ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಪರಮ ಗುರಿ: ಶಾಸಕ ಕೆ.ಎಂ.ಉದಯ್

KannadaprabhaNewsNetwork | Published : Jan 8, 2025 12:16 AM

ಸಾರಾಂಶ

ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳ ಬಗ್ಗೆ ಗುತ್ತಿಗೆದಾರರಿಂದ ಯಾವುದೇ ಕಮಿಷನ್ ವ್ಯವಹಾರ ನಡೆಸುತ್ತಿಲ್ಲ. ಇಂತಹ ಕೆಲಸಗಳು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ ಕರಗತವಾಗಿದೆ. ಮದ್ದೂರು ಪಟ್ಟಣದಲ್ಲಿ ಪುರಸಭೆ ವತಿಯಿಂದ ಕೈಗೊಂಡಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಮುಂದಿನ ಎರಡು ತಿಂಗಳುಗಳಲ್ಲಿ ಪೂರ್ಣಗೊಳ್ಳಲಿವೆ.

ಕನ್ನಡಪ್ರಭ ವಾರ್ತೆ ಮದ್ದೂರು

ಕಾಂಗ್ರೆಸ್ ಸರ್ಕಾರ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಶೇ.60ರಷ್ಟು ಕಮಿಷನ್ ಪಡೆಯುತ್ತಿದೆ ಎಂದು ಹೇಳಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರುಗಳು ಸಾಚಾಗಳೆ ಎಂದು ಶಾಸಕ ಕೆ.ಎಂ.ಉದಯ್ ಲೇವಡಿ ಮಾಡಿದರು.

ಪಟ್ಟಣದ ಲೀಲಾವತಿ ಬಡಾವಣೆಯಲ್ಲಿ 2024, 25ನೇ ಹಣಕಾಸು ಮುಕ್ತ ಅನುದಾನ ಯೋಜನೆ ಅಡಿ ವಾರ್ಡ್ 1 ರಿಂದ 23ನೇ ವಾರ್ಡ್ ವರೆಗೆ 49 ಲಕ್ಷ ರು. ವೆಚ್ಚದಲ್ಲಿ ರಸ್ತೆ, ಚರಂಡಿ , ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ಸರ್ಕಾರ ಶೇ.60ರಷ್ಟು ಕಮಿಷನ್ ಎಂದು ಟೀಕೆಸಿರುವ ಕುಮಾರಸ್ವಾಮಿ ಅವರಿಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರರಿಂದ ಶೇ.60ರಷ್ಟು ಕಮಿಷನ್ ಪಡೆದಿರುವುದು ಗೊತ್ತಿಲ್ಲವೇ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಮಾಡಿ ಯುವಕರಿಗೆ ಉದ್ಯೋಗ ನೀಡಲಿ ಎಂದು ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ. ಆದರೆ, ಕುಮಾರಸ್ವಾಮಿಯವರು ಸಚಿವ ಸ್ಥಾನದ ಎಲ್ಲಾ ಕೆಲಸಗಳನ್ನು ಬಿಟ್ಟು ಕಾಂಗ್ರೆಸ್ ನಾಯಕರ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ, ಇದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.

ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳ ಬಗ್ಗೆ ಗುತ್ತಿಗೆದಾರರಿಂದ ಯಾವುದೇ ಕಮಿಷನ್ ವ್ಯವಹಾರ ನಡೆಸುತ್ತಿಲ್ಲ. ಇಂತಹ ಕೆಲಸಗಳು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ ಕರಗತವಾಗಿದೆ ಎಂದು ಕಿಡಿಕಾರಿದರು.

ಮದ್ದೂರು ಪಟ್ಟಣದಲ್ಲಿ ಪುರಸಭೆ ವತಿಯಿಂದ ಕೈಗೊಂಡಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಮುಂದಿನ ಎರಡು ತಿಂಗಳುಗಳಲ್ಲಿ ಪೂರ್ಣಗೊಳ್ಳಲಿವೆ. ಪಟ್ಟಣವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ನನ್ನ ಪರಮ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ದಿಂದ ವಿಶೇಷ ಅನುದಾನ ತಂದು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಪುರಸಭಾಧ್ಯಕ್ಷ ಕೋಕಿಲ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದರಾಜು, ಸದಸ್ಯರಾದ ಎಂ.ಬಿ.ಸಚಿನ್, ವನಿತಾ, ಪ್ರಮೀಳಾ, ಕಮಲಾನಾಥ್, ಬಸವರಾಜು, ಲತಾ ರಾಮು, ಪುರಸಭೆ ಮುಖ್ಯ ಅಧಿಕಾರಿ ಮೀನಾಕ್ಷಿ ಇದ್ದರು.

Share this article