ಪುತ್ತೂರು: ಹಿಂದಿನ ಕಾಲದ ವಿದ್ಯಾರ್ಥಿಗಳಿಗೆ ಹಾಗೂ ಪ್ರಸ್ತುತ ಕಾಲಘಟ್ಟದ ವಿದ್ಯಾರ್ಥಿಗಳಿಗೆ ಹಲವು ವ್ಯತ್ಯಾಸಗಳಿವೆ. ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯಲು ಹಲವು ಕೊರತೆಗಳಿದ್ದವು. ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ರೀತಿಯ ಅನುಕೂಲತೆಗಳಿದ್ದರೂ ಅದರ ಸದುಪಯೋಗವನ್ನು ಪಡೆದುಕೊಳ್ಳುತ್ತಿಲ್ಲ. ಈ ಕಾಲಘಟ್ಟದ ವಿದ್ಯಾರ್ಥಿಗಳಲ್ಲಿ ಕಾಣಸಿಗುವ ಎರಡು ಬಹುಮುಖ್ಯ ಸಮಸ್ಯೆಗಳೆಂದರೆ ಏಕಾಗ್ರತೆ ಹಾಗೂ ಸೂಕ್ಷ್ಮ ಸಂವೇದನೆಗಳ ಕೊರತೆ. ಇವುಗಳನ್ನು ನಿವಾರಿಸಲು ವಿವಿಧ ಮೌಲ್ಯಯುತ ಸನ್ನಿವೇಶಗಳನ್ನು ಸೃಷ್ಟಿಸುವ ಕರ್ತವ್ಯ ಪ್ರತಿಯೊಬ್ಬ ಶಿಕ್ಷಕರದ್ದು ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅತಿಥಿಯಾದ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜ್‌ನ ನಿವೃತ್ತ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಮಾತನಾಡಿ, ದೇಶಭಕ್ತಿ, ನಾಡಪ್ರೇಮ ಮೊದಲಾದ ಮೌಲ್ಯಯುತ ವಿಚಾರಧಾರೆಗಳತ್ತ ಕೇಂದ್ರೀಕೃತವಾಗಿದ್ದ ನಮ್ಮ ಭಾರತೀಯ ಶಿಕ್ಷಣ ಪದ್ಧತಿಯು ಇಂದು ಆಧುನಿಕ ಪಾಶ್ಚಾತ್ಯ ಶಿಕ್ಷಣ ಪದ್ಧತಿ ಹಾಗೂ ತಂತ್ರಜ್ಞಾನದ ಪ್ರಭಾವಕ್ಕೊಳಗಾಗಿ ನೈತಿಕ ಮೌಲ್ಯಗಳನ್ನು ಕಳೆದುಕೊಂಡಿದೆ. ಮಗುವಿನ ಸರ್ವತೋಮುಖ ಬೆಳವಣಿಗೆಗಾಗಿ ಇಂದು ಶಿಕ್ಷಕರು ಪೋಷಕರ ಸ್ಥಾನವನ್ನು ವಹಿಸುವ ಅಗತ್ಯತೆ ಇದೆ. ನಾವೆಲ್ಲರೂ ಒಪ್ಪಿಕೊಂಡಿರುವ ಹಾಗೂ ಗೌರವಿಸುತ್ತಿರುವ ಗುರುತತ್ವ ಪರಂಪರೆಯನ್ನು ಮುಂದುವರಿಸುವ ಜೊತೆಗೆ ರಾಷ್ಟ್ರ ಶಿಕ್ಷಣದ ಮೂಲಕ ಜವಾಬ್ದಾರಿಯುತ ಯುವ ಜನತೆಯ ನಿರ್ಮಾಣದ ಹೊಣೆಗಾರಿಕೆ ಇಂದಿನ ಶಿಕ್ಷಕರ ಮೇಲಿದೆ ಎಂದರು.ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ನಿರ್ದೇಶಕ ಡಾ.ಕೆ.ಎನ್.ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ನಿರ್ದೇಶಕರು, ವಿವೇಕಾನಂದ ವಿದ್ಯಾವರ್ಧಕ ಸಂಘ ವಿವಿಧ ವಿದ್ಯಾಸಂಸ್ಥೆಗಳ ಹಾಗೂ ಪುತ್ತೂರಿನ ಆಸುಪಾಸಿನ ಶಿಕ್ಷಣ ಸಂಸ್ಥೆಗಳ ಶಿಕ್ಷಕ ವೃಂದದವರು, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ವಿವೇಕಾನಂದ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ. ಸ್ವಾಗತಿಸಿದರು. ಪ್ರಾಂಶುಪಾಲ ದೇವಿಚರಣ್ ರೈ ಎಂ. ವಂದಿಸಿದರು. ಉಪನ್ಯಾಸಕಿ ಹರ್ಷಿತಾ ಪಿ. ಕಾರ್ಯಕ್ರಮ ನಿರೂಪಿಸಿದರು.