ಭಕ್ತರ ಭಾವನೆಗೆ ಧಕ್ಕೆ ಬಂದರೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌: ಜಿಲ್ಲಾಧಿಕಾರಿ ಎಚ್ಚರಿಕೆ

KannadaprabhaNewsNetwork |  
Published : Jan 08, 2025, 12:16 AM IST
ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮೈಲಾರಲಿಂಗೇಶ್ವರ ಜಾತ್ರಾ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿದ ಶಾಸಕ ಕೃಷ್ಣನಾಯ್ಕ. | Kannada Prabha

ಸಾರಾಂಶ

ಮೈಲಾರ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ, ಜಾತ್ರೆಯಲ್ಲಿ ಭಕ್ತರ ಭಾವನೆ ಬಹಳ ಮುಖ್ಯ. ಅವರ ಭಾವನೆಗಳಿಗೆ ಸಣ್ಣ ಧಕ್ಕೆ ಬರದಂತೆ ಎಚ್ಚರಿಕೆ ವಹಿಸಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಹೂವಿನಹಡಗಲಿ: ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸೇರಿ ಸಡಗರ ಸಂಭ್ರಮದಿಂದ ಜಾತ್ರೆ ಮಾಡಬೇಕಿದೆ. ಈ ವೇಳೆ ಭಕ್ತರ ಭಾವನೆಗಳಿಗೆ ದೇಗುಲದ ಅಧಿಕಾರಿಗಳು ಧಕ್ಕೆ ತಂದರೆ ಅವರ ವಿರುದ್ಧ ನಿಯಾಮಾನುಸಾರ ಕ್ರಿಮಿನಲ್‌ ಕೇಸ್‌ ದಾಖಲು ಮಾಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಹೇಳಿದರು.

ತಾಲೂಕಿನ ಮೈಲಾರ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಿದ್ದ, ಮೈಲಾರಲಿಂಗೇಶ್ವರ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮೈಲಾರ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ, ಜಾತ್ರೆಯಲ್ಲಿ ಭಕ್ತರ ಭಾವನೆ ಬಹಳ ಮುಖ್ಯ. ಅವರ ಭಾವನೆಗಳಿಗೆ ಸಣ್ಣ ಧಕ್ಕೆ ಬರದಂತೆ ಎಚ್ಚರಿಕೆ ವಹಿಸಿ. ದೇವರ ದರ್ಶನಕ್ಕೆ ತೊಂದರೆ ಆಗಬಾರದು, ಅಧಿಕಾರಿಗಳ ವೈಯಕ್ತಿಕ ಹಿತಾಸಕ್ತಿಗೆ ಅನುಗಣವಾಗಿ ನಡೆದುಕೊಳ್ಳುವಂತಿಲ್ಲ. ಭಕ್ತರಿಂದ ಯಾವುದೇ ಅಪಸ್ವರ ಬರಬಾರದು. ಎಲ್ಲರೂ ಸೇರಿ ಸಮಾನವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಡೆಂಕಣಮರಡಿಯ ಕಾರ್ಣಿಕೋತ್ಸವದಲ್ಲಿ ಧ್ವನಿವರ್ಧಕ ಸರಿಯಾಗಿ ಇರಬೇಕು. ಜತೆಗೆ ಆ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು, ಕುಡಿಯುವ ನೀರು, ತಾತ್ಕಾಲಿಕ ಆಸ್ಪತ್ರೆ ಹಾಗೂ ವಿದ್ಯುತ್‌ ದೀಪದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಸೂಚಿಸಿದರು.

ಜಾತ್ರೆಯ ಪರಿಷೆ ಸೇರುವ ಜಾಗದಲ್ಲಿ ಹಾಗೂ ದೇವಸ್ಥಾನ ಮತ್ತು ಬಸ್‌ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ಬಸ್ಸಿನ ವ್ಯವಸ್ಥೆಯನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸಬೇಕು ಎಂದು ಹೇಳಿದರು.

ಶಾಸಕ ಕೃಷ್ಣನಾಯ್ಕ ಮಾತನಾಡಿ, ಜೆಸ್ಕಾಂ ಇಲಾಖೆ ಅಧಿಕಾರಿಗಳು, ಜಾತ್ರೆಗೂ ಮುನ್ನವೇ ವಿದ್ಯುತ್ ಸಂಪರ್ಕ ಕಲ್ಪಿಸುವ ಜತೆಗೆ, ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಹಾಗೂ ಇತರೆ ಕಡೆಗಳಲ್ಲಿ ವಿದ್ಯುತ್‌ ಸಂಪರ್ಕ ಕಲಿಸಬೇಕಿದೆ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬೇಗನೆ ದುರಸ್ತಿ ಮಾಡಿಸಿ, ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿ. ಇಲಾಖೆಗಳ ನಡುವೆ ಸರಿಯಾಗಿ ಸಮನ್ವಯದಿಂದ ಕೆಲಸ ಮಾಡಿ. ಆಗ ಯಾವ ಸಮಸ್ಯೆಯೂ ಆಗುವುದಿಲ್ಲ. ಸಮಸ್ಯೆ ಎದುರಾದರೇ ನನ್ನ ಬಳಿ ಹೇಳಿ. ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ಜಾತ್ರೆಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಅಗ್ನಿಶಾಮಕ ವಾಹನ, ಪಶು ಆಸ್ಪತ್ರೆ, ಜನಾರೋಗ್ಯ, ಸ್ವಚ್ಛತೆ, ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಜತೆಗೆ ಡೆಂಕಣಮರಡಿಯಲ್ಲಿ ಕಾರ್ಣಿಕ ಕೇಳಲು ಬರುವ ಭಕ್ತರಿಗೆ ಅನುಕೂಲ ಹಾಗೂ ಬ್ಯಾರಿಕೇಡ್‌ ವ್ಯವಸ್ಥೆ, ಡೆಂಕಣಮರಡಿಯಲ್ಲಿ ರಸ್ತೆ ದುರಸ್ತಿ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಜಾತ್ರೆಯಲ್ಲಿ ಮದ್ಯ ಮಾರಾಟ ಕುರಿತು ಕ್ರಮ ಕೈಗೊಳ್ಳಬೇಕು. ಜಾತ್ರೆಯ ಪ್ರದೇಶದ ಸುತ್ತಲ್ಲೂ 10 ಕಿಮೀ ವ್ಯಾಪ್ತಿಯ ಪ್ರದೇಶದಲ್ಲಿರುವ ಅಂಗಡಿಗಳನ್ನು 4 ದಿನಗಳ ಕಾಲ ಬಂದ್‌ ಮಾಡಬೇಕ ಎಂದು ಡಿಸಿ ಸೂಚಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್‌, ಜಿಪಂ ಸಿಇಒ ಮಹಮದಲಿ ಪಾಷ, ತಹಸೀಲ್ದಾರ್‌ ಜಿ. ಸಂತೋಷಕುಮಾರ, ಇಒ ಎಂ. ಉಮೇಶ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಗಂಗಾಧರ, ಗ್ರಾಪಂ ಅಧ್ಯಕ್ಷೆ ಟಿ. ಜಾನಕಮ್ಮ, ದೇವಸ್ಥಾನದ ಇಒ ಹನುಮಂತಪ್ಪ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''