇವರ ಮೇಲೆ ತನಿಖೆ ನಡೆಸುವ ಅಗತ್ಯವಿದೆ ಅನುಮತಿ ಕೊಡಿ ಎಂದು ಲೋಕಾಯುಕ್ತದವರು 2021ರಂದು ಕೋರಿದ್ದಾರೆ. 2023ರ ನ.23ರಂದು ಇದೇ ಲೋಕಾಯುಕ್ತದವರು ಕುಮಾರಸ್ವಾಮಿಯವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿ ಎಂದು ಕೋರಿ ದಾಖಲೆಗಳ ಸಮೇತ ಬರೆದು ಅನುಮತಿ ಕೇಳಿದ್ದಾರೆ. ಶ್ರೀ.ಸಾಯಿ ವೆಂಕಟೇಶ್ವರ ಮಿನರಲ್ಸ್ ಎಂಬ ಬೋಗಸ್ ಸಂಸ್ಥೆಗೆ 6-10-2007 ರಂದು 550 ಎಕರೆ ಅಮೂಲ್ಯ ಗಣಿ ಸಂಪತ್ತನ್ನು ನೀಡಿ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಲು ಅನುಮತಿ ನೀಡಿದ್ದಾರೆ. ಲೂಟಿಯಲ್ಲಿ ಇವರ ಪಾತ್ರವಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ಈ ಕುರಿತು ವಿವರವಾದ ತನಿಖೆ ಮಾಡಿರುವ ಲೋಕಾಯುಕ್ತವು ಪ್ರಕರಣದಲ್ಲಿ ಕುಮಾರಸ್ವಾಮಿಯವರ ನೇರ ಪಾತ್ರವಿದೆ ಎಂಬುದನ್ನು ಮನಗಂಡು ಅನುಮತಿ ಕೇಳಿದೆ.2024ರ ಫೆ.26ರಿಂದ ಮುರುಗೇಶ್ ನಿರಾಣಿಯವರು ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿದ್ದಾರೆಂದು ಸಾಕ್ಷ್ಯಗಳ ಸಮೇತ ಲೋಕಾಯುಕ್ತದವರು ವಿಚಾರಣೆಗೆ ಅನುಮತಿ ಕೇಳಿದ್ದಾರೆ. 2024ರ ಮೇ 13ರಂದು ಜನಾರ್ಧನ ರೆಡ್ಡಿಯವರ ಆದಾಯ ಮೀರಿ ಆಸ್ತಿ ಸಂಪಾದಿಸಿರುವ ಕುರಿತು ಪ್ರಾಥಮಿಕ ತನಿಖೆ ಮಾಡಿ ಅಕ್ರಮ ಮಾಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ವಿವರವಾದ ತನಿಖೆಯ ಅಗತ್ಯವಿದೆ ಎಂದು ಹೇಳಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ ಏಕೆ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಇಷ್ಟೆಲ್ಲ ಗಂಭೀರವಾದ ಪ್ರಕರಣಗಳಿದ್ದರೂ ಬಿಜೆಪಿಯ ಕಚೇರಿಯಂತಾಗಿರುವ ರಾಜಭವನ ಮತ್ತು ರಾಜ್ಯಪಾಲರು ಇದುವರೆಗೆ ಈ ಪ್ರಕರಣಗಳ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿಲ್ಲ. ಆದರೆ ಕೆಲವೇ ದಿನಗಳ ಹಿಂದೆ ಅನೇಕ ಕ್ರಿಮಿನಲ್ ಅಪರಾಧಗಳನ್ನು ಎದುರಿಸುತ್ತಿರುವ ಪ್ರದೀಪ್ ಕುಮಾರ್, ಟಿ.ಜೆ. ಅಬ್ರಹಾಂ ಮತ್ತು ಸ್ನೇಹಮಯಿ ಕೃಷ್ಣ ವಿರಾಧಾರ ದೂರುಗಳನ್ನು ಆಧರಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ ಎಂದು ಆ್ರೋಶ ವ್ಯಕ್ತಪಡಿಸಿದರು.ಸಂವಿಧಾನ ಮತ್ತು ಜನವಿರೋಧಿಯಾದ ಬಿಜೆಪಿ, ಜೆಡಿಎಸ್, ಆರೆಸ್ಸೆಸ್‌ಗಳ ದುಷ್ಟಕೂಟಕ್ಕೆ ಯಾವಾಗ ಆಪರೇಷನ್ ಕಮಲ ಎಂಬ ಚಟುವಟಿಕೆಗೆ ರಾಜ್ಯದಲ್ಲಿ ಅವಕಾಶವಿಲ್ಲವೆಂದು ಮನವರಿಕೆಯಾಯಿತೊ ಆಗಿನಿಂದಲೆ ರಾಜಭವನವನ್ನು ದುರುಪಯೋಗ ಪಡಿಸಿಕೊಂಡು ಚುನಾಯಿತ ಸರ್ಕಾರವನ್ನು ಬುಡಮೇಲು ಮಾಡಿ ಅಧಿಕಾರಕ್ಕೆ ಬಂದು ಪಾಳೇಗಾರಿ, ಕೋಮುವಾದಿ ಸರ್ಕಾರ ರಚಿಸಬೇಕೆಂದು ತೀರ್ಮಾನಿಸಿವೆ. ಇದೆಲ್ಲದರ ಭಾಗವೆ ಈ ಪ್ರಾಸಿಕ್ಯೂಷನ್‌ಗೆ ಅನುಮತಿ ಎಂಬ ನಾಟಕ ಪ್ರಾರಂಭಿಸಿದೆ ಎಂದು ಆರೋಪಿಸಿದರು.ಈ ದುಷ್ಟಕೂಟದ ಚಟುವಟಿಕೆಗಳ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ. ಈ ಕುತಂತ್ರದಲ್ಲಿ ಕೇಂದ್ರ ಸರ್ಕಾರವೂ ಭಾಗಿಯಾಗಿದೆ. ನಿನ್ನೆ ಹರಿಯಾಣ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ಚುನಾವಣೆ ಡಿಕ್ಲೇರ್ ಮಾಡಲಾಗಿದೆ. ಅದೇ ದಿನ ರಾತ್ರಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಪರ್ಮಿಷನ್ ಕೊಟ್ಟಿದ್ದಾರೆ. ಈ ವಿಚಾರ ಕುರಿತು ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡುವ ಮೊದಲು ಯಾವುದೇ ಲೀಗಲ್ ಒಪಿನಿಯನ್ ತೆಗೆದುಕೊಂಡಿಲ್ಲ. ಅವರು ಬಿಜೆಪಿ, ಜೆಡಿಎಸ್ ರವರ ಒಪಿನಿಯನ್ ಮಾತ್ರ ತೆಗೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಪ್ರಹ್ಲಾದ್ ಜೋಶಿ ಮತ್ತು ಕುಮಾರಸ್ವಾಮಿಯವರು ಇನ್ನು 10 ತಿಂಗಳಲ್ಲಿ ಈ ಸರ್ಕಾರ ಬಿದ್ದು ಹೋಗುತ್ತೆ ಎಂದು ಪತ್ರಿಕೆಗಳಿಗೆ ಹೇಳಿಕ ಕೊಟ್ಟಿದ್ದರು. ಹಾಗಾಗಿ ಇದೆಲ್ಲವೂ ಪೂರ್ವ ಪಿತೂರಿಯ ಭಾಗ. ಚುನಾಯಿತ ಸರ್ಕಾರವನ್ನು ವಾಮಮಾರ್ಗದಲ್ಲಿ ಕಿತ್ತೊಗೆಯುವ ಕಾರ್ಯ. ಇದು ರಾಜಕೀಯ ಸಂಘರ್ಷ. ಇದನ್ನು ನಾವು ಕಾನೂನಾತ್ಮಕವಾಗಿ, ಪ್ರಜಾಪ್ರಭುತ್ವದ ನೆಲೆಯಲ್ಲಿ ಹೋರಾಟ ಮಾಡುತ್ತೇವೆ. ಇವರ ದುಷ್ಟತನದ ವಿರುದ್ಧ ಜನರ ಬಳಿಗೆ ಸತ್ಯಾಂಶವನ್ನು ತೆಗೆದುಕೊಂಡು ಹೋಗುತ್ತೇವೆ. ಇದು ನಿರೀಕ್ಷಿತ ಪಿತೂರಿ. ದುಷ್ಟಕೂಟದ ಈ ಪಿತೂರಿಗೆ ನಾವು ಹೆದರುವುದಿಲ್ಲ. ರಾಜ್ಯಪಾಲರ ಪಿತೂರಿ ಬೆತ್ತಲೆ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಪ್ರತಿಭಟನೆ ಬಳಿಕ ಅಪರ ಜಿಲ್ಲಾಧಿಕಾರಿ ಚಂದ್ರಯ್ಯರವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಅಶ್ವತ್ಥ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವ್, ಮಾಜಿ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಯರೇಹಳ್ಳಿ ಮಂಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಕಾರ್ಮಿಕ ವಿಭಾಗ ಜಿಲ್ಲಾಧ್ಯಕ್ಷ ಪುಟ್ಟರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್, ನಿರ್ದೇಶಕ ಶಪರ್ವೇಜ್ ಪಾಷಾ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಮುಖಂಡರಾದ ವಿಶ್ವನಾಥ್, ರೈಡ್ ನಾಗರಾಜ್, ರಾಜಶೇಖರ್, ಸಿಎನ್‌ಆರ್ ವೆಂಕಟೇಶ್, ಶ್ರೀಕಂಠು, ನಗರಸಭೆ ಸದಸ್ಯರಾದ ಕೆ.ಶೇಷಾದ್ರಿ, ನಿಜಾಮುದ್ದೀನ್ ಷರೀಫ್, ಆಯಿಷಾ, ದೌಲತ್ ಷರೀಫಾ, ಪವಿತ್ರ, ಸೋಮಶೇಖರ್, ಅಜ್ಮತ್, ಆರೀಫ್ ಮತ್ತಿತರರಿದ್ದರು.