ಸಾರ್ವಜನಿಕರ ಕೆಲಸವನ್ನು ಜವಾಬ್ದಾರಿಯಿಂದ ಮಾಡಿ

KannadaprabhaNewsNetwork |  
Published : Jan 08, 2025, 12:16 AM IST
ಫೋಟೋ: 7 ಜಿಎಲ್‌ಡಿ1- ಗುಳೇದಗುಡ್ಡದ ತಾಲೂಕು ಪಂಚಾಯತ  ಕಚೇರಿಯಲ್ಲಿ ಜಿಲ್ಲಾ ಲೋಕಾಯುಕ್ತರಿಂದ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಸಭೆ ನಡೆಯಿತು.  | Kannada Prabha

ಸಾರಾಂಶ

ಸಭೆಗೆ ತಡವಾಗಿ ಬರುವುದು, ಗೈರಾಗುವುದು ಸರಿಯಾದ ಕ್ರಮವಲ್ಲ. ಅಧಿಕಾರಿಗಳಿರೋದೇ ಜವಾಬ್ದಾರಿಯಿಂದ ಸಾರ್ವಜನಿಕರ ಕೆಲಸ ಮಾಡಲು. ಅದನ್ನು ಬಿಟ್ಟು ಜವಾಬ್ದಾರಿ ಇಲ್ಲದಂತೆ ವರ್ತಿಸುವುದು ಎಷ್ಟು ಸರಿ ಎಂದು ಜಿಲ್ಲಾ ಲೋಕಾಯುಕ್ತರು ತಾಲೂಕು ಅಧಿಕಾರಿಗಳ ಮೇಲೆ ಗರಂ ಆದ ಘಟನೆ ಜರುಗಿತು.ಪಟ್ಟಣದ ತಾಲೂಕು ಪಂಚಾಯತಿ ಕಚೇರಿಯಲ್ಲಿ ಮಂಗಳವಾರ ನಡೆದ ಗುಳೇದಗುಡ್ಡ ತಾಲೂಕಿನ ಸಾರ್ವಜನಿಕರ ಕುಂದು-ಕೊರತೆ ಮತ್ತು ಅಹವಾಲು ಸ್ವೀಕಾರ ಸಭೆಯಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ತಮ್ಮ ಅಸಮಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸಭೆಗೆ ತಡವಾಗಿ ಬರುವುದು, ಗೈರಾಗುವುದು ಸರಿಯಾದ ಕ್ರಮವಲ್ಲ. ಅಧಿಕಾರಿಗಳಿರೋದೇ ಜವಾಬ್ದಾರಿಯಿಂದ ಸಾರ್ವಜನಿಕರ ಕೆಲಸ ಮಾಡಲು. ಅದನ್ನು ಬಿಟ್ಟು ಜವಾಬ್ದಾರಿ ಇಲ್ಲದಂತೆ ವರ್ತಿಸುವುದು ಎಷ್ಟು ಸರಿ ಎಂದು ಜಿಲ್ಲಾ ಲೋಕಾಯುಕ್ತರು ತಾಲೂಕು ಅಧಿಕಾರಿಗಳ ಮೇಲೆ ಗರಂ ಆದ ಘಟನೆ ಜರುಗಿತು.

ಪಟ್ಟಣದ ತಾಲೂಕು ಪಂಚಾಯತಿ ಕಚೇರಿಯಲ್ಲಿ ಮಂಗಳವಾರ ನಡೆದ ಗುಳೇದಗುಡ್ಡ ತಾಲೂಕಿನ ಸಾರ್ವಜನಿಕರ ಕುಂದು-ಕೊರತೆ ಮತ್ತು ಅಹವಾಲು ಸ್ವೀಕಾರ ಸಭೆಯಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ತಮ್ಮ ಅಸಮಧಾನ ವ್ಯಕ್ತಪಡಿಸಿದರು.

ಸಭೆ ಆರಂಭವಾದ ಬಳಿಕ ಕೆಲ ಅಧಿಕಾರಿಗಳು ಸಭೆಗೆ ಬಂದರೆ ಇನ್ನೂ ಹೆಚ್ಚಿನ ಇಲಾಖೆಗಳ ಅಧಿಕಾರಿಗಳೇ ಸಭೆಗೆ ಗೈರಾಗಿದ್ದರು. ಕಳೆದ ಒಂದು ವಾರದ ಮೊದಲೇ ತಾಲೂಕು ಮಟ್ಟದ ಎಲ್ಲ ಇಲಾಖಾ ಅಧಿಕಾರಿಗಳಿಗೆ ಲೋಕಾಯುಕ್ತರ ಸಭೆಯ ಮಾಹಿತಿ ರವಾನೆಯಾಗಿದ್ದರೂ ಬಹಳಷ್ಟು ಇಲಾಖಾ ಅಧಿಕಾರಿಗಳು ಸಭೆಗೆ ಗೈರಾಗಿದ್ದು ಸಭೆಯಲ್ಲಿ ಎದ್ದು ಕಾಣುತ್ತಿತ್ತು.

ಸಭೆಯಲ್ಲಿ ತಾಲೂಕಿನ ಶಿಕ್ಷಣ ಇಲಾಖೆ, ಪಿಡಬ್ಲ್ಯೂಡಿ, ಕೃಷಿ, ತೋಟಗಾರಿಕೆ, ತಾಲೂಕು ಪಂಚಾಯತಿ, ರೇಷ್ಮೆ, ಅಕ್ಷರ ದಾಸೋಹ, ಆರೋಗ್ಯ ಇಲಾಖೆ, ನೋಂದಣಿ ಇಲಾಖೆ, ಸಮಾಜ ಕಲ್ಯಾಣ, ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಕೆಲ ಇಲಾಖಾ ಅಧಿಕಾರಿಗಳು ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಬಂದಿರಲಿಲ್ಲ. ಹೀಗಾಗಿ ಲೋಕಾಯುಕ್ತರಿಗೆ ಆಯಾ ಇಲಾಖೆಗಳ ಸರಿಯಾದ ಮಾಹಿತಿ ಲಭ್ಯವಾಗಲಿಲ್ಲ. ಮೀನುಗಾರಿಕೆ, ಸಾಮಾಜಿಕ ಅರಣ್ಯ ಸೇರಿದಂತೆ ಕೆಲ ಇಲಾಖೆಗಳ ಅಧಿಕಾರಿಗಳು ಇಲ್ಲವೇ ಕೆಳಮಟ್ಟದ ಅಧಿಕಾರಿಗಳೂ ಸಭೆಗೆ ಬರದೇ ಗೈರಾಗಿದ್ದರು.

ಪುರಸಭೆಯ ಕರ ವಸುಲಾತಿ ಶೇ.71 ಇದೆ ಎಂದು ಪುರಸಭೆ ಮ್ಯಾನೇಜರ್ ಮುದ್ದೇಬಿಹಾಳ ಹೇಳಿದಾಗ ಏಕೆ ತಮ್ಮಲ್ಲಿ ಕರ ವಸೂಲಾತಿ ಇಷ್ಟೊಂದು ಕಡಿಮೆಯಿದೆ. ಬೇರೆ ಕಡೆಗಳಲ್ಲಿ ಶೇ.91 ಇದೆ ಎಂದು ಲೋಕಾಯುಕ್ತ ಡಿಎಸ್ಪಿ ಸಿದ್ದೇಶ್ವರ ತರಾಟೆಗೆ ತೆಗೆದುಕೊಂಡರು. ನೋಂದಣೆ ಅಧಿಕಾರಿ ಗಾಣಿಗೇರ ತಮ್ಮ ಇಲಾಖಾ ಪ್ರಗತಿ ಮಾಹಿತಿ ಕೊಡುವಾಗ ಪುರಸಭೆ ಇ-ಆಸ್ತಿ ಮಾಡದ ಕಾರಣ ಪಟ್ಟಣ ವ್ಯಾಪ್ತಿಯ ಅಸ್ತಿ ಖರೀದಿ ಬಹಳೇ ವಿಳಂಬವಾಗುತ್ತಿವೆ. ತಿಂಗಳಿಗೆ ಕೇವಲ 1 ಇ- ಆಸ್ತಿ ಖರೀದಿಗೆ ಬರುತ್ತಿದೆ. ಗ್ರಾಮೀಣ ಪ್ರದೇಶದ ಆಸ್ತಿ ಖರೀದಿಯಲ್ಲಿ ಯಾವುದೇ ತೊಂದರೆಯಿಲ್ಲ ಎಂದು ಆರೋಪಿಸಿದಾಗ ಮತ್ತೇ ಲೋಕಾಯುಕ್ತ ಅಧಿಕಾರಿಗಳು ಪುರಸಭೆ ಅಧಿಕಾರಿ ಮೇಲೆ ಗರಂ ಆಗಿ ಏಕೆ ಹೀಗೆ ಮಾಡುತ್ತಿದ್ದಿರಿ? ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲವೇ? ಅದಷ್ಟು ಬೇಗ ಇ- ಆಸ್ತಿ ಪತ್ರ ನೀಡುವ ವ್ಯವಸ್ಥೆ ಮಾಡಿರಿ. ಪ್ರತಿ ವಾರ್ಡ್‌ಗಳ ಸ್ವಚ್ಛತೆ, ಕುಡಿಯುವ ನೀರು, ರಸ್ತೆ, ರಸ್ತೆ ದೀಪದ ವ್ಯವಸ್ಥೆ ಮಾಡಿಸಿದ ಬಗ್ಗೆ ಕೇಳಿದರು.ಪಿಡಬ್ಲೂ ಡಿ ಇಲಾಖೆಯ ಮಕಾನದಾರ ತಮ್ಮ ಇಲಾಖೆಯ ಮಾಹಿತಿ ನೀಡುವಾಗ ಗುಳೇದಗುಡ್ಡ ಪಟ್ಟಣದ ಹಾಯ್ದು ಹೋಗುವ ಹೆದ್ದಾರಿ ಕಾಮಗಾರಿ ಸರಿಯಾಗಿ ಆಗಿಲ್ಲ. ಪವಾರ ಕ್ರಾಸ್ ಹತ್ತಿರ ರಸ್ತೆ ಬಹಳ ಇಕ್ಕಟ್ಟಾಗಿದೆ. ಎನಿದು ಹೆದ್ದಾರಿ ಕಾಮಗಾರಿ ಎಂದು ತರಾಟೆಗೆ ತೆಗೆದುಕೊಂಡಾಗ ಮಕಾನದಾರ ಸಾರ್ವಜನಿಕರು ರಸ್ತೆ ಅಗಲೀಕರಣಕ್ಕೆ ಸಹಕರಿಸಲಿಲ್ಲವೆಂದು ಹೇಳಿ ಜಾರಿಕೊಂಡರು. ಉಳಿದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.ಎಲ್ಲ ಇಲಾಖೆಗಳಿಗೆ ಮಾಹಿತಿ ಹಕ್ಕು ಅಡಿಯಲ್ಲಿ ಸಾರ್ವಜನಿಕರಿಂದ ಬಂದ ಅರ್ಜಿಗಳ ವಿಲೇವಾರಿ ಹಾಗೂ ಸಕಾಲದಲ್ಲಿ ಬಂದ ಅರ್ಜಿಗಳ ವಿಲೇವಾರಿ ಮಾಡಿದ ಬಗ್ಗೆ ಮಾಹಿತಿ ಪಡೆದರು. ಸಭೆಯಲ್ಲಿ ಲೋಕಾಯುಕ್ತ ಅಧಿಕಾರಿಗಳೊಂದಿಗೆ ತಹಸೀಲ್ದಾರ್‌ ಮಂಗಳಾ.ಎಂ, ವಿಶೇಷ ತಹಸೀಲ್ದಾರ್‌ ಮಹೇಶ ಗಸ್ತೆ ಹಾಗೂ ಕೆಲವು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಸರ್ಕಾರಿ ಆಸ್ಪತ್ರೆಗೆ ಭೇಟಿ:

ಸಭೆಯ ನಂತದ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯ ರೋಗಿಗಳ ವಾರ್ಡ್‌ಗಳನ್ನು, ಬಾಣಂತಿಯರ ವಾರ್ಡ್‌ಗಳನ್ನು, ಐಇಸಿ ವಿಭಾಗ, ಡಯಾಲೇಸಿಸ್ ವಿಭಾಗ, ಔಷಧಿ ಸಂಗ್ರಹಣಾ ವಿಭಾಗ, ಎಕ್ಸರೇ ವಿಭಾಗ, ಆಸ್ಪತ್ರೆ ನಿರ್ವಹಣಾ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ನೂರು ಹಾಸಿಗೆಯ ತಾಯಿ ಮಗುವಿನ ನೂತನ ಆಸ್ಪತ್ರೆ ಕಟ್ಟಡದ ಕಾಮಗಾರಿ ಸರಿಯಾಗುತ್ತಿಲ್ಲ. ಇಟ್ಟಿಗೆ ಸರಿಯಾಗಿಲ್ಲ. ಕಟ್ಟಡಕ್ಕೆ ನೀರು ಸರಿಯಾಗಿ ಹೊಡೆಯುತ್ತಿಲ್ಲವೆಂದು ಲೋಕಾಯುಕ್ತ ಅಧಿಕಾರಿಗಳು ತಮ್ಮ ಅಸಮಧಾನ ವ್ಯಕ್ತಪಡಿಸಿದರು.ಸರ್ಕಾರಿ ಉರ್ದು ಶಾಲೆಗೆ ಭೇಟಿ:

ಪಟ್ಟಣದ ಪಕ್ಕದ ಕೋಟೆಕಲ್ ಗ್ರಾಮದ ಉರ್ದು ಪ್ರಾಥಮಿಕ ಶಾಲೆಗೆ ಭೇಟಿ ಕೊಟ್ಟಾಗ ಶಾಲೆ ಬೀಗ ಹಾಕಲಾಗಿತ್ತು. ಗುರುಗಳಿಗೆ ಫೋನ್ ಮಾಡಿ ಕರೆಯಿಸಿಕೊಂಡ ಘಟನೆ ನಡೆಯಿತು. ಶಾಲೆಯಲ್ಲಿ ಮಕ್ಕಳೂ ಇರಲಿಲ್ಲ. ನಂತರ ಎರಡು ಮಕ್ಕಳನ್ನು ತಂದ ಘಟನೆ ನಡೆಯಿತು.

ಲೋಕಾಯುಕ್ತ ಅಧಿಕಾರಿಗಳ ತಂಡದಲ್ಲಿ ಸತೀಶ ಚಿಟಗುಬ್ಬಿ, ಡಿಎಸ್ಪಿ ಸಿದ್ದೇಶ್ವರ, ಬಿ.ಬಿ.ಲಮಾಣಿ, ಬಿ.ಎ.ಬಿರಾದಾರ, ಬಸವರಾಜ ಮುಕಾರ್ತಿಹಾಳ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!