ಅತ್ಯಾಧುನಿಕ ಸಿ ಸಿ ಕ್ಯಾಮೆರಾದಿಂದ ಅಪರಾಧಿಗಳ ಪತ್ತೆಸಾಧ್ಯ: ಟಿ.ಡಿ.ರಾಜೇಗೌಡ

KannadaprabhaNewsNetwork |  
Published : Nov 29, 2025, 12:15 AM IST
 ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಶಂಕರಪುರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಚೆಕ್ ಪೋಸ್ಟ್ ಕಚೇರಿಯನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಚೆಕ್ ಫೋಸ್ಟ್ ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಿಸಿ ಕ್ಯಾಮೆರಾ ಅಳವಡಿಸುವುದರಿಂದ ಅಪರಾಧ ಮಾಡಿದವರ ಪತ್ತೆ ಹಾಗೂ ಅಪರಾಧಗಳತಡೆಗಟ್ಟಲು ಸಹಾಯಕವಾಗಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

- ಶಂಕರಪುರದಲ್ಲಿ ನೂತನವಾಗಿ ನಿರ್ಮಾಣಗೊಂಡ ಪೊಲೀಸ್ ಚೆಕ್ ಪೋಸ್ಟ್ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಚೆಕ್ ಫೋಸ್ಟ್ ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಿಸಿ ಕ್ಯಾಮೆರಾ ಅಳವಡಿಸುವುದರಿಂದ ಅಪರಾಧ ಮಾಡಿದವರ ಪತ್ತೆ ಹಾಗೂ ಅಪರಾಧಗಳತಡೆಗಟ್ಟಲು ಸಹಾಯಕವಾಗಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಬುಧವಾರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಕರಪುರದಲ್ಲಿ ಗ್ರಾಪಂ, ಜನಪ್ರತಿನಿಧಿಗಳು ಹಾಗೂ ದಾನಿಗಳ ನೆರವಿನಿಂದ ಪೊಲೀಸ್ ಇಲಾಖೆ ನಿರ್ಮಿಸಿರುವ ನೂತನ ಚೆಕ್ ಫೋಸ್ಟ್ ಕಚೇರಿ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪೊಲೀಸರಿಗೆ ಅನೇಕ ಗಂಭೀರ ಅಪರಾಧ ಪ್ರಕರಣ ಪತ್ತೆ ಹಚ್ಚಲು ತಂತ್ರಜ್ಞಾನ ಸಹಕಾರಿಯಾಗಿದೆ. ಇಚ್ಛಾಶಕ್ತಿ, ಬದ್ಧತೆಯಿದ್ದಲ್ಲಿ ಮಾತ್ರ ಇಂತಹ ಕಾರ್ಯಕ್ರಮ ಮಾಡಲು ಸಾಧ್ಯ ಎಂದರು.

ಎಲ್ಲವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲ. ದಾನಿಗಳ ನೆರವು ಅವಶ್ಯಕ. ಮಾನವ ಪ್ರಾಣಿ ಸಂಘರ್ಷ ತಡೆಗಟ್ಟುವಲ್ಲಿ ಅರಣ್ಯ ಇಲಾಖೆಗೆ ಡ್ರೋನ್‌ ಕ್ಯಾಮೆರಾ ವಾಹನ ನೀಡಲಾಗಿದೆ. ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಸಿಆರ್ ಎಸ್ ನಿಧಿಯಿಂದ ಪೊಲೀಸ್ ಇಲಾಖೆಗೆ ಎರಡು ಹೊಸ ಜೀಪ್ ನೀಡಲಾಗಿದೆ. ಉತ್ತಮ ಕಾರ್ಯಕ್ಕೆ ಎಲ್ಲಾ ರೀತಿ ಸಹಕಾರ ನೀಡಲಾಗುವುದು. ಕೊಪ್ಪದಲ್ಲಿ ಮಾಜಿ ಸಚಿವ ಎಚ್.ಜಿ.ಗೋವಿಂದೇಗೌಡ ಮನೆಯ ಕಳ್ಳತನ ಪ್ರಕರಣ ಬೇಧಿಸಿರುವುದು ಹಾಗೂ ನರಸಿಂಹರಾಜಪುರದಲ್ಲಿ ರಬ್ಬರ್ ಅಂಗಡಿ ಕಳ್ಳತನ ಪ್ರಕರಣದ ಆರೋಪಿಗಳ ಶೀಘ್ರ ಬಂಧನಕ್ಕೆ ಪೊಲೀಸರಿಗೆ ಅಭಿನಂದಿಸುತ್ತೇನೆ ಎಂದರು.

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಿರಂಜನಗೌಡ ಮಾತನಾಡಿ, ತಾಲೂಕಿನ ಗಡಿಭಾಗ ಶಂಕರಪುರದಲ್ಲಿ ಹಿಂದಿನಿಂದಲೂ ಚೆಕ್ ಫೋಸ್ಟ್ ಇತ್ತು. ಆದರೆ ಬಸ್ ನಿಲ್ದಾಣದಲ್ಲಿಯೇ ಸಿಬ್ಬಂದಿ ಇರಬೇಕಾಗಿತ್ತು. ಮಳೆ, ಚಳಿಗಾಲ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಯಾಗುತ್ತಿತ್ತು. ಸಿಬ್ಬಂದಿ ವಾಸ್ತವ್ಯ ಹೂಡಲು ಕಷ್ಟವಾಗಿತ್ತು. ಶಾಶ್ವತ ಚೆಕ್ ಫೋಸ್ಟ್ ನಿರ್ಮಿಸಲು ಮುತ್ತಿನಕೊಪ್ಪ ಗ್ರಾಪಂಗೆ ಪ್ರಸ್ತಾಪ ಸಲ್ಲಿಸಿದಾಗ ಎಲ್ಲರೂ ಸಹಕಾರ ನೀಡಿದ್ದಾರೆ. ಗ್ರಾಪಂ ಮತ್ತು ದಾನಿಗಳ ಸಹಕಾರದಿಂದ ₹7 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಚೆಕ್ ಫೋಸ್ಟ್ ನಿರ್ಮಿಸಲಾಗಿದೆ.

ನರಸಿಂಹರಾಜಪುರ ತಾಲೂಕಿನ ವ್ಯಾಪ್ತಿಯಲ್ಲಿ ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ ಭಾಗದಿಂದ ಬಂದು ಅಪರಾಧ ಕೃತ್ಯ ಎಸಗಿ ಹೋಗುವ ಪ್ರಕರಣಗಳು ಹೆಚ್ಚಾಗಿವೆ. ಇತ್ತೀಚೆಗೆ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರ ಅಪಹರಣ, ಕೋಳಿ ಸಾಗಾಣಿಕೆ ಮಾಡುವ ವಾಹನ ತಡೆಗಟ್ಟಿ ಹಣ ದರೋಡೆಯಂತಹ ಕೃತ್ಯ ನಡೆಸಲು ವಾಹನಗಳಲ್ಲಿ ಬಂದಾಗ ವಾಹನದ ನಂಬರ್ ಪ್ಲೆಟ್ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗುತ್ತಿರಲಿಲ್ಲ. ಹಾಗಾಗಿ ಕೆನರಾ ಬ್ಯಾಂಕ್ ಸಹಕಾರದಿಂದ ₹1.50 ಲಕ್ಷ ವೆಚ್ಚದ ಅತ್ಯಾಧುನಿಕ ತಂತ್ರಜ್ಞಾನದ ಅಟೋಮೆಟಿಕ್ ನಂಬರ್ ಪ್ಲೇಟ್ ಡಿಟೆಕ್ಟರ್ ಸಿಸಿ ಕ್ಯಾಮೆರಾವನ್ನು ಈ ಚೆಕ್ ಫೋಸ್ಟ್ ನಲ್ಲಿ ಅಳವಡಿಸಲಾಗಿದೆ. ದಾನಿಗಳ ಸಹಾಯದಿಂದ ಬಿ.ಎಚ್.ಕೈಮರ, ಹೊಡೆಯಾಲ ಮತ್ತು ಮಂಡಗದ್ದೆ ಸರ್ಕಲ್ ನಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.

ಮುತ್ತಿನಕೊಪ್ಪ ಕೆನರಾ ಬ್ಯಾಂಕ್ ವ್ಯವಸ್ಥಾಪಕ ರವಿ,ಮುತ್ತಿನಕೊಪ್ಪ ಜನಜಾಗೃತಿ ವೇದಿಕೆ ಅಧ್ಯಕ್ಷ ಸಿ.ಎಲ್.ಮನೋಹರ್ ಮಾತನಾಡಿದರು.ಪೊಲೀಸ್ ಇನ್ಸ್ ಪೆಕ್ಟರ್ ಗುರುದತ್ತ್ ಕಾಮಂತ್ ಮಾತನಾಡಿದರು. ಸಭೆಯಲ್ಲಿ ತಹಸೀಲ್ದಾರ್ ಡಾ. ನೂರುಲ್ ಹುದಾ, ಡಾ.ಸುಬೋದ್, ಮುತ್ತಿನಕೊಪ್ಪ ಗ್ರಾಪಂ ಉಪಾಧ್ಯಕ್ಷ ಎನ್.ಎಸ್.ನರೇಂದ್ರ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಈ.ಸಿ.ಜೋಯಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಮ್ಮ ಮೇಲೆಲ್ಲ ಕೇಸ್‌ ಹಾಕ್ತೀನಿ : ಡಿಕೆ ಸಿಡಿಮಿಡಿ ! - ಪತ್ರಕರ್ತರಿಗೆ ಡಿಸಿಎಂ ಕೈಮುಗಿದಿದ್ದು ಏಕೆ ?
ಎಂದಿಗೂ ಬೆನ್ನಿಗೆ ಚೂರಿ ಹಾಕಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌