ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾನೂನುಗಳ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಿರುವುದರಿಂದಾಗಿ ಪ್ರಸ್ತುತ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಇದರಿಂದಾಗಿ ಸಮಾಜದ ಸ್ವಾಸ್ಥ್ಯ ಸಂಪೂರ್ಣವಾಗಿ ಕದಡುವಂತಾಗಿದೆ ಎಂದು ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮಂಜುನಾಥ ಕಳವಳ ವ್ಯಕ್ತಪಡಿಸಿದರು.ಶಿವಮೊಗ್ಗ ಕೇಂದ್ರ ಕಾರಾಗೃಹದ ಗ್ರಂಥಾಲಯ ವಿಭಾಗದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕೇಂದ್ರ ಕಾರಾಗೃಹದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜೈಲು ಜೀವನ ಎಂಬುದು ಅತ್ಯಂತ ಕಠಿಣವಾದುದು. ಅಪರಾಧಗಳನ್ನು ಗುರುತಿಸಬೇಕೇ ವಿನಾ ಅಪರಾಧಿಯನ್ನಲ್ಲ ಎಂಬ ಮಾತಿನಂತೆ ಮೊದಲು ಅಪರಾಧಗಳಿಗೆ ಕಡಿವಾಣ ಹಾಕುವುದು ಅತ್ಯಂತ ಮುಖ್ಯ. ಕಾನೂನು ಸೇವೆಗಳ ಪ್ರಾಧಿಕಾರದಿಂದ ಒದಗಿಸಲಾಗುವ ಕಾನೂನು ರಕ್ಷಣೆ ಮತ್ತು ನೆರವುಗಳನ್ನು ಅಗತ್ಯವಿರುವವರಿಗೆ ತಲುಪಿಸುವ ಮೂಲಕ ಅಪರಾಧಮುಕ್ತ ಹಾಗೂ ಪರಿವರ್ತನೆಯ ಸಮಾಜವನ್ನು ಕಟ್ಟಲು ಎಲ್ಲರೂ ದೃಢಸಂಕಲ್ಪ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶ, ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್. ಸಂತೋಷ್ ಮಾತನಾಡಿ, ಜೈಲುವಾಸದ ಒತ್ತಡ ಮತ್ತು ಜಂಜಡಗಳಿಂದ ಮುಕ್ತಿಹೊಂದಲು ಕಾನೂನು ಸೇವೆಗಳ ಪ್ರಾಧಿಕಾರವು ಬಂದಿಗಳಿಗೆ ಸಕಾಲಿಕವಾಗಿ ನೆರವಾಗುತ್ತದೆ. ಬಂಧಿಗಳ ಕಾನೂನು ಹಕ್ಕುಗಳ ಕುರಿತು ಸೂಕ್ತ ಅರಿವನ್ನು ಮೂಡಿಸುವುದರೊಂದಿಗೆ ಹಕ್ಕುಗಳ ರಕ್ಷಣೆಯನ್ನು ಮಾಡುವುದೇ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಥಮ ಆದ್ಯತೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮಂಜುನಾಥ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ, ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಆರ್.ಪ್ರೀತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೈಲು ಅಧಿಕಾರಿ ಶ್ರೀಶೈಲ ಎಸ್. ಕಟ್ಟಿಮನಿ, ಸುಷ್ಮಾ ಬಿ. ವಡಗೇರ, ಶರಣಬಸವ, ವಿಜಯಕುಮಾರ್, ಸಿದ್ದಪ್ಪ ಟಿ.ಕುರಿ, ಪ್ರಭು ಬಿ.ಗಾಣಿಗೇರ, ಕಾಂತಾಮಣಿ, ಸಂಸ್ಥೆಯ ಶಿಕ್ಷಕ ಗೋಪಾಲಕೃಷ್ಣ, ಎಸ್.ಎನ್ ಲೀಲಾ ಮತ್ತಿತರರು ಇದ್ದರು.
‘ಬಿಡುಗಡೆ’ ಕಿರುನಾಟಕ ಪ್ರದರ್ಶನ:ಕಾನೂನು ಸೇವೆಗಳ ದಿನಾಚರಣೆಯ ಅಂಗವಾಗಿ ಸಂಸ್ಥೆಯ ಬಂದಿನಿವಾಸಿಗಳಿಂದ ‘ಬಿಡುಗಡೆ’ ಎಂಬ ವಿಶೇಷ ಕಿರುನಾಟಕವನ್ನು ಪ್ರದರ್ಶಿಸಲಾಯಿತು. ಕಾನೂನಿನ ಕುರಿತು ಸರಿಯಾದ ಜ್ಞಾನವಿಲ್ಲದ ಅನಕ್ಷರಸ್ಥ ಬಂಧಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಅರಿವು ಮತ್ತು ಸರ್ಕಾರಿ ವಕೀಲರ ನೇಮಕಗೊಂಡು ಆ ಬಂಧಿಯು ಸರ್ವೋಚ್ಚ ನ್ಯಾಯಾಲಯದವರೆಗೂ ಕಾನೂನು ಹೋರಾಟ ನಡೆಸಲು ಶಕ್ತನಾಗುವ ಹಾಗೂ ಅಂತಿಮವಾಗಿ ದೋಷಮುಕ್ತನಾಗಿ ಜೈಲಿನಿಂದ ಬಿಡುಗಡೆ ಹೊಂದುವ ತಿರುಳನ್ನೊಳಗೊಂಡ ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.